ಬೆಳಗಾವಿ: ನಿನ್ನೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಬೈಕ್ ನಲ್ಲಿ ಬಂದಿದ್ದಂತ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಗಾಯಗೊಳಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಾರು ಚಾಲಕ ಬಸವಂತ ಕಡೋಲ್ಕರ್ ಅವರು ಕಾರು ನಿಲ್ಲಿಸಿ ಹೊರಗೆ ನಿಂತಿದ್ದಂತ ಸಂದರ್ಭದಲ್ಲಿ ನಿನ್ನೆ ದುಷ್ಕರ್ಮಿಗಳು ಎದೆ, ಭುಜ ಸೇರಿದಂತೆ ವಿವಿಧೆಡೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದಂತ ಪೊಲೀಸರು ಇಂದು ಪ್ರಕರಣ ಸಂಬಂಧ ಶಿವಯ್ಯ ಪೂಜಾರಿ, ನಿತೇಶ್ ಬಡಿಗೇರ, ಮೌನಪ್ಪ ಹಾಗೂ ಸಂಪತ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಅಂದಹಾಗೇ ಬಸವಂತಗೆ ಚಾಕುವಿನಿಂದ ಇರಿದಂತ ಆರೋಪಿಗಳು ಅವರ ಸ್ನೇಹಿತರೇ ಆಗಿದ್ದರು. ಚಾಕು ಇರಿತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದೀಗ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪೊಲೀಸರು ಪಡೆಯಲಿದ್ದಾರೆ ಎನ್ನಲಾಗುತ್ತಿದೆ.








