ಬೆಂಗಳೂರು : ಮೀಸಲು ಅರಣ್ಯ ಒತ್ತುವರಿ ದೂರು ನನ್ನ ತೇಜೋವಧೆ ಮಾಡುವ ಹುನ್ನಾರವಾಗಿದೆ. ನಾನು ಅಥವಾ ನನ್ನ ಕುಟುಂಬ ಮೀಸಲು ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ. ಈ ಬಗ್ಗೆ ಅರಣ್ಯ ಅಧಿಕಾರಿಗಳು ಸಲ್ಲಿಸಿದ್ದ ಎಫ್.ಓ.ಸಿ ನಂ. 16/2022-23 ನೋಟೀಸನ್ನು ಈಗಾಗಲೇ ಉಚ್ಚನ್ಯಾಯಾಲಯದ ಕಲಬುರ್ಗಿ ಪೀಠ ರದ್ದುಮಾಡಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ರಾಜ್ಯಪಾಲರಿಗೆ ದೂರು ನೀಡಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 1987 ರಲ್ಲಿ ನಾನು ಯಾವುದೇ ಹುದ್ದೆಯಲ್ಲೂ ಇರಲಿಲ್ಲ. ಕೃಷಿಗಾಗಿ ಅಂದಿನ ಕಾಲದಲ್ಲಿ ನನ್ನ ಕುಟುಂಬದಿಂದ ಭೂಮಿಯನ್ನು ಖರೀದಿಸಲಾಗಿತ್ತು. ಭೂಮಿ ಖರೀದಿಯ ಸಂಧರ್ಭದಲ್ಲಿ ಕಂದಾಯ ದಾಖಲೆಗಳು, ಕ್ರಯಪತ್ರಗಳು ಹಾಗೂ ಇನ್ನಿತರೆ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಲಾಗಿತ್ತು. ಪರಿಶೀಲನೆ ನಂತರ ಮೂಲ ಜಮೀನಿನ ಮಾಲೀಕರಿಂದ ಭೂಮಿಯನ್ನು ಖರೀದಿಸಲಾಗಿತ್ತು.
ನಾನು ಇದೇ ಮೊದಲ ಬಾರಿಗೆ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೊದಲ ಬಾರಿ ಶಾಸಕನಾಗಿದ್ದೂ ಕೂಡಾ 1999 ರಲ್ಲಿ. 1987 ರಲ್ಲಿ ಪ್ರಭಾವ ಬೀರಲು ಹೇಗೆ ಸಾಧ್ಯ ಎಂದು ಸಚಿವರು ಪ್ರಶ್ನಿಸಿದರು.
ಮೀಸಲು ಅರಣ್ಯ ಕ್ಲೇಮು – ಉಚ್ಚನ್ಯಾಯಾಲಯದಲ್ಲಿ ನೋಟೀಸ್ ರದ್ದು:
ಕೇವಲ ದೂರಿನಲ್ಲಿ ನೀಡಿರುವ ಸರ್ವೇ ನಂಬರ್‌ಗಳಷ್ಟೇ ಅಲ್ಲದೇ ಸುಮಾರು 1700 ಏಕರೆ ಭೂಮಿಯನ್ನು ಮೀಸಲು ಅರಣ್ಯ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ನಾವು ಖರೀದಿಸಿದ್ದ ಜಮೀನಿನ ಬಗ್ಗೆಯೂ ಅರಣ್ಯ ಅಧಿಕಾರಿಗಳು ಎಫ್.ಓ.ಸಿ ನಂ. 16/2022-23 ನೋಟೀಸ್ ನೀಡಿದ್ದರು. ಈ ನೋಟಿಸ್‌ನ್ನು ಉಚ್ಚ ನ್ಯಾಯಾಲಯದ ಕಲಬುರ್ಗಿ ಪೀಠದಲ್ಲಿ ಪ್ರಶ್ನಿಸಿ ದಾವೆ ಹೂಡಲಾಗಿತ್ತು. ಸಿಆರ್‌ಎಲ್.ಪಿ. ನಂ. 201608/2022 ನಲ್ಲಿ ಅಡಿಯಲ್ಲಿ ನಡೆದ ವಿಚಾರಣೆಯಲ್ಲಿ ಎಫ್.ಓ.ಸಿ ನಂ. 16/2022-23 ನೋಟೀಸ್ ಅನ್ನು ರದ್ದು ಮಾಡಿದೆ.
ಏಪ್ರಿಲ್ 18, 2023 ರಲ್ಲೇ ಉಚ್ಚನ್ಯಾಯಾಲಯ ರದ್ದುಗೊಳಿಸಿರುವ ಪ್ರಕರಣವನ್ನು ಪ್ರಸ್ತಾಪಿಸಿ ಈಗ ರಾಜ್ಯಪಾಲರಿಗೆ ದೂರು ನೀಡಿರುವ ಹಿಂದೆ ರಾಜಕೀಯ ಕುತಂತ್ರ ಸ್ಪಷ್ಟವಾಗಿ ಕಂಡುಬರುತ್ತಿದೆ.
1987 ರಲ್ಲಿ ಮೂಲ ಕ್ರಯಪತ್ರ, ಕಂದಾಯ ಇಲಾಖೆಯ ದಾಖಲಾತಿಗಳು ಹಾಗೂ ಪಟ್ಟ ದಾಖಲಾತಿಯ ಆಧಾರದ ಮೇಲೆ ಕೃಷಿ ಭೂಮಿಯನ್ನು ಖರೀದಿಸಲಾಗಿತ್ತು. ಈ ಬಗ್ಗೆ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸುವಲ್ಲಿ ಹಾಗೂ ಜನಪ್ರತಿನಿಧಿಯಾದ ನಂತರ ಲೋಕಾಯುಕ್ತಕ್ಕೆ ಸಲ್ಲಿಸುವ ಆಸ್ತಿ ದಾಖಲಾತಿಯಲ್ಲಿ ಪ್ರತಿವರ್ಷ ಪತ್ನಿಯ ಹೆಸರಿನಲ್ಲಿ ಇರುವ ಜಮೀನಿನ ಬಗ್ಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ.
ಈ ಮೇಲ್ಕಂಡ ಎಲ್ಲಾ ಅಂಶಗಳನ್ನು ಗಮನಿಸಿದಲ್ಲಿ ಯಾವುದೇ ತಪ್ಪಿಲ್ಲದೇ ಇದ್ದರೂ ನನ್ನ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ.
ಇತ್ತೀಚೆಗೆ ಸಚಿವರುಗಳ ಮೇಲೆ ರಾಜ್ಯಪಾಲರಿಗೆ ದೂರು ನೀಡುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಈ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಚಿವರಾದ ಎನ್ ಎಸ್ ಬೋಸರಾಜು ಪ್ರತಿಕ್ರಿಯಿಸಿದ್ದಾರೆ.
ಈ ಪ್ರಸಿದ್ಧ ‘ಡೊಳ್ಳು ಕಲಾವಿದ’ನಿಗೆ ಸಿಗುವುದೇ ‘ 2024ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ’.!?
‘BMTC ನಿರ್ವಾಹಕರ ಹುದ್ದೆ’ಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ | BMTC Recruitment 2024