ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ದೊಡ್ಡ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕೆಂದು ಮಾಜಿ ಸಚಿವ ಮತ್ತು ಬಿಜೆಪಿ ಮುಖಂಡ ಬಿ.ಶ್ರೀರಾಮುಲು ಅವರು ಆಗ್ರಹಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ನಾಗೇಂದ್ರರ ರಾಜೀನಾಮೆ ಪಡೆಯುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು. ಸಮಗ್ರ ತನಿಖೆ ನಡೆಸಲು ಸಿಬಿಐಗೆ ಒಪ್ಪಿಸಿ; ಎಸ್‍ಐಟಿ ತನಿಖೆ ಬೇಡ ಎಂದೂ ಅವರು ತಿಳಿಸಿದರು.
ಈ ರೀತಿಯ ಹಗರಣ ರಾಜ್ಯದಲ್ಲಿ ಮೊದಲನೆಯದು ಇದ್ದಂತಿದೆ. ನಕಲಿ ಖಾತೆ ಸೃಷ್ಟಿಸಿ ಹಣವನ್ನು ಹೈದರಾಬಾದ್‍ಗೆ ಕಳಿಸಿದ್ದಾರೆ. ಸರಕಾರದ ಹಣ ಈ ರೀತಿ ದುರುಪಯೋಗ ಆಗಿರುವ ಪ್ರಥಮ ಪ್ರಕರಣದಂತಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.
ಇದು ಎಸ್‍ಸಿ, ಎಸ್‍ಟಿ ಜನಾಂಗದ ಹಣ. ಈ ಸಚಿವರು ಮೀಸಲು ಕ್ಷೇತ್ರದಿಂದ ಗೆದ್ದವರು. ಎಸ್‍ಸಿ ಸಮುದಾಯದ ಸಚಿವರಾಗಿ ಅವರ ಜವಾಬ್ದಾರಿ ಏನು? ಅವರು ಪ್ರಮಾಣವಚನಕ್ಕೆ ಬದ್ಧತೆ ಇರುವ ವ್ಯಕ್ತಿ ಆಗಿದ್ದರೆ ಸ್ವಾರ್ಥದ ಸಲುವಾಗಿ ಈ ರೀತಿ ದುರುಪಯೋಗ ಮಾಡುತ್ತಿದ್ದರೇ? ಎಂದರಲ್ಲದೆ, ಈ ಸಚಿವರು ಹೀಗೆ ಮಾಡಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದರು.
ಮಕ್ಕಳ ಸ್ಕಾಲರ್‍ಶಿಪ್, ಪಠ್ಯಪುಸ್ತಕ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಹಣ ದುರುಪಯೋಗ ಆಗಿದೆ ಎಂದರು. ಯಾರಿಗೆ ಈ ಹಣ ವರ್ಗಾವಣೆ ಆಗಿದೆ ಎಂದು ಗೊತ್ತಿಲ್ಲ. ಅವರು ತಕ್ಷಣ ರಾಜೀನಾಮೆ ಕೊಡಲಿ; ಸಿಬಿಐ ತನಿಖೆ ಮಾಡಿಸಲಿ ಎಂದು ಆಗ್ರಹವನ್ನು ಮುಂದಿಟ್ಟರು.
ಹಣ ತೆಲಂಗಾಣಕ್ಕೆ ಹೋಗಿದೆಯೇ? ಮಹಾರಾಷ್ಟ್ರಕ್ಕೆ ಕಳಿಸಿದ್ದಾರಾ ನೋಡೋಣ. ಅಥವಾ ದೆಹಲಿ ಕಡೆ ಹೋಗಿದೆಯೇ ಎಂದು ನೋಡೋಣ ಎಂದು ತಿಳಿಸಿದರು. ಸಿಎಂ ಮೇಲೆ ಕೂಡ ಅನುಮಾನ ಬರುವಂತಾಗಿದೆ. ಎಲ್ಲ ನಿಗಮಗಳಲ್ಲೂ ಹೀಗೆ ಆಗಿದೆಯೇ ಎಂದು ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
‘ವಿಧಾನಸಭೆ ಚುನಾವಣೆ ಮಾದರಿ’ಯಲ್ಲಿ ಈಗಲೂ ‘ಎಕ್ಸಿಟ್ ಪೋಲ್’ ಸುಳ್ಳಾಗಲಿವೆ: ಡಿಸಿಎಂ ‘DKS ಭವಿಷ್ಯ’