ಬೆಂಗಳೂರು: ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರಿಗೆ ಮಾಸಾಶನ ನೀಡಲಾಗುತ್ತಿದ್ದು, ಮಾಸಾಶನ ಹೆಚ್ಚಿಸುವ ಬಗ್ಗೆ ಇಲಾಖೆ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು, ಹಿರಿಯರನ್ನು ಗೌರವಿಸಿ, ಅವರನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.
ಹಿರಿಯರು ಮಾಡಿದ ಸಾಮಾಜಿಕ ಕೊಡುಗೆಗಳನ್ನು ಸ್ಮರಿಸಬೇಕು. ಹಿರಿಯರ ನಾಗರಿಕರನ್ನು ಕೇವಲ ಗೌರವಿಸಲಷ್ಟೇ ಮೀಸಲಿರಿಸಬಾರದು, ಅವರ ಸಾಧನೆಗಳು ಯುವ ಸಮುದಾಯಕ್ಕೆ ಸ್ಪೂರ್ತಿಯಾಗಬೇಕು. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಅದೇ ನಾವು ಸಮಾಜಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ಮನೆಗಳಲ್ಲಿ ಅನುಕೂಲಕರ ವಾತಾವರಣವಿದ್ದರೂ ವೃದ್ಧಾ ಶ್ರಮ ಸೇರುವುದು ಜಾಸ್ತಿಯಾಗುತ್ತಿದೆ. ಏಕೆಂದರೆ, ಮಕ್ಕಳು ವಿದೇಶದಲ್ಲಿ ನೆಲೆಸಿರುತ್ತಾರೆ. ಇದರಿಂದ ಹಿರಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಟ ನಡೆಯುತ್ತಿದೆ. ಇಂಥ ಸಂಸ್ಥೃತಿ ನಿಲ್ಲಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು.
ಅಶಕ್ತ, ದುರ್ಬಲ ವರ್ಗದವರಿಗೆ ಶಕ್ತಿತುಂಬುವ ಕೆಲಸವಾಗಬೇಕು. ಅವಕಾಶಗಳಿಂದ ವಂಚಿತರಾದವರಿಗೆ, ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ಶಕ್ತಿ ತುಂಬುವಂಥ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಸಾಧಕ ಹಿರಿಯ ನಾಗರಿಕರಿಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಗೈದ 6 ಮಂದಿ ಹಾಗೂ ಒಂದು ಸೇವಾ ಸಂಸ್ಥೆಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ 10 ಮಹಿಳೆಯರಿಗೆ ಪೌಷ್ಠಿಕಾಂಶ ಕಿಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ಸಚಿವರಿಗೆ ಶಹಬ್ಬಾಶ್ ಸಿಎಂ ಗಿರಿ
ಮುಖ್ಯಮಂತ್ರಿಗಳ ಭಾಷಣದ ಮಧ್ಯೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಮಾಡುವಂತೆ ಕೇಳಿಕೊಂಡಾಗ, ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಗೃಹಲಕ್ಷ್ಮಿ ಯೋಜನೆಯನ್ನು ಪಟ್ಟುಬಿಡದೆ ಜಾರಿಗೆ ತಂದಿದ್ದೆ ಈ ಹೆಣ್ಣು ಮಗಳು (ಸಚಿವೆ ಲಕ್ಷ್ಮೀ ಹೆಬ್ಬಾಳಕರ್), ಯಾವತ್ತೂ ಅಷ್ಟೆ, ಹಿಡಿದ ಕೆಲಸವನ್ನು ಪಟ್ಟು ಬಿಡದೆ ಮಾಡುತ್ತಾರೆ. ಈ ಮಾಸಾಶನ ಹೆಚ್ಚಳ ಮಾಡಿಸದೆ ಬಿಡುವುದಿಲ್ಲ ಅಂತ ಸಚಿವರ ಕಾರ್ಯವೈಖರಿ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
BREAKING : ಬೆಳಗಾವಿಯಲ್ಲಿ ಹೃದಯ ವಿದ್ರಾವಕ ಘಟನೆ : 17 ತಿಂಗಳ ಮಗುವಿನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ!