ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಯುದ್ಧ ಸದೃಶ ಪರಿಸ್ಥಿತಿಯಿಂದಾಗಿ ದೇಶಾದ್ಯಂತ ಉಂಟಾಗಿರುವ ಅಡುಗೆ ಅನಿಲ (LPG) ಅಭಾವದ ಬಿಸಿ ಇದೀಗ ರಾಜ್ಯದ ಅರಣ್ಯಗಳ ಮೇಲೆ ತಟ್ಟುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಇಲಾಖೆಯ ಉನ್ನತ ಅಧಿಕಾರಿಗಳಿಗೆ ತುರ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಅಡುಗೆ ಅನಿಲದ ಕೊರತೆಯಿಂದಾಗಿ ಸೌದೆಯ ಬೇಡಿಕೆ ಹೆಚ್ಚಾಗುತ್ತಿದ್ದು, ಇದನ್ನು ಬಳಸಿಕೊಂಡು ಅರಣ್ಯ ನಾಶವಾಗದಂತೆ ತಡೆಯಲು ಸಚಿವರು ಈ ಕೆಳಗಿನ ಸೂಚನೆಗಳನ್ನು ನೀಡಿದ್ದಾರೆ:
-
ಮರಗಳ ರಕ್ಷಣೆಗೆ ಆದ್ಯತೆ: ಅರಣ್ಯ ಪ್ರದೇಶ, ಅರಣ್ಯದ ಅಂಚು ಮಾತ್ರವಲ್ಲದೆ ಇಲಾಖೆಯ ನೆಡುತೋಪುಗಳು, ಸರ್ಕಾರಿ ಜಮೀನು ಮತ್ತು ರಸ್ತೆ ಬದಿಯ ಮರಗಳಿಗೆ ಕೊಡಲಿ ಪೆಟ್ಟು ಬೀಳುವ ಅಪಾಯವಿದೆ. ಇದನ್ನು ತಡೆಯಲು ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು.
-
ಗಸ್ತು ಹೆಚ್ಚಳ: ಇಲಾಖೆಯ ಎಲ್ಲಾ ವೃತ್ತ ಮತ್ತು ವಲಯಗಳಲ್ಲಿ ತಕ್ಷಣವೇ ಸೂಕ್ತ ಗಸ್ತು ಹಾಗೂ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಅಕ್ರಮ ಮರ ಕಡಿತಕ್ಕೆ ಅವಕಾಶ ನೀಡಬಾರದು.
-
ಅಧಿಕಾರಿಗಳಿಗೆ ಎಚ್ಚರಿಕೆ: ಒಂದು ವೇಳೆ ಅರಣ್ಯ ಅಥವಾ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮರ ಕಡಿಯುವ ಘಟನೆಗಳು ಸಂಭವಿಸಿದರೆ, ಅದಕ್ಕೆ ನೇರವಾಗಿ ಸಂಬಂಧಪಟ್ಟ ವಲಯ ಅರಣ್ಯಾಧಿಕಾರಿ (RFO) ಮತ್ತು ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಹಿನ್ನೆಲೆ:
ಮಧ್ಯಪ್ರಾಚ್ಯದ ಸಂಘರ್ಷದಿಂದಾಗಿ ಹೋಟೆಲ್, ರೆಸಾರ್ಟ್ ಮತ್ತು ಹೋಂ ಸ್ಟೇಗಳಿಗೆ ವಾಣಿಜ್ಯ ಅನಿಲ ಸಿಲಿಂಡರ್ ಸಿಗುತ್ತಿಲ್ಲ. ಗೃಹ ಬಳಕೆ ಸಿಲಿಂಡರ್ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗುತ್ತಿರುವುದರಿಂದ ಸೌದೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಪರಿಸ್ಥಿತಿಯ ಲಾಭ ಪಡೆದು ಅರಣ್ಯ ಸಂಪತ್ತಿಗೆ ಹಾನಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.
ಈ ಕುರಿತು ಸಚಿವರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ಲಿಖಿತ ಪತ್ರದ ಮೂಲಕ ನಿರ್ದೇಶನ ನೀಡಿದ್ದಾರೆ.
ಒಟ್ಟಾರೆಯಾಗಿ ಗ್ಯಾಸ್ ಖಾಲಿ ಆಗಿದೆ ಅಂತ ಮರಗಳನ್ನು ಕಡಿದು ಸೌಧೆಯನ್ನು ಬಳಸಿಕೊಂಡು ಅಡುಗೆ ಮಾಡೋದಕ್ಕೆ ಹೋದ್ರೆ ಅಂತವರ ವಿರುದ್ಧ ಕಾನೂನು ಕ್ರಮ ಫಿಕ್ಸ್ ಆಗಿದೆ. ಜೊತೆ ಜೊತೆಗೆ ಅರಣ್ಯಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗೋದು ಗ್ಯಾರಂಟಿ ಆದಂತೆ ಆಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
BREAKING: ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅವಕಾಶ ನೀಡಲ್ಲ: ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ
ರಾಜ್ಯದ ವಿವಿಧ ಇಲಾಖೆಗಳಲ್ಲಿ 56,432 ಹುದ್ದೆಗಳ ಭರ್ತಿಗೆ ಸರ್ಕಾರ ನಿರ್ಧಾರ








