ಬೆಂಗಳೂರು: ರಾಜ್ಯಾದ್ಯಂತ ಪೋಡಿ ದುರಸ್ಥಿ ಅಭಿಯಾನಕ್ಕೆ ಚಾಲನೆ ನೀಡಿದ್ದರೂ ಈ ಕೆಲಸ ನಿರೀಕ್ಷಿತ ವೇಗ ಪಡೆದಿಲ್ಲ ಎಂದು ತಹಶೀಲ್ದಾರರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.
ದಶಕಗಳ ಹಿಂದೆಯೇ ಸರ್ಕಾರ ಬಡ ರೈತರಿಗೆ ಜಮೀನು ಮಂಜೂರು ಮಾಡಿದೆ. ಆದರೆ, ನಾನಾ ಕಾರಣಗಳಿಂದ ಜಮೀನು ದುರಸ್ಥಿಯಾಗದೆ ಲಕ್ಷಾಂತರ ರೈತರು ಸಂಕಷ್ಟಕ್ಕೆ ಒಳಗಾಗಬೇಕಾದ ಸ್ಥಿತಿ ಇದೆ. ರೈತರು ತಮ್ಮ ಪಾಲಿನ ಜಮೀನು ಇದ್ದರೂ ಸಹ ಅದರ ಪೋಡಿಯಾಗದೆ ಸರ್ಕಾರಿ ಕಚೇರಿಗಳಿಗೆ ಸುತ್ತುವುದು ಪರಿಪಾಟವಾಗಿದೆ. ಹೀಗಾಗಿಯೇ ಪೋಡಿ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ನಮೂನೆ 1-5 ಹಾಗೂ 6-10 ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿತ್ತು.
ನಿಯಮದಂತೆ ತಹಶೀಲ್ದಾರರು ನಿಗದಿತ ಜಮೀನಿಗೆ ಸಂಬಂಧಿಸಿದ ನಮೂನೆ 1-5 ದಾಖಲೆಯನ್ನು ಸಿದ್ದಪಡಿಸಿ ಮುಂದಿನ ಹಂತಕ್ಕೆ ನಮೂನೆ 6-10 ಕೆಲಸಕ್ಕಾಗಿ ಭೂ ಮಾಪನ ಇಲಾಖೆಗೆ ಕಡತ ಕಳುಹಿಸಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಈ ಸಂಖ್ಯೆ ಸಮಾಧಾನಕರವಾಗಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಡಿ ದುರಸ್ಥಿ ಕೆಲಸ ಚುರುಕುಗೊಂಡಿರುವ ಬಗ್ಗೆ ಅಧಿಕಾರಿಗಳ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಮುಂದಿನ ತಿಂಗಳು ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸುತ್ತಿದ್ದು, ಅಷ್ಟರಲ್ಲಿ ಕನಿಷ್ಟ 10,000 ಪ್ರಕರಣಗಳು ದುರಸ್ಥಿಗೊಂಡು ರೈತರಿಗೆ ದಾಖಲೆ ನೀಡಬೇಕು” ಎಂದು ತಹಶೀಲ್ದಾರರಿಗೆ ಗುರಿ ನಿಗದಿಪಡಿಸಿದರು.