ಬೀದರ್: ಕಲ್ಯಾಣ ಕರ್ನಾಟಕದ ಎಲ್ಲ ಐದು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿರುವ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ, ಕ.ಕ. ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.
ಚುನಾವಣೆ ಫಲಿತಾಂಶದ ಬಳಿಕ ಪ್ರತಿಕ್ರಿಯೆ ನೀಡಿರುವ ಅವರು, ರಾಜ್ಯದಿಂದ ಜಯ ಸಾಧಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದ್ದಾರೆ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಂದೂಕಾಲು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ನೀಡಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸಿರುವ ಅವರು, ಸಾಗರ್ ಖಂಡ್ರೆ ಅವರನ್ನು 18ನೇ ಲೋಕಸಭೆಯಲ್ಲಿ ಅತ್ಯಂತ ಕಿರಿಯ ಸಂಸತ್ ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗುವಂತೆ ಪ್ರಚಂಡ ಬಹುಮತದಿಂದ ಗೆಲ್ಲಿಸಿದ ಎಲ್ಲ ಮತದಾರರಿಗೆ ಅದರಲ್ಲೂ ಮಾತೆಯರಿಗೆ, ಸೋದರಿಯರಿಗೆ ಮತ್ತು ಯುವ ಮತದಾರರಿಗೆ ನಾನು ತುಂಬು ಹೃದಯದ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಭುತ್ವದ ಮಹಾ ಹಬ್ಬ ಸಾರ್ವತ್ರಿಕ ಚುನಾವಣೆ ಯಶಸ್ವಿಯಾಗಿ ಪೂರ್ಣವಾಗಲು ಸಹಕರಿಸಿದ ರಾಜ್ಯದ ಎಲ್ಲ ಮತದಾರರಿಗೆ, ಚುನಾವಣಾ ಆಯೋಗಕ್ಕೆ, ಚುನಾವಣಾ ಕಾರ್ಯದಲ್ಲಿ ನಿರತರಾದ ಎಲ್ಲರಿಗೂ ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಧನ್ಯವಾದ ಮತ್ತು ಅಭಿನಂದನೆ ಸಲ್ಲಿಸುವುದಾಗಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.