ಬೆಂಗಳೂರು : ಬೆಂಗಳೂರು ಗಂಗೇನಹಳ್ಳಿ ಬಡಾವಣೆ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಸರ್ಕಾರಿ ಜಮೀನನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಜಂಟಿಯಾಗಿ ಸತ್ತೋದವರ ಹೆಸರಲ್ಲಿ ಡಿನೋಟಿಫೈ ಮಾಡಿ ಕುಮಾರಸ್ವಾಮಿ ಅವರ ಬಾಮೈದನ ಹೆಸರಲ್ಲಿ ನೋಂದಣಿ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರ ಸ್ವತ್ತನ್ನು ಪೂರ್ವಾಲೋಚನೆ ಮಾಡಿ ತಂತ್ರಗಾರಿಕೆಯಿಂದ ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಸೂಕ್ತ ದಾಖಲೆಗಳ ಸಮೇತ ಆಕ್ರೋಶ ಹೊರಹಾಕಿದರು.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಬೆಂಗಳೂರು ಗಂಗೇನಹಳ್ಳಿ ಗ್ರಾಮದ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು ಬಡಾವಣೆ ನಿರ್ಮಾಣಕ್ಕಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 1976 ರಲ್ಲೇ ಭೂ ಸ್ವಾಧೀನ ಮಾಡಿಕೊಂಡಿದೆ. 1976 ರಲ್ಲಿ ಆರಂಭವಾದ ಭೂ ಸ್ವಾಧೀನ ಪ್ರಕ್ರಿಯೆ 1978ರಲ್ಲಿ ಮುಗಿದಿದೆ. ಆದರೆ, ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ತನಗೆ ಸಂಬಂಧವೇ ಇಲ್ಲದ ಈ ಪ್ರಕರಣದಲ್ಲಿ ಅತ್ಯುತ್ಸಾಹ ತೋರಿದ್ದು ಏಕೆ” ಎಂದು ಕಟುವಾಗಿ ಪ್ರಶ್ನಿಸಿದರು.
ಜಮೀನಿನ ವಾರಸುದಾರರಿಗೆ ಸಂಬಂಧವೇ ಇಲ್ಲದ ದಾರಿಯಲ್ಲಿ ಹೋಗೋ ದಾಸಯ್ಯ, ಯಾರೋ ಬೇನಾಮಿ ವ್ಯಕ್ತಿ ರಾಜಶೇಖರಯ್ಯ ಎಂಬವರು 1978ರಲ್ಲಿ ಭೂ ಸ್ವಾಧೀನಗೊಂಡ ಜಮೀನಿಗೆ ಡಿನೋಟಿಫೈ ಮಾಡಲು 2007ರಲ್ಲಿ ಸಿಎಂ ಕುಮಾರಸ್ವಾಮಿಯವರಿಗೆ ಅರ್ಜಿ ಹಾಕಿದ್ದಾರೆ. ಅಸಲಿಗೆ ರಾಜಶೇಖರಯ್ಯನಿಗೂ ಜಮೀನಿಗೂ ಸಂಬಂಧವೇ ಇಲ್ಲ. ಈತ ಯಾರು ಅಂತ ಈವರೆಗೆ ಗೊತ್ತಿಲ್ಲ. ಆದರೆ, ಈ ಅರ್ಜಿ ಬಂದ ಕೂಡಲೇ ಕುಮಾರಸ್ವಾಮಿಯವರು ಅದೇ ದಿನ ಅಧಿಕಾರಿಗಳಿಗೆ ಪತ್ರ ಬರೆದು ಈ ಅರ್ಜಿ ಮೇಲೆ ಕ್ರಮ ಕೈಗೊಳ್ಳಲು ಸೂಚಿಸುತ್ತಾರೆ.
ಆದರೆ, ಅಧಿಕಾರಿಗಳು “1976ರಲ್ಲಿ ಆರಂಭಗೊಂಡ ಈ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ 1978 ರಲ್ಲಿ ಮುಗಿದಿದೆ. ಹೀಗಾಗಿ ಭೂಸ್ವಾಧೀನ ಮಾಡಲು ಬರಲ್ಲ” ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಆದರೂ, ಈ ವಿಚಾರವನ್ನು ಕೈಬಿಡದ ಕುಮಾರಸ್ವಾಮಿಯವರು ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕಾನೂನು ಪ್ರಕಾರ ಕ್ರಮ ವಹಿಸಿ” ಎಂದು ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ? ಎಂದು ಸಚಿವ ಕೃಷ್ಣ ಬೈರೇಗೌಡ ಕುಟುಕಿದರು.
ಮುಂದುವರೆದು, “ ಇದೇ ಸಂದರ್ಭದಲ್ಲಿ ಈ ಜಮೀನಿನ ಅಸಲಿ ಮಾಲೀಕರಾದ 21 ಜನರ ಜೊತೆ ಕುಮಾರಸ್ವಾಮಿಯವರ ಅತ್ತೆಯವರು ಜಿಪಿಎ (general power of attorney) ಮಾಡಿಕೊಳ್ತಾರೆ. ಇದಾದ ಮೇಲೆ ಅಧಿಕಾರ ಹೊಂದಾಣಿಕೆ ಸಮಸ್ಯೆಯಿಂದ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉರುಳಿ ಕುಮಾರಸ್ವಾಮಿ ರಾಜೀನಾಮೆ ನೀಡ್ತಾರೆ. ಆನಂತರ ಯಡಿಯೂರಪ್ಪನವರು ಸಿಎಂ ಆಗ್ತಾರೆ. ಆದರೆ, ಅಲ್ಲಿಯವರೆಗೆ ಹಾವು ಮುಂಗಸಿಯಂತೆ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೂ ಸಹ ಇದೇ ಅರ್ಜಿ ಮೇಲೆ ಕ್ರಮವಹಿಸಲು ಯಡಿಯೂರಪ್ಪನವರು ಅಧಿಕಾರಿಗಳಿಗೆ ಸೂಚಿಸಿದ್ದು ಏಕೆ ಎಂದೂ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.
ಅಂದಿನ ಸಿಎಂ ಯಡಿಯೂರಪ್ಪನವರ ಸೂಚನೆಗೆ ಸ್ಪಷ್ಟವಾಗಿ ಉತ್ತರಿಸಿದ್ದ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಜ್ಯೋತಿರಾಮಲಿಂಗಂ “ಗಂಗೇನಹಳ್ಳಿ ಬಡಾವಣೆಯ ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ ಜಮೀನನ್ನು16/2 ಅನ್ವಯ ಈಗಾಗಲೇ ಭೂ ಸ್ವಾಧೀನ ಮಾಡಿಕೊಳ್ಳಲಾಗಿದೆ. ಹೀಗಾಗಿ ಡಿನೋಟಿಫೈ ಮಾಡಲು ಸಾಧ್ಯವಿಲ್ಲ” ಎಂದು ಬರೆದಿದ್ದರು. ಆದರೆ, ಯಡಿಯೂರಪ್ಪನವರು ಪ್ರಧಾನ ಕಾರ್ಯದರ್ಶಿಗಳ ಅಭಿಪ್ರಾಯ ಗಾಳಿಗೆ ತೂರಿ ಸಂಬಂಧಿತ ಫೈಲ್ ಮೇಲೆ ಭೂಸ್ವಾಧೀನ ಕೈಬಿಡಲು ಆದೇಶಿಸಿದೆ ಎಂದು ಬರೆದಿದ್ದಾರೆ. 1978 ರಲ್ಲಿ ಭೂ ಸ್ವಾಧೀನ ಆಗಿರುವ ಜಮೀನಿಗೆ 2009-10 ರಲ್ಲಿ ಡಿನೋಟಿಫೈ ಮಾಡಿದ್ದಾರೆ ಎಂದು ದಾಖಲೆಗಳ ಸಮೇತ ಅವರು ಆರೋಪಿಸಿದರು.
ಮುಂದುವರೆದು, ಇದು ಕಾಕತಾಳೀಯ ಅಂತಿರೋ ವ್ಯವಸ್ಥಿತ, ಪ್ರಾಯೋಜಿತ ಆಲೋಚಿತ ಅಕ್ರಮ ಅಂತಿರೋ ದರೋಡೆ ಅಂತಿರೋ, ಒಟ್ಟಾರೆ 1 ಎಕರೆ 11 ಗುಂಟೆ ಜಮೀನನ್ನು ಯಡಿಯೂರಪ್ಪ ಅವರನ್ನು ಉಪಯೋಗಿಸಿಕೊಂಡು ಡಿನೋಟಿಫೈ ಮಾಡಿಕೊಳ್ಳಲಾಗುತ್ತೆ. ಯಾರ ಜಮೀನಿಗೆ ಡಿನೋಟಿಫೈ ಆಗಿತ್ತು ಆತ ಸತ್ತೇ ಹೋಗಿದ್ದ, ಮೃತಪಟ್ಟವನ ಹೆಸರಿಗೆ ಡಿನೋಟಿಫೈ ಮಾಡಿದ್ದಾರೆ. ಸತ್ತೋದವನಿಂದ ಕುಮಾರಸ್ವಾಮಿಯವರ ಅತ್ತೆ ಹೆಸರಿಗೆ ಜಿಪಿಎ (general power of attorney) ಮಾಡಲಾಗಿದೆ. ಅವರಿಂದ ಕುಮಾರಸ್ವಾಮಿ ಅವರ ಬಾಮೈದನಿಗೆ ನೋಂದಣಿ ಮಾಡಿಕೊಡಲಾಗಿದೆ. ನೂರಾರು ಕೋಟಿ ಮೌಲ್ಯ ಇರುವ ಬಡವರಿಗೆ ನಿವೇಶನಗಳನ್ನು ಕಲ್ಪಿಸಬೇಕಾದ ಸ್ವತ್ತು, ಸರ್ಕಾರ ಭೂ ಸ್ವಾಧೀನ ಮಾಡಿ ಮುಗಿಸಿದ್ದ ಜಮೀನು ಹೀಗೆ ಅಕ್ರಮವಾಗಿ ಇಬ್ಬರು ಮಾಜಿ ಸಿಎಂಗಳ ಜಂಟಿ ಕಾರ್ಯಾಚರಣೆಯಿಂದ ಕಬಳಿಕೆಯಾಗಿದೆ.
ಸರ್ಕಾರದ ಆದೇಶದ ಪ್ರತಿಯ ಮೇಲೆ ಅಂದಿನ ಸಿಎಂ ಯಡಿಯೂರಪ್ಪ ಅವರ ಕೈ ಬರಹ ಸ್ಪಷ್ಟವಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆದೇಶಿಸಿದ್ದನ್ನು ಯಡಿಯೂರಪ್ಪ ಡಿನೋಟಿಫೈ ಮಾಡಿದ್ದಾರೆ. ಜಮೀನು ಕುಮಾರಸ್ವಾಮಿ ಅವರ ಬಾಮೈದನ ಪಾಲಾಗಿದೆ. ಈ ಇಬ್ಬರೂ ಸೇರಿ ಬಡವರ ಆಸ್ತಿ ಲಪಟಾಯಿಸಿರುವುದು ಕರ್ನಾಟಕದ ಜನರಗೆ ಮಾಡಿದ ಅನ್ಯಾಯ ಮೋಸ ಅಲ್ವ? ಇದು ವ್ಯವಸ್ಥಿತ ವಂಚನೆ ಹೌದ ಅಲ್ವ? ಇದು ಸಾರ್ವಜನಿಕರ ಸ್ವತ್ತನ್ನು ಪೂರ್ವಾಲೋಚನೆ ಮಾಡಿ ತಂತ್ರಗಾರಿಕೆ ಮಾಡಿ ವ್ಯವಸ್ಥಿತವಾಗಿ ಲೂಟಿ ಮಾಡಿರುವ ಪ್ರಕರಣ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಆಕ್ರೋಶ ಹೊರಹಾಕಿದರು.
ಅಲ್ಲದೆ, ಈ ಪ್ರಕರಣದ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯನ್ನು ವಜಾ ಮಾಡುವಂತೆ ಯಡಿಯೂರಪ್ಪನವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನಲ್ಲಿ ಅಪೀಲು ವಜಾ ಆಗಿ 25,000 ದಂಡ ಹಾಕಿದ್ದಾರೆ. ಹೀಗಾಗಿ ಲೋಕಾಯುಕ್ತ ತತಕ್ಷಣ ಈ ಪ್ರಕರಣದ ತನಿಖೆ ಪೂರೈಸಿ ಈ ಬಗ್ಗೆ ವರದಿ ನೀಡಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
BIG NEWS: ಸತ್ತವರ ಹೆಸರಿನಲ್ಲಿನ ನೂರು ಕೋಟಿ ಆಸ್ತಿಯನ್ನು BSY ಕೈಯಲ್ಲಿ HDK ಡಿನೋಟಿಫೈ: ಕೃಷ್ಣ ಭೈರೇಗೌಡ ಗಂಭೀರ ಆರೋಪ
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಆಹ್ವಾನ: ಈ ಬಾರಿ 69 ಮಂದಿಗೆ ಸಾಧಕರಿಗೆ ಪ್ರಶಸ್ತಿ ಪ್ರದಾನ, ಸೆ.30 ಲಾಸ್ಟ್ ಡೇಟ್