ಬೆಂಗಳೂರು: ಆರೋಗ್ಯವಂತ ನಾಗರಿಕರಿಂದ ಮಾತ್ರವೇ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ, ಹೀಗಾಗಿ ಪ್ರತಿಯೊಬ್ಬರೂ ತಮ್ಮ ಯೋಗಕ್ಷೇಮಕ್ಕೆ ಆದ್ಯತೆ ನೀಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಎಚ್.ಡಿ.ಎಫ್.ಸಿ. ಜನರಲ್ ಇನ್ಷೂರೆನ್ಸ್ ಮತ್ತು ಆಯುಷ್ ಟಿವಿ ಬೆಂಗಳೂರಿನಲ್ಲಿಂದು ಆಯೋಜಿಸಿದ್ದ ಜಾಗತಿಕ ಯೋಗಕ್ಷಮ ಸಂಗಮ ವಾಕಥಾನ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಯಲ್ಲಿ ಮೊದಲಿನಿಂದಲೂ ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬ ಭಾವನೆಯಿದೆ, ಇಂದು ಜಾಗತಿಕ ಯೋಗಕ್ಷೇಮಕ್ಕಾಗಿ ನಡೆಯುತ್ತಿರುವ ನಡಿಗೆ ನಮ್ಮ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.
ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನಾವೂ ಆರೋಗ್ಯವಂತರಾಗಿರಬೇಕು ಎಂಬ ಸಂದೇಶವನ್ನು ಈ ವಾಕಥಾನ್ ಸಾರುತ್ತದೆ. ಜಾಗತಿಕ ಸ್ವಾಸ್ಥ್ಯವನ್ನು ಉತ್ತೇಜಿಸುವತ್ತ ಕೇಂದ್ರೀಕರಿಸುತ್ತದೆ, ಇದರಲ್ಲಿ ವಿಶಾಲ ಉಪಕ್ರಮಗಳು ಮತ್ತು ಆಂದೋಲನಗಳಿವೆ. ಇದು ಎಲ್ಲರ ಆರೋಗ್ಯವನ್ನು ಉತ್ತಮಪಡಿಸುವ ಗುರಿ ಹೊಂದಿದೆ ಎಂದು ತಿಳಿದು ಸಂತೋಷವಾಗಿದೆ ಎಂದರು.
ಈ ಯಾಂತ್ರಿಕ ಬದುಕಿನಲ್ಲಿ ನಾವೆಲ್ಲರೂ ಆರೋಗ್ಯವಾಗಿರಬೇಕಾದರೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಮತ್ತು ನಮ್ಮ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ನಮ್ಮ ಸುತ್ತಮುತ್ತಲ ಪ್ರಕೃತಿ ಪರಿಸರವನ್ನು ಸಂರಕ್ಷಿಸಬೇಕು ಎಂದರು.
ವಿದ್ಯಾವಂತರಾದ ನಾವು ಕಸ ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದನ್ನು ನಿಲ್ಲಿಸಬೇಕು. ಮನೆಯ ಮುಂದೆ ಒಂದು ಸಸಿ ನೆಟ್ಟು ನೀರೆರೆದು ಪೋಷಿಸಬೇಕು. ನಮ್ಮ ಪರಿಸರ ಸುಂದರವಾಗಿದ್ದರೆ, ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಇರುವ ಈ ಒಂದು ಭೂಮಿಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಕೃತಿ ಪರಿಸರ ಉಳಿದರೆ ಇಡೀ ಜಗತ್ತಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಆಯುಷ್ ಇಲಾಖೆ, ಅರಣ್ಯ ಇಲಾಖೆಯೊಂದಿಗೆ ಜೊತೆಗೂಡಿ ಗಿಡಮೂಲಿಕೆ ಮತ್ತು ಔಷಧೀಯ ಸಸ್ಯಗಳ ಸಂವರ್ಧನೆ ಮತ್ತು ಸಂರಕ್ಷಣೆಗೂ ಒತ್ತು ನೀಡಬೇಕು ಮತ್ತು ಪಾರಂಪರಿಕ ವೈದ್ಯ ಪದ್ಧತಿಗೆ ಉತ್ತೇಜನ ನೀಡಬೇಕು ಎಂದೂ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಬುದ್ಧ ಬಸವನನ್ನು ತಿರಸ್ಕರಿಸಿದವರಿಂದಲೇ ಸಂವಿಧಾನದ ಮೇಲೆ ದಾಳಿ: ಸಚಿವ ಕೃಷ್ಣ ಬೈರೇಗೌಡ
BREAKING : ಪಾಕಿಸ್ತಾನದಲ್ಲಿ ಬೆಳ್ಳಂಬೆಳಗ್ಗೆ 5.8 ತೀವ್ರತೆಯ ಪ್ರಬಲ ಭೂಕಂಪ | Earthquake in Pakistan