ತುಮಕೂರು: ಮಧುಗಿರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥದ ಶಂಕು ಸ್ಥಾಪನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸಿದರು.
ಈ ಬಳಿಕ ಮಾತನಾಡಿದ ಅವರು, ದೇಶದಲ್ಲಿಯೇ ಅತೀ ಹೆಚ್ಚು ಸ್ವಯಂ ಚಾಲಿತ ಚಾಲನಾ ಪಥವನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ 7 ಟ್ರ್ಯಾಕ್ ಚಾಲನೆಯಲ್ಲಿವೆ. ಈ ವರ್ಷ 10 ಟ್ರ್ಯಾಕ್ ಪ್ರಾರಂಭವಾಗಿದೆ. 28 ಟ್ರ್ಯಾಕ್ ಗಳ ಕಾರ್ಯ ಮುಗಿಯುವ ಹಂತದಲ್ಲಿದೆ. ಒಟ್ಟು 45 ಟ್ರ್ಯಾಕ್ ಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು.

ಮಧುಗಿರಿಯಲ್ಲಿ 3.14 ಎಕರೆ ವಿಸ್ತೀರ್ಣ ದಲ್ಲಿ ರೂ.11.50 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಮತ್ತು ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಸಾರಿಗೆ ಬಸ್ ನಿಲ್ದಾಣ ನವೀಕರಣಕ್ಕೆ ಆದ್ಯತೆ ಹಾಗೂ ತಾಲ್ಲೂಕಿಗೆ ಮತ್ತಷ್ಟು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವು ಪಾರದರ್ಶಕತೆಗೆ ನಾಂದಿ ಹಾಡಿದೆ. ಯಾವುದೇ ರೀತಿಯ ಮಾನವ ಹಸ್ತಕ್ಷೇಪವಿಲ್ಲದೆ, ಬಾಹ್ಯ ಒತ್ತಡವಿಲ್ಲದೆ ಪರೀಕ್ಷೆ ನಡೆಸುವುದರಿಂದ ಉತ್ತಮ ಕೌಶಲ್ಯವುಳ್ಳ ಚಾಲನೆಯು ಅಪಘಾತಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ ಎಂದರು.
ಈ ವೇಳೆ ಶಾಸಕ ಕೆ.ಎನ್.ರಾಜಣ್ಣ, ಕೆ ಎಸ್ ಆರ್ ಟಿ ಸಿ ಎಂಡಿ ಅಕ್ರಂ ಪಾಷ, ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತೆ ಗಾಯತ್ರಿದೇವಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಎ.ವಿ. ಪ್ರಸಾದ್ ಹಾಜರಿದ್ದರು.
BREAKING: ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡಿಪಾರು ಆದೇಶ ರದ್ದುಗೊಳಿಸಿದ ಹೈಕೋರ್ಟ್








