ಬೆಳಗಾವಿ: ಜಿಲ್ಲೆಯ ಚೆನ್ನಮ್ಮನ ಕಿತ್ತೂರಿನಲ್ಲಿ 100 ಹಾಸಿಗೆಯ ಸುಸಜ್ಜಿತ ತಾಲ್ಲೂಕು ಆಸ್ಪತ್ರೆಗೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಭೂಮಿಪೂಜೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೆರವೇರಿಸಿದರು.
ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮತ್ತು ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಿಂದೆ ಬೆಳಗಾವಿ ಪ್ರವಾಸಕ್ಕೆ ಬಂದಾಗ ಪ್ರಾಥಮಿಕ ಆರೊಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದೆ. ಈ ಆಸ್ಪತ್ರೆ ಮೊದಲು ಜನವಸತಿ ಪ್ರದೇಶದಿಂದ ತುಂಬ ದೂರ ನಿರ್ಮಾಣವಾಗುತ್ತಿತ್ತು. ಅಲ್ಲಿಯೇ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನಾನುಕೂಲ ಆಗುತ್ತಿತ್ತು. ಪಟ್ಟಣ ಪ್ರದೇಶದಲ್ಲಿಯೇ ಆಗಬೆಕು, ಉತ್ತಮ ರಸ್ತೆ ಸೌಕರ್ಯ ಇರುವಲ್ಲಿಯೇ ಮಾಡೋಣ ಎಂದು ಸ್ಥಳೀಯ ಸಾಸಕರಿಗೆ ಹೇಳಿದ್ದೆ. ಅದರಂತೆ 3.20 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಇನ್ನು 18 ತಿಂಗಳಲ್ಲಿ ಆಸ್ಪತ್ರೆ ಲೋಕಾರ್ಪಣೆ ಆಗಲಿದೆ. ಇದೊಂದು 100 ಹಾಸಿಗೆ, 9 ಐಸಿಯು ಹೊಂದಿರುವ ಸುಸಜ್ಜಿತ ಆಸ್ಪತ್ರೆ ಆಗಲಿದ್ದು, ಡಯಾಲಿಸಿಸ್ ಕೇಂದ್ರ, ಬ್ಲಡ್ ಬ್ಯಾಂಕ್, ಪುನೀತ್ ಹೃದಯ ಚಿಕಿತ್ಸಾ ಕೇಂದ್ರ, ಎಲ್ಲವೂ ಇಲ್ಲಿ ಲಭ್ಯವಿದೆ. ಇದು ಅತ್ಯಂತ ಪ್ರಶಸ್ತವಾದ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವುದರಿಂದ, ಶಾಸಕರು ಇನ್ನೂ ಸ್ವಲ್ಪ ಸ್ಥಳ ಕಾಯ್ದಿರಿಸಿ, ಯಾಕೆಂದರೆ ಮುಂದೆ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಅನುಕೂಲವಾಗಲಿದೆ. ಮುಂದಿನ ತಿಂಗಳಿಂದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ 24 ತಾಸು ತಜ್ಞ ವೈದ್ಯರ ಸೇವೆ ಲಭ್ಯವಿದ್ದು ಸಾರ್ವಜನಿಕರಿಗೆ ಸಂಪೂರ್ಣ ಆರೋಗ್ಯ ಸೇವೆ ಒದಗಲಿದೆ. ಮುಖ್ಯವಾಗಿ ಹೆರಿಗೆಗೆ ಆಗುತ್ತಿರುವ ಸಮಸ್ಯೆ ಬಗೆಹರಿಯಲಿದೆ.
ಇದಕ್ಕೂ ಪೂರ್ವದಲ್ಲಿ ಸಚಿವರು ಸ್ಥಳೀಯ ಶಾಸಕರಾದ ಬಾಬಾಸಹೇಬ್ ಪಾಟೀಲ್ ಜೊತೆ ವೀರರಾಣಿ ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮಾಲರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕರ್ನಾಟಕದ ವಿವಿಧ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡದ ಕೇಂದ್ರವು ರಾಜ್ಯ ಸರ್ಕಾರ ದಿವಾಳಿ ಎನ್ನಲು ಸಾಧ್ಯವೇ?: ಡಿಕೆಶಿ








