ಬೆಂಗಳೂರು: ಮೋದಿ ಅವರು ಮುಖ್ಯಮಂತ್ರಿಯಿಂದ ಪ್ರಧಾನಮಂತ್ರಿಯಾಗಬೇಕು ಎಂದು ತೀರ್ಮಾನ ಮಾಡಿದ ನಂತರ ಕಳೆದ 15 ವರ್ಷಗಳ ಹಿಂದೆ ಬಹಳ ವಿಶಿಷ್ಟವಾದ ಸುಳ್ಳಿನ ಕಾರ್ಖಾನೆ ಆರಂಭಿಸಿದರು. ತಪ್ಪು ಮಾಹಿತಿ, ನಕಲಿ ಮಾಹಿತಿ, ಸುಳ್ಳು ಮಾಹಿತಿ, ಸುಳ್ಳು ಸುದ್ದಿಯ ಕಾರ್ಖಾನೆ ಆರಂಭಿಸಿದರು. ಇದರಲ್ಲಿ ಮೋದಿ ಹಾಗೂ ಅಮಿತ್ ಶಾ ಅವರು ಪಾಲುದಾರರು ಎಂಬುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಾಗ್ಧಾಳಿ ನಡೆಸಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಈ ಕಾರ್ಖಾನೆಗೆ ಕೆಲಸಕ್ಕೆ ಬಾರದ ಅಮಿತ್ ಮಾಳವಿಯಾ ಎಂಬಾತನನ್ನು ಮ್ಯಾನೇಜರ್ ಆಗಿದ್ದಾರೆ. ಈ ಕಾರ್ಖಾನೆ ನಡೆಸಲು ಕೆಲವು ಜೀತದಾಳುಗಳನ್ನು ಇಟ್ಟಿದ್ದಾರೆ. ಹಲವು ರಾಜ್ಯಗಳಲ್ಲಿ ವಕ್ತಾರರು, ಶಾಸಕರು, ಸಂಸದರು ಈ ಕೆಲಸ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಸಂಸದರು ಹಾಗೂ ಬಾಡಿಗೆ ಭಾಷಣಕಾರರನ್ನು ಇಟ್ಟುಕೊಂಡಿದ್ದಾರೆ ಎಂದರು.
ಸುಳ್ಳು ಸುದ್ದಿ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿ ಎಂದು ನಿವೃತ್ತ ನ್ಯಾಯಮೂರ್ತಿ ಹೇಳಿದ್ದರು. ಮುಖ್ಯ ಚುನಾವಣಾ ಆಯುಕ್ತರು ಕೂಡ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಹಣಬಲ, ತೋಳಿನಬಲ ಹಾಗೂ ಸುಳ್ಳುಸುದ್ದಿ ಮಾರಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಮಂತ್ರಿಗಳು ಇದರ ಬಗ್ಗೆ ಚರ್ಚೆ ಮಾಡಿದ್ದಾರೆ. ಆದರೆ ಈ ಸುಳ್ಳಿನ ಕಾರ್ಖಾನೆ ಮಾಲೀಕರು ಅವರೇ ಆಗಿದ್ದಾರೆ. ಇದನ್ನೇ ಒಂದು ಕೈಗಾರಿಕೋದ್ಯಮವನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಹಲವು ಬಾಡಿಗೆ ಭಾಷಣಕಾರರು ದುಡಿಯುತ್ತಿದ್ದಾರೆ.
ನಿನ್ನೆ ಬೆಂಗಳೂರು ಸಂಸದರು ಹಾವೇರಿಯ ರೈತನ ಆಸ್ತಿಯಲ್ಲಿ ವಕ್ಫ್ ಉಲ್ಲೇಖವಾಗಿದ್ದು, ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ನಂತರ ಸರ್ಕಾರ ಸ್ಪಷ್ಟನೆ ನೀಡಿದ ನಂತರ ಅದನ್ನು ಡಿಲೀಟ್ ಮಾಡುತ್ತಾರೆ. ನಂತರ ಅವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಘರ್ಷಣೆಗೆ ಪ್ರೇರಣೆಯಾಗಲಿದೆ ಎಂದು ದೂರು ನೀಡುತ್ತಾರೆ. ಈ ದೂರಿನನ್ವಯ ಪೊಲೀಸರು ತೇಜಸ್ವಿ ಸೂರ್ಯನ ಮೇಲೆ ಎಫ್ಐಆರ್ ದಾಖಲಿಸುತ್ತಾರೆ.
ಇದಕ್ಕೆ ಹೆದರಿಕೊಂಡ ಆ ಪುಟ್ಟ, “ಪ್ರಿಯಾಂಕ್ ಖರ್ಗೆಗೆ ಕೆಲಸ ಇಲ್ಲ, ಎಫ್ಐಆರ್ ಹಾಕಿಸುವುದೇ ಕೆಲಸ” ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾನೆ. ನಾನು ಇದುವರೆಗೂ ಅವರ ಮೇಲೆ, ಅವರ ಶಾಸಕರು, ಸಂಸದರು ಹಾಗೂ ಅವರ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎಫಐಆರ್ ಹಾಕಿಸಿದ್ದೇನೆ ಎಂದು ನೋಡಲಿ. ನನಗೆ ತಪ್ಪು ಮಾಹಿತಿ ಇತ್ತು, ಸುಳ್ಳು ಸುದ್ದಿಯಾದ ಕಾರಣ ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ನೀವೇ ಒಪ್ಪಿಕೊಂಡಿದ್ದೀರಿ. ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸರ್ಕಾರದ ವತಿಯಿಂದ ಪ್ರಕರಣ ದಾಖಲಿಸುತ್ತೇವೆ. ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ನಾನು ಅದನ್ನು ಡಿಲೀಟ್ ಮಾಡಿದ್ದೇನೆ ಎಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ನೀವೊಬ್ಬ ಸಂಸದ. ಬೇರೆ ಸಮಯದಲ್ಲಿ ಹಿಂದೂಗಳ ಸಂರಕ್ಷ ಎಂದು ಹೇಳುವವರು ಈಗ ಯಾಕೆ ಅಳುತ್ತಿದ್ದೀರಿ?
ಇವರು ಹಾಗೂ ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು. ತೇಜಸ್ವಿ ಸೂರ್ಯ ಅವರೇ, ಈ ಬಾರಿ ನಿಮಗೆ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು. ಮಾತೆತ್ತಿದರೆ ಕುಟುಂಬ ರಾಜಕೀಯದ ಬಗ್ಗೆ ಮಾತನಾಡುವ ತೇಜಸ್ವಿ ಸೂರ್ಯ, ತಾವು ಯಾವ ಕುಟುಂಬದವರು ಎಂದು ಹೇಳುವುದಿಲ್ಲ. ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡರ ಬಗ್ಗೆ ಕುಟುಂಬ ರಾಜಕೀಯ ಎನ್ನುವ ಅವರಿಗೆ ವಿಜಯೇಂದ್ರ, ರಾಘವೇಂದ್ರ ಕಾಣುವುದಿಲ್ಲವೇ? ನೀವು ಕುಟುಂಬ ರಾಜಕಾರಣ ಮಾಡುವ ಮುನ್ನ ನನಗೆ ಅವಕಾಶ ನೀಡಿ. ನಾನು ಬಿಜೆಪಿ ನಾಯಕರ ಡಿಎನ್ಎ ಪರೀಕ್ಷೆ ಮಾಡಿಸಿಕೊಡುತ್ತೇನೆ. ನಿಮ್ಮ ತಂದೆ, ತಾಯಿ, ಸಂಬಂಧಿಕರ ಬಗ್ಗೆ ಹೇಳಿಕೊಳ್ಳಲು ಅಷ್ಟೋಂದು ಅಸಹ್ಯವೇ? ನಿಮ್ಮಲ್ಲಿರುವ ಕುಟುಂಬ ರಾಜಕೀಯ ನೋಡಿಕೊಳ್ಳಿ.
ಟ್ವೀಟ್ ಮಾಡುವುದು, ನಂತರ ಡಿಲೀಟ್ ಮಾಡುವುದು ಸಂಸದ ಸೂರ್ಯ ಅವರಿಗೆ ಹವ್ಯಾಸವಾಗಿಬಿಟ್ಟಿದೆ. ಸೂರ್ಯ ಅವರು ಮಹಿಳಾ ಪೀಡಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬಳು ಆರೋಪ ಮಾಡುತ್ತಾರೆ. ಇದರ ಬಗ್ಗೆ ಸುದ್ದಿಯಾಗದಂತೆ 49 ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ನಿರ್ಬಂಧ ಆದೇಶ ತಂದಿದ್ದಾರೆ. ಮೀಟೂ ಸೂರ್ಯ ಅವರು ಈ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ.
ಸನಾತನ ಧರ್ಮ ಕುರಿತು ನೀಡಿದ್ದ ಹೇಳಿಕೆಯನ್ನು ಸೂರ್ಯ ಅವರು ಈ ಹಿಂದೆ ಹಿಂಪಡೆದಿದ್ದರು. ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಸೂರ್ಯ ಅವರು ನಂತರ ಕ್ಷಮೆ ಕೇಳಿದ್ದರು. ಅರಬ್ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅರಬ್ ಸರ್ಕಾರ ಕೂಡ ಎಚ್ಚರಿಕೆ ನೀಡಿತ್ತು. ಇವರು ರಾಷ್ಟ್ರಕ್ಕೆ ಅಪಮಾನ ಮಾಡಿದ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದು ಹಿರೋ ಆಗಲು ಹೋಗಿ ಬಿಜೆಪಿ ನಾಯಕರನ್ನೇ ಸಿಲುಕಿಸಿದ್ದು ತೇಜಸ್ವಿ ಸೂರ್ಯ.
ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರ ರಕ್ಷಣೆ ಮಾಡುತ್ತೇವೆ ಎಂದವರು 2 ಬಾರಿ ಸಂಸದರಾದರೂ ಸಿಬಿಐಗೆ ಪ್ರಕರಣ ಕೊಟ್ಟರೂ ಅದು ಎಲ್ಲಿವರೆಗೆ ಬಂದಿದೆ? ಎಲ್ಲಾ ವಿಚಾರದಲ್ಲೂ ಸಿಬಿಐ ತನಿಖೆ ಆಗ್ರಹಿಸುವ ಸೂರ್ಯ ಅವರು ಕೊಟ್ಟಿರುವ ಪ್ರಕರಣಗಳ ಬಗ್ಗೆ ತನಿಖೆ ಏನಾಗಿದೆ? ಈ ಅವಿವೇಕಿಯು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ದೇಶದ್ರೋಹಿ ಎಂದಿದ್ದು ನಿಮಗೆ ನೆನಪಿದೆಯಾ? ಇದು ಆತನ ಬೌದ್ಧಿಕತೆ. ಬೇಕಾಬಿಟ್ಟಿ ಪ್ರಚೋದನಕಾರಿ ಭಾಷಣ ಮಾಡಿದವರೆಲ್ಲಾ ಬೌದ್ಧಿಕವಾಗಿ ಬೆಳೆದಿದ್ದಾರೆ ಎಂಬುದಲ್ಲ. ಸುಳ್ಳು ಮಾಹಿತಿಯೇ ಅವರ ಬಂಡವಾಳ. ಈತನೊಬ್ಬ ಡಿಲೀಟ್ ರಾಜ. ಈತ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಾನೆ. ಯಾರಾದರೂ ಅದನ್ನು ಗುರುತಿಸಿ ಟೀಕೆ ಮಾಡಿದರೆ ಡಿಲೀಟ್ ಮಾಡುತ್ತಾರೆ.
ಶೋಭಾ ಕರಂದ್ಲಾಜೆ ಅವರದೂ ಇದೇ ಕತೆ. ಸಧ್ಯ ರಾಜ್ಯದಲ್ಲಿ ಲ್ಯಾಂಡ್ ಜಿಹಾದ್ ಎಂದು ಬೊಬ್ಬೆ ಹೊಡೆಯುತ್ತಿರುವ ಇವರ ಹೊಣೆಗಾರಿಕೆ ನಾವು ಅರಿಯಬೇಕು. 2017ರಲ್ಲಿ 19 ವಯಸ್ಸಿನ ಶಿವಕುಮಾರ್ ಉಪ್ಪಾರ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು, ಈತ ಗೋರಕ್ಷನಾಗಿದ್ದು ಹಾಡಹಗಲೇ ಹತ್ಯೆ ಮಾಡಲಾಗಿದೆ ಎಂದು ಶೋಭಾ ಅವರು ಟ್ವೀಟ್ ಮಾಡುತ್ತಾರೆ. ಇದು ಆತ್ಮಹತ್ಯೆ ಎಂದು ಗೊತ್ತಾದ ನಂತರ ಇದನ್ನು ಡಿಲೀಟ್ ಮಾಡುತ್ತದೆ.
ರುದ್ರೇಶ್ ಸಾವಿನ ಪ್ರಕರಣದಲ್ಲಿ ಆಗಿನ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ವಿರುದ್ಧ ಟ್ವೀಟ್ ಮಾಡುತ್ತಾರೆ. ಕಾಂಗ್ರೆಸ್ ಮಾತ್ರವಲ್ಲ ಆರ್ ಎಸ್ಎಸ್ ಕೂಡ ಶೋಭಾ ಅವರ ಹೇಳಿಕೆ ನಿರಾಕರಿಸಿತ್ತು. ಈವರೆಗೂ ಅದರ ಬಗ್ಗೆ ಸಾಕ್ಷ್ಯಗಳಿಲ್ಲ. ಜುಲೈ8, 2017ರಂದು ಆಗಿನ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಜಿಹಾದಿಗಳಿಂದ 23 ಹಿಂದೂಗಳ ಹತ್ಯೆಯಾಗಿದೆ ಎಂದು ಒಂದು ಪಟ್ಟಿ ನೀಡುತ್ತಾರೆ. ಅದರಲ್ಲಿ ಮೂಡಿಬಿದರೆ ಅಶೋಕ್ ಪೂಜಾರಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿರುತ್ತದೆ. ಇದರ ತನಿಖೆ ಮಾಡಿದಾಗ ಆತ ಇನ್ನು ಬದುಕಿರುತ್ತಾನೆ. ರಾಜೂ ಮಡಿಕೇರಿ ಟಿಪ್ಪು ಜಯಂತಿ ಆಚರಣೆ ವೇಳೆ ಹತ್ಯೆ ಮಾಡಲಾಗಿದೆ ಎಂದು ಹೇಳುತ್ತಾರೆ ಆದರೆ ಆಸ್ಪತ್ರೆಯಲ್ಲಿ ಆತ್ಮಹತ್ಯೆ ವರದಿ ಬರುತ್ತದೆ. 2017-18ರಲ್ಲಿ ಪರೇಶ್ ಮೇಸ್ತಾ ಸಾವಿನ ಮೇಲೆ ಕರಾವಳಿ ಭಾಗದಲ್ಲಿ ಚುನಾವಣೆಯನ್ನೇ ಮಾಡುತ್ತಾರೆ. ನಂತರ ಸಿಬಿಐ ಈ ಪ್ರಕರಣ ತನಿಖೆ ನಡೆಸಿ ಇದು ಹತ್ಯೆಯಲ್ಲ, ನೀರಿಗೆ ಬಿದ್ದು ಆಗಿರುವ ಸಾವು ಎಂದು ಹೇಳಿತು.
ಶೋಭಾ ವಿರುದ್ಧ ತಮಿಳುನಾಡುವಿನಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಇವರು ರಾಜ್ಯಮಟ್ಟದಲ್ಲಿ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಕ್ಟ್ ಚೆಕ್ ಗೆ ಅವಕಾಶ ನೀಡಿದ ನಂತರ ಇವರು ಇಂತಹ ಟ್ವೀಟ್ ಗಳನ್ನು ಡಿಲೀಟ್ ಮಾಡುತ್ತಿದ್ದಾರೆ. ಕ್ಷಮೆ ಕೇಳುತ್ತಾರೆ.
ಇವರ ಕಾರ್ಯಾಚರಣೆ ಹೇಗೆ ಎಂದು ನೋಡುವುದಕ್ಕೆ ನಿನ್ನೆಯ ಪ್ರಕರಣವನ್ನೇ ನೋಡಿ, ತೇಜಸ್ವಿ ಸೂರ್ಯ, ವಕ್ಫ್ ಆಸ್ತಿಯಿಂದ ಆತ್ಮಹತ್ಯೆ ಎಂದು ಸುಳ್ಳು ಸುದ್ದಿ ಹರಡಿದರು. ಸರ್ಕಾರ ಸಾಕ್ಷಿ ನೀಡಿದರೆ, ಕ್ಷಮೆ ಕೇಳುವುದಿಲ್ಲ, ಕಾಮೆಂಟ್ ಬಾಕ್ಸ್ ನಲ್ಲಿ ನನಗೆ ತಪ್ಪು ಮಾಹಿತಿ ಬಂದಿದೆ ಎಂದು ಹಾಕುತ್ತಾರೆ. ಮಾಧ್ಯಮಗಳ ಮುಂದೆ ರಾಜಾರೋಷವಾಗಿ ಆರೋಪ ಮಾಡುವ ರೀತಿ ಕ್ಷಮೆ ಯಾಕೆ ಕೇಳುವುದಿಲ್ಲ? ಇವರ ಟ್ವೀಟ್ ಗಳು ಬಿಜೆಪಿ ವಾಟ್ಸಪ್ ಯೂನಿವರ್ಸಿಟಿಯಲ್ಲಿ ಹರಡಲಾಗುತ್ತದೆ. ಇದರಿಂದ ಜನ ಸುಳ್ಳನ್ನೇ ನಂಬುತ್ತಾರೆ.
ನೋಟು ರದ್ಧತಿಗೆ ಇಂದು ವಾರ್ಷಿಕೋತ್ಸವ. ಎಲ್ಲಾ ಕಪ್ಪು ಹಣ ವಾಪಸ್ ಬರುತ್ತದೆ ಇದೊಂದು ಮೋದಿಯ ಮಾಸ್ಟರ್ ಸ್ಟ್ರೋಕ್ ಎಂದು ಪ್ರಚಾರ ಮಾಡಲಾಯಿತು. ನೋಟಲ್ಲಿ ಮೈಕ್ರೋ ಚಿಪ್ ಇದೆ, ನ್ಯಾನೋ ಟೆಕ್ನಾಲಜಿ ಇದೆ ಎಂದು ಪ್ರಚಾರ ಮಾಡಿದರು. ಇದೆಲ್ಲವೂ ಬಾಡಿಗೆ ಭಾಷಣಕಾರರಿಂದ ಆರಂಭವಾಗಿ, ಬಿಜೆಪಿ ನಾಯಕರು ಪ್ರಚಾರ ಮಾಡಿ ಕಾರ್ಯಕರ್ತರನ್ನು ತಲುಪಿ ಸುದ್ದಿಯಾಯಿತು. ಈಗ ಇದರ ಕಥೆ ಏನಾಯ್ತು? ನೋಟು ರದ್ಧತಿ ಮಾಡಿದಾಗ ಎಠಿಎಂ ಕ್ಯೂ ನಲ್ಲಿ ಎಷ್ಟು ಜನ ಸತ್ತರು ಎಂದು ಮಾತನಾಡುವುದಿಲ್ಲ. ಎಷ್ಟು ಉದ್ಯಮ ಮುಚ್ಚಿದವು, ಆತ್ಮಹತ್ಯೆ ನಡೆಯಿತು ಎಂಬುದರ ಲೆಕ್ಕವಿಲ್ಲ.
ಹೀಗಾಗಿ ಸುಳ್ಳು ಸುದ್ದಿ ವಿಚಾರದಲ್ಲಿ ನಾವು ಎಚ್ಚರಿಕೆ ವಹಿಸಬೇಕು. ಮೋದಿಯವರಷ್ಟು ದೊಡ್ಡ ಸುಳ್ಳುಗಾರ ಮೊತ್ತೊಬ್ಬರಿಲ್ಲ. ಅವರ ಸುಲ್ಳು ಪ್ರತಿಪಾದನೆಗೆ ಸುಳ್ಳಿನ ಕಾರ್ಖಾನೆ ಆರಂಭಿಸಲಾಗಿದೆ. ಚುನಾವಣೆ ಬಂದಾಗ ಹೊಸ ಹೊಸ ಪ್ದ ಪ್ರಯೋಗವಾಗುತ್ತದೆ. ಲವ್ ಜಿಹಾದ್, ನಗರ ನಕ್ಸಲರು ಎಂಬ ಪದ ಬಿಟ್ಟು ಈಗ ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರೆ. ಲವ್ ಜಿಹಾದ್ ನಲ್ಲಿ ಎಷ್ಟು ಪ್ರಕರಣ ದಾಖಲಾಗಿದೆ ಎಂದು ಸಂಸದರು ಪ್ರಶ್ನೆ ಕೇಳಿದಾಗ ಕೇಂದ್ರ ಸರ್ಕಾರ ಕೊಟ್ಟ ಉತ್ತರ ಶೂನ್ಯ. ನಮ್ಮ ಕಾನೂನಿನಲ್ಲಿ ಅಂತಹ ಯಾವುದೇ ಪದವಿಲ್ಲ.
ನಂದಿತಾ, ಹರ್ಷಾ, ಪರೇಶ್ ಮೇಸ್ತಾ ಅವರ ಸಾವನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಾರೆ. ಮಹೇಂದ್ರ ಕುಮಾರ್ ಅವರು ಹೇಳಿದಂತೆ ಬಿಜೆಪಿಯವರು ರಕ್ತಪಿಪಾಸುಗಳು. ಕುರ್ಚಿಗಾಗಿ ಅವರು ಯಾರನ್ನು ಬೇಕಾದರೂ ಬಲಿಪಡೆಯುತ್ತಾರೆ. ಈಗ ಹರ್ಷ, ನಂದಿತಾ ಪ್ರಕರಣದ ಬಗ್ಗೆ ಮಾತನಾಡುತ್ತಾರಾ?
ಹಾವೇರಿ ರೈತನ ಹೆಸರಲ್ಲೂ ಈಗ ರಾಜಕೀಯ ಮಾಡುತ್ತಾರೆ. ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರಲ್ಲ. ಅವರು ಈಗಲೇ ಯಾಕೆ ಮಾತನಾಡುತ್ತಿದ್ದಾರೆ? ನಿಮ್ಮ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಟ್ಟಾಗ ಇವರೆಲ್ಲಾ ಬೆಟ್ಟು ಚೀಪುತ್ತಿದ್ದರಾ? ಶಶಿಕಲಾ ಜೊಲ್ಲೆ ಅವರ 2021ರಲ್ಲಿ ನೀಡಿರುವ ಹೇಳಿಕೆಯಲ್ಲಿ, “ಅನ್ವರ್ ಮಾನ್ಪಡಿ ವರದಿ ನೀಡಿದ್ದು, ವರದಿ ನೀಡಿ 9 ವರ್ಷವಾಗಿದ್ದರೂ ಯಾವುದೇ ಕ್ರಮವಾಗಿಲ್ಲ. ಅದಕ್ಕೆ ಅಂದಿನ ಸಿಎಂ ಯಡಿಯೂರಪ್ಪ ಅವರು ಹಾಗೂ ಅವರ ಕುಟುಂಬದವರು ಕಾಂಗ್ರೆಸ್ ನಾಯಕರೊಂದಿಗೆ ಶಾಮೀಲಾಗಿರುವುದೇ ಕಾರಣ ಎಂದು ಅನ್ವರ್ ಮಾನ್ಪಡೆ ಅವರು ಆರೋಪ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಯಡಿಯೂರಪ್ಪ ಅವರ ಕುಟುಂಬ ಎಂದರೆ ಯಾರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ? ಆಗ ತೇಜಸ್ವಿ ಸೂರ್ಯ, ಯತ್ನಾಳ್ ಅವರ ರಕ್ತ ಕುದಿಯಲಿಲ್ಲವೇ? ಆಗ ಯಾರ ಸರ್ಕಾರವಿತ್ತು?
ನಮ್ಮ ಪಕ್ಷ ಮೊದಲ ದಿನದಿಂದಲೂ ಈ ವರದಿಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಹೀಗಾಗಿ ಯಡಿಯೂರಪ್ಪ ಅವರು ಅನ್ವರ್ ಮಾನ್ಪಡೆ ಆರೋಪದ ಬಗ್ಗೆ ಉತ್ತರ ನೀಡಬೇಕು. ಶೋಭಾ ಕರಂದ್ಲಾಜೆ ಅವರು ಸಂಸತ್ತಿನಲ್ಲಿ ವಕ್ಫ್ ಆಸ್ತಿ ಬಗ್ಗೆ ಪ್ರಶ್ನೆ ಕೇಳಿದಾಗ, ಕೇಂದ್ರ ಸರ್ಕಾರವು “ನಾವು ವಕ್ಫ್ ಆಸ್ತಿಯನ್ನು ಜಿಐಎಸ್ ಮ್ಯಾಪಿಂಗ್ ಮಾಡಿ, ಬೌಂಡರಿ ಹಾಕುತ್ತಿದ್ದೇವೆ. ಒತ್ತುವರಿಯಾಗಿರುವ ಜಮೀನು ತೆರವುಗೊಳಿಸಿ ವಕ್ಫ್ ಆಸ್ತಿಯನ್ನು ಸಂರಕ್ಷಣೆ ಮಾಡುತ್ತೇವೆ. ಈ ತಂತ್ರಜ್ಞಾನದ ಬಳಕೆಗಾಗಿ ಪ್ರತಿ ರಾಜ್ಯಕ್ಕೆ 12 ಕೋಟಿಯಂತೆ 350 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು” ಎಂದು ಹೇಳುತ್ತಾರೆ. ಈ ರೀತಿ ಹೇಳಿದಾಗ, ಸಂಸದರಾಗಿ ನೀವು ಕತ್ತೆ ಕಾಯುತ್ತಿದ್ದರೇ?
ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ವಕ್ಫ್ ಆಸ್ತಿ ಬಗ್ಗೆ ಆಡಿರುವ ಮಾತುಗಳನ್ನು ಗಮನಿಸಿರಲಿಲ್ಲವೇ? ಈಗ ಜೆಪಿಸಿ ಸಮಿತಿ ನಾಟಕವಾಡುತ್ತಿದ್ದಾರೆ. ನಿನ್ನೆ ಜೆಪಿಸಿಯು ಬಿಜೆಪಿಯ ಸಮಿತಿಯಾಗಿದೆ. ಜಂಟಿ ಸಂಸದೀಯ ಸಮಿತಿಯ ಕಾರ್ಯವೈಖರಿಗೆ ಅದರದೇ ಆದ ವ್ಯವಸ್ಥೆ ಇದೆ. ಅವರು ಪ್ರವಾಸಿಗರಾಗಿ ರಾಜ್ಯಕ್ಕೆ ಭೇಟಿ ನೀಡಲಿ. ಈ ವಿಚಾರವಾಗಿ ಮಾಹಿತಿ ಕಲೆಹಾಕುವುದಾದರೆ, ಸಮಿತಿಯ ಇತರೆ ಸದಸ್ಯರು ಯಾಕೆ ಬಂದಿಲ್ಲ? ಸಮಿತಿಗೆ ಸಂಬಂಧವಿಲ್ಲದ ಬಿಜೆಪಿ ನಾಯಕರ ಜತೆ ವಿಚಾರಣೆ ನಡೆಸುತ್ತಿರುವುದೇಕೆ?
ಜಿಪಿಸಿ ಮೂಲಕ ಒತ್ತಡ ಹಾಕುವ ಪ್ರಯತ್ನ ನಡೆಸುತ್ತಿದೆ. ಜೆಪಿಸಿಯು ಚುನಾವಣೆಯ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದ್ದಾಗ ಈ ರೀತಿ ಮಾಡುತ್ತಿರುವುದು ರಾಜಕೀಯ ದುರುದ್ದೇಶವಲ್ಲವೇ?
ಮಾಧ್ಯಮಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಮಾಧ್ಯಮ ಹಾಗೂ ಸಂವಹನ ಕಾರ್ಯದರ್ಶಿಗಳಾದ ದೀಪಕ್ ತಿಮ್ಮಯ, ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಮುಖ್ಯಸ್ಥರಾದ ರಮೇಶ್ ಬಾಬು ಅವರು ಉಪಸ್ಥಿತರಿದ್ದರು.
ನಮ್ಮ ವಂಶಕ್ಕೆ ಕಣ್ಣೀರು ಬಳುವಳಿಯಾಗಿ ಬಂದಿದೆ: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ
ಬೆಂಗಳೂರು ಜನತೆ ಗಮನಕ್ಕೆ: ನ.10ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut