ಬೆಂಗಳೂರು: ಬಿಎಂಟಿಸಿಯಲ್ಲಿ ಕರ್ತವ್ಯ ನಿರತರಾಗಿದ್ದಂತ ವೇಳೆಯಲ್ಲೇ ಮೃತರಾದಂತ ಅವಲಂಬಿತರಿಗೆ ಅನುಕಂಪದ ಆಧಾರದ ಅಡಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ನೇಮಕಾತಿ ಪತ್ರವನ್ನು ಇಂದು ವಿತರಣೆ ಮಾಡಿದರು.
ಈ ಕುರಿತಂತೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂ.ಮ.ಸಾ.ಸಂಸ್ಥೆಯಲ್ಲಿ ದಿನಾಂಕ:02.03.2024 ರಂದು ಸನ್ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ರವರ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಮೃತ ನೌಕರರ ಅವಲಂಬಿತರಿಗೆ ಅನುಕಂಪದ ಆಧಾರದಡಿಯಲ್ಲಿ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಯಿತು. ಸಚಿವರು ನೆರೆದಿದ್ದ ಅಭ್ಯರ್ಥಿಗಳು ಮತ್ತು ಕುಟುಂಬದವರಿಗೆ ಶುಭ ಕೋರಿ, ಸಂಸ್ಥೆ ಬಗ್ಗೆ ಹಿತ ನುಡಿಗಳನ್ನು ನುಡಿದರು.
ಸಂಸ್ಥೆಯಲ್ಲಿ ಅನುಕಂಪದ ಆಧಾರದ ಮೇಲೆ ನೌಕರಿಗಾಗಿ ನಿರೀಕ್ಷಣೆಯಲ್ಲಿದ್ದ ಮೃತಾವಲಂಭಿತ ಅಭ್ಯರ್ಥಿಗಳ ಪೈಕಿ ಅರ್ಹತೆಯನುಸಾರ ಹಾಗೂ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಸುಮಾರು 200 ಮೃತಾವಲಂಭಿತರುಗಳನ್ನು ಕಳೆದ ಅಕ್ಟೋಬರ್ ಮತ್ತು ನವೆಂಬರ್-2023ರಲ್ಲಿ ದರ್ಜೆ-3 (ಮೇಲ್ವಿಚಾರಕೇತರ) ಮತ್ತು ದರ್ಜೆ-4ರ ಖಾಲಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಅಲ್ಲದೇ, ಪ್ರಸ್ತುತ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳ ಲಭ್ಯತೆಗನುಗುಣವಾಗಿ ಮೃತಾವಲಂಭಿತರುಗಳನ್ನು ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿ ಕಿರಿಯ ಸಹಾಯಕ ಕಂ ಡೇಟಾ ಎಂಟ್ರಿ ಆಪರೇಟರ್, ದರ್ಜೆ-3 (ಮೇಲ್ವಿಚಾರಕೇತರ) ಹುದ್ದೆಗೆ 50 ಮೃತಾವಲಂಭಿತರುಗಳನ್ನು ನೇಮಕಾತಿ ಪತ್ರವನ್ನು ವಿತರಿಸಲಾಗಿದೆ.
ಮುಂದುವರೆದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ 2500 ನಿರ್ವಾಹಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಗೊಳಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ‘ನಿರ್ವಾಹಕ ಹುದ್ದೆಗೆ ದಿನಾಂಕ:10.03.2024 ರಿಂದ 10.04.2024 ರವರೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ – https://kea.kar.nic.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ಸೂಚಿಸಿರುವ ವಿದ್ಯಾರ್ಹತೆ, ದೈಹಿಕ ದೃಢತೆ, ಷರತ್ತು ಮತ್ತು ಸೂಚನೆಗಳನ್ನು ಸ್ಪಷ್ಟವಾಗಿ ಓದಿ, ಅರ್ಥೈಸಿಕೊಂಡು ಅರ್ಹತೆ ಹೊಂದಿದ ಪಕ್ಷದಲ್ಲಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಲೋಕಸಭಾ ಚುನಾವಣೆ 2024: ಇಂದು ಸಂಜೆ ‘BJP ಅಭ್ಯರ್ಥಿ’ಗಳ ಮೊದಲ ಪಟ್ಟಿ ಬಿಡುಗಡೆ – ವರದಿ | Lok Sabha Elections 2024