ಬೆಂಗಳೂರು: ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ 2023-24ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 80ಕ್ಕೂ ಅಧಿಕ ಅಂಕಪಡೆದ ನೌಕರರ ಮಕ್ಕಳಿಗೆ ಸನ್ಮಾನ ಸಮಾರಂಭವನ್ನು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೈದ್ಯಕೀಯ, ಇಂಜಿನಿಯರಿಂಗ್ ಮಾಡುತ್ತಿರುವ ಮಕ್ಕಳಿಗೆ ಪ್ರತಿ ವರ್ಷ 5 ಸಾವಿರದಿಂದ 50 ಸಾವಿರ ರೂ.ಗಳವರೆಗೂ ಪ್ರೋತ್ಸಾಹಧನ ಹೆಚ್ಚಿಸಿ ನೀಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರಸ್ತುತ ನಿಗಮದಲ್ಲಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಕೊಡುವ ವಿದ್ಯಾರ್ಥಿ ವೇತನ ಈ ಹಿಂದೆ ವರ್ಷಕ್ಕೆ ರೂ 2 ರಿಂದ ರೂ 3 ಲಕ್ಷಗಳವರಗೆ ಮಾತ್ರ ಪಾವತಿಯಾಗುತ್ತಿತ್ತು. ಈಗ ಪ್ರತಿ ವರ್ಷ ರೂ. 1.70 ಯಿಂದ ರೂ.1.87 ಕೋಟಿ ರೂಪಾಯಿಯಷ್ಟು ವಿದ್ಯಾರ್ಥಿ ವೇತನವನ್ನು ಸಿಬ್ಬಂದಿಗಳ ಮಕ್ಕಳಿಗೆ ನೀಡಲಾಗುತ್ತಿದೆ. ಮಕ್ಕಳು ಉತ್ತಮ ವಿದ್ಯೆ ಪಡೆದು ಉನ್ನತ ಹುದ್ದೆಗೇರಬೇಕು ಎಂದು ಕಿವಿಮಾತು ಹೇಳಿದರು.
ನಿಗಮದಲ್ಲಿ ಇಲ್ಲಿಯವರೆಗೂ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಅದರಲ್ಲೂ ನೌಕರನ ಒಂದು ಮಗುವಿಗೆ ಮಾತ್ರ ಪ್ರೋತ್ಸಾಹಧನ ಕೊಡಬೇಕು ಎಂಬ ನಿಯಮವಿತ್ತು. ಆದರೆ, ಅದನ್ನು ಬದಲಿಸಿ ನೌಕರನ ಇಬ್ಬರು ಮಕ್ಕಳಿಗೆ ಕೊಡಬೇಕು. ಅದು ಕೂಡ ಪ್ರತಿವರ್ಷವೂ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕೆ ಎಸ್ ಆರ್ ಟಿ ಸಿಯಲ್ಲಿ ಜಾರಿಗೆ ತಂದಿರುವ ವಿದ್ಯಾರ್ಥಿ ವೇತನ ಯೋಜನೆಯನ್ನು ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಸುಮಾರು 33000 ಸಿಬ್ಬಂದಿಗಳಿಗೂ ಜಾರಿಗೆ ತರಲಾಗಿದೆ. ಈಗಾಗಲೇ 250 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂಬುದನ್ನು ಉಲ್ಲೇಖಿಸಿದರು. ಪ್ರಶಸ್ತಿ ವಿಜೇತ ಮಕ್ಕಳಿಗೆ ಹಾಗೂ ಪೋಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.
ಇನ್ನು ನೌಕರರ ಕುಟುಂಬ ಕ್ಷೇಮಾಭಿವೃದ್ಧಿ ಸಂಘ ಕೂಡ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ಸಂಸ್ಥೆಯ ನೌಕರರ ಮಕ್ಕಳನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಅಂಕಪಡೆದ 80ಕ್ಕೂ ಹೆಚ್ಚು ನೌಕರರ ಮಕ್ಕಳನ್ನು ಶಾಲು ಹೊದಿಸಿ, ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರದ ಜತೆಗೆ ಪ್ರೋತ್ಸಾಹ ಧನದೊಂದಿಗೆ ಸನ್ಮಾನಿಸಲಾಯಿತು.
ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಜಿ.ಟಿ.ಪ್ರಭಾಕರ್ ರೆಡ್ಡಿ, ಮುಖ್ಯ ಕಾರ್ಮಿಕ ಕಲ್ಯಾಣಾಧಿಕಾರಿ ಎಚ್. ದಿವಾಕರ್, ಕೆಎಸ್ಆರ್ಟಿಸಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಟಿ.ಎಸ್.ಲತಾ, ಬೆಂಗಳೂರು ಕೇಂದ್ರೀಯ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಲಕ್ಷ್ಮಣ್, ಸಂಘದ ರಾಜ್ಯಾಧ್ಯಕ್ಷ ಭೈರೇಗೌಡ (ಭೈರಣ್ಣ), ಗೌರವಾಧ್ಯಕ್ಷ ಗೋವಿಂದರಾಜು, ಉಪಾಧ್ಯಕ್ಷ ಪಿ.ಎಂ.ಪ್ರಕಾಶ್, ಕಾರ್ಯಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಪ್ರೇಮ್ ಕುಮಾರ್, ಖಜಾಂಚಿ ಎ.ಸಿ.ಮಂಜಣ್ಣ, ಸಂಘದ ಬಿಎಂಟಿಸಿ ಅಧ್ಯಕ್ಷ ರುದ್ರೇಶ್ ಎಸ್.ನಾಯಕ, ನಿರ್ದೇಶಕರಾದ ರಾಮಲಕ್ಷ್ಮಮ್ಮ, ವಿ.ಜಿ.ವೆಂಕಟರಾಜು, ಮಹದೇವಸ್ವಾಮಿ, ಆನಂದ ಮೈಗೂರು, ಪಿ.ಎಚ್.ತೋಟಯ್ಯ ಹಾಗೂ ಸನ್ಮಾನಿತ ಮಕ್ಕಳ ಪಾಲಕರು ಸೇರಿದಂತೆ ನೌಕರರು ಇದ್ದರು.
‘ಯಜಮಾನಿ’ಯರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗುಡ್ ನ್ಯೂಸ್: ‘ಗೃಹಲಕ್ಷ್ಮೀ ಯೋಜನೆ’ ಎಂದಿಗೂ ನಿಲ್ಲಲ್ಲವೆಂದು ಅಭಯ