ದಕ್ಷಿಣ ಕನ್ನಡ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೋಮವಾರ ಭೇಟಿ ನೀಡಿದರು. ಶ್ರೀ ದೇವಳಕ್ಕೆ ಆಗಮಿಸಿದ ಅವರನ್ನು ದೇವಳದ ಆನೆ ಯಶಸ್ವಿ ತನ್ನ ಸೊಂಡಿಲಿನಿಂದ ಆಶೀರ್ವದಿಸಿತು. ಬಳಿಕ ಸಚಿವರನ್ನು ಮಂಗಳವಾದಯ ಮತ್ತು ಪೂರ್ಣಕುಂಭದೊಂದಿಗೆ ಶ್ರೀ ದೇವಳಕ್ಕೆ ಕರೆದೊಯ್ಯಲಾಯಿತು.
ನಂತರ ಶ್ರೀ ದೇವರ ದರುಶನ ಮಾಡಿದ ಸಚಿವರಿಗೆ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ತದನಂತರ ಹೊಸಳಿಗಮ್ಮನ ದರುಶನ ಮಾಡಿ ಪ್ರಸಾದ ಸ್ವೀಕರಿಸಿದರು.
ಆಶ್ಲೆಷ ಬಲಿ ಪೂಜಾ ಮಂದಿರ ನಿರ್ಮಾಣದ ಆದೇಶ ಪತ್ರ ಹಸ್ತಾಂತರ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಬಳಿಯ ಆದಿ ಸುಬ್ರಹ್ಮಣ್ಯ ರಸ್ತೆಯ ತುಳಸಿತೋಟ ಎಂಬಲ್ಲಿ ದಾನಿಗಳಾದ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರ ವತಿಯಿಂದ ನಿರ್ಮಾಣವಾಗಲಿರುವ ಆಶ್ಲೇಷ ಬಲಿ ಪೂಜಾ ಮಂದಿರದ ನಿರ್ಮಾಣ ಕಾಮಗಾರಿಗೆ ದಾನಿಗಳಿಗೆ ಸಚಿವ ರಾಮಲಿಂಗ ರೆಡ್ಡಿ ಆದೇಶ ಪತ್ರ ಹಸ್ತಾಂತರಿಸಿದರು ಹಾಗೂ ದಾನಿಗಳನ್ನು ಗೌರವಿಸಿದರು.
ಆಶ್ಲೇಷ ಮಂದಿರಕ್ಕೆ ಶಂಕುಸ್ಥಾಪನೆ ಸಮಾರಂಭ ಎಂದು ಪೂಜೆ ಮತ್ತಿತರ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸಲಾಗಿತ್ತು, ಆದರೆ ಆಶ್ಲೇಷ ಬಲಿ ಪೂಜಾ ಮಂದಿರಕ್ಕೆ ಈ ಮೊದಲೇ ಶಂಕುಸ್ಥಾಪನೆ ನೆರವೇರಿಸಲಾಗಿದ್ದರಿಂದ, ಶಂಕುಸ್ಥಾಪನೆ ಕಾರ್ಯಕ್ರಮವನ್ನು ರದ್ದುಗೊಳಿಸಿ, ದಾನಿಗಳಿಗೆ ಆದೇಶ ಪತ್ರ ಹಸ್ತಾಂತರಿಸಿ, ದೇವರ ಪ್ರಸಾದ ನೀಡಿ ಗೌರವಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ, ಶಾಸಕಿ ಭಾಗೀರಥಿ ಮುರುಳ್ಯ, ರಾಜ್ಯ ಮುಜರಾಯಿ ಆಯುಕ್ತ ಡಾ.ಎಂ.ವಿ.ವೆಂಕಟೇಶ್, ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಾಜಿ, ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎಇಒ ಯೇಸುರಾಜು, ಗ್ರಾ.ಪಂ.ಅಧ್ಯಕ್ಷೆ ಸುಜಾತಾ ಕಲ್ಲಾಜೆ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರವಿಶಂಕರ ಶೆಟ್ಟಿ, ಮಲ್ಲಿಕಾ ಪಕ್ಕಳ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ರಘು, ಮಹೇಶ್ ಕುಮಾರ್ ಕೆ.ಎಸ್ ಕರಿಕ್ಕಳ, ಅಶೋಕ್ ನೆಕ್ರಾಜೆ, ಸೌಮ್ಯಾ ಭರತ್, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಅಜಿತ್ ಕುಮಾರ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಪವನ್ ಎಂ.ಡಿ, ಅಚ್ಚುತ್ತ ಗೌಡ ಬಳ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಎಂ.ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
BREAKING: ಶಾಸಕ ಇಕ್ಬಲ್ ಹುಸೇನ್ ಗೆ KPCC ಅಧ್ಯಕ್ಷ ಡಿ.ಕೆ ಶಿವಕುಮಾರ್ ಶೋಕಾಸ್ ನೋಟಿಸ್