ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ ನಡೆಸುವ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance Test-CET)ಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿಸುವ (Computer Based Test-CBT) ಬಗ್ಗೆ ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ಕೆಇಎ ಅಧ್ಯಕ್ಷರೂ ಆದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಶನಿವಾರ ಹೇಳಿದರು.
ಇಲ್ಲಿನ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ-ಸೆಟ್ 23ರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.
ಮಹಾರಾಷ್ಟ್ರ ಮತ್ತಿತರ ಒಂದೆರಡು ರಾಜ್ಯಗಳಲ್ಲಿ ಅಲ್ಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸಿಬಿಟಿ ಮಾದರಿಯಲ್ಲಿ ನಡೆಸಿರುವುದನ್ನು ಅಧ್ಯಯನ ಮಾಡಲಾಗಿದೆ. ಸಿಇಟಿಯನ್ನು ಕಂಪ್ಯೂಟರ್ ಆಧರಿಸಿ ನಡೆಸಲು ಹೆಚ್ಚಿನ ಮೂಲಸೌಕರ್ಯವೂ ಅಗತ್ಯವಿರುತ್ತದೆ. ಒಟ್ಟಾರೆ, ಸಾಧಕ ಬಾಧಕಗಳನ್ನು ಗಣನೆಗೆ ತೆಗೆದುಕೊಂಡು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ವಿವರಿಸಿದರು.
ಕೆ-ಸೆಟ್ ನಲ್ಲಿ ಅರ್ಹರಾದವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಆದ್ಯತೆ ಮೇರೆಗೆ ಗಮನ ನೀಡಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಆಗಲಿದೆ. ಜೊತೆಗೆ, ಮುಂಬರುವ ದಿನಗಳಲ್ಲಿ ಮಂಜೂರಾತಿ ಹುದ್ದೆಗಳು ಹಾಗೂ ಅತಿಥಿ ಬೋಧಕರ ನಡುವಿನ ಅಂತರವನ್ನು ತಗ್ಗಿಸುವುದಕ್ಕೂ ಒತ್ತ ಕೊಡಲಾಗುತ್ತದೆ ಎಂದರು.
ವೆಬ್ ಕಾಸ್ಟಿಂಗ್ ಬಗ್ಗೆ ಮೆಚ್ಚುಗೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆ-ಸೆಟ್ ಸೇರಿದಂತೆ ಹಲವು ನೇಮಕಾತಿ ಪರೀಕ್ಷೆಗಳನ್ನು ಸಮರ್ಥವಾಗಿ ನಡೆಸುತ್ತಿದೆ. ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ (ಎಐ), ಮುಖಚಹರೆ ಗುರುತಿಸುವಿಕೆ, ಬೆರಳಚ್ಚು ಬಳಕೆ, ಬಯೋಮೆಟ್ರಿಕ್ಸ್ ಮತ್ತಿತರ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು, ವೆಬ್ ಕಾಸ್ಟಿಂಗ್ ಮೂಲಕ ನಿಯಂತ್ರಣ ಮಾಡುತ್ತಿರುವುದು ಉತ್ತಮ ಕ್ರಮವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಇದೇ ವೇಳೆ, ಸಚಿವರು, ನಿಗಮ, ಮಂಡಳಿಗಳ ಹುದ್ದೆಗಳನ್ನು ತುಂಬಲು ಶನಿವಾರ ಆರಂಭವಾದ ಎರಡು ದಿನಗಳ ಪರೀಕ್ಷೆಗೆ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಇಲ್ಲಿನ ಕಮಾಂಡ್ ಸೆಂಟರ್ ನಲ್ಲಿ ಅಳವಡಿಸಲಾಗಿರುವ ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಖಾಸಗಿ ವಿವಿಗೆ ಅನುಮತಿ ಇಲ್ಲ
ರಾಜ್ಯದಲ್ಲಿ ಹೊಸದಾಗಿ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಉದ್ದೇಶ ಇಲ್ಲ. ಇದೇ ಅಭಿಪ್ರಾಯ ಮುಖ್ಯಮಂತ್ರಿಯವರದ್ದೂ ಆಗಿದೆ ಎಂದು ಸುಧಾಕರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುಪ್ರೀಂ ಕೋರ್ಟ್ ಆದೇಶದ ನಂತರ ತೀರ್ಮಾನ
ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದ್ದು, ಅದರ ಅಂತಿಮ ಆದೇಶ ನೋಡಿಕೊಂಡು ಸಿಇಟಿ ಕೌನ್ಸೆಲಿಂಗ್ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಸಚಿವ ಡಾ.ಸುಧಾಕರ ಹೇಳಿದರು.
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ಗಳಿಗೆ ಒಮ್ಮೆಗೇ ಕೌನ್ಸೆಲಿಂಗ್ ನಡೆಸುವ ಪ್ರಕ್ರಿಯೆ ರಾಜ್ಯದಲ್ಲಿ ಇದ್ದು, ಅದೇ ರೀತಿ ಮಾಡಿದರೆ ಹೆಚ್ಚು ಅನುಕೂಲ. ಹೀಗಾಗಿ ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯುತ್ತಿರುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಕೇವಲ ನೀಟ್ ಅಂಕಗಳನ್ನೇ ಆಧಾರವಾಗಿ ಇಟ್ಟುಕೊಂಡಿರುವುದರ ಬಗ್ಗೆ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಇದರ ಬದಲು ಅರ್ಹತಾ ಪರೀಕ್ಷೆಯ (ದ್ವಿತೀಯ ಪಿಯುಸಿ) ಶೇ 50ರಷ್ಟು ಅಂಕಗಳನ್ನೂ ರಾಂಕ್ ಗೆ ಪರಿಗಣಿಸಿದರೆ ಸೂಕ್ತ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶೀಘ್ರವೇ ‘CET ಅರ್ಜಿ’ ತುಂಬುವ ವಿಧಾನ ತಿಳಿಸಲು ‘ಆಪ್’ ಬಿಡುಗಡೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ
BIG NEWS: ‘ರಾಜ್ಯ ಸರ್ಕಾರ’ದಿಂದ ಮಹಾ ಎಡವಟ್ಟು: ‘ಸತ್ತ ಅಧಿಕಾರಿ’ಯನ್ನೇ ವರ್ಗಾವಣೆ