ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ನೇತೃತ್ವದ ನಮ್ಮ ಸರ್ಕಾರ ಕಳೆದೆರಡು ವರ್ಷಗಳಲ್ಲಿ ಜಾರಿಗೊಳಿಸಿರುವ ಜಲಸಂರಕ್ಷಣಾ ಯೋಜನೆಗಳಿಂದಾಗಿ ರಾಜ್ಯದಲ್ಲಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಾಗೆಯೇ, ಉತ್ತಮ ಮಳೆ ಹಾಗೂ ಜನಜಾಗೃತಿ ಅಭಿಯಾನದ ಪರಿಣಾಮವಾಗಿ ಅಂತರ್ಜಲ ಬಳಕೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ತಿಳಿಸಿದರು.
ಇಂದು ವಿಕಾಸಸೌಧದ ತಮ್ಮ ಕಚೇರಿಯಲ್ಲಿ 2025 ನೇ ಸಾಲಿನ ಅಂತರ್ಜಲ ಮೌಲ್ಯಮಾಪನ ವರದಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಳೆದ ಸಾಲಿನಲ್ಲಿ ಆದಂತಹ ಉತ್ತಮ ಮಳೆ ಹಾಗೂ ಸರ್ಕಾರದ ಭದ್ರ ಜಲ ಸಂರಕ್ಷಣಾ ನೀತಿಗಳ ಯಶಸ್ಸಿನ ಫಲವಾಗಿ, ಕರ್ನಾಟಕವು ಅಂತರ್ಜಲ ಸೂಚ್ಯಂಕಗಳಲ್ಲಿ ಗಮನಾರ್ಹ ಸುಧಾರಣೆಯನ್ನು ದಾಖಲಿಸಿದೆ. ದತ್ತಾಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟಾರೆಯಾಗಿ ಅಂತರ್ಜಲ ಬಳಕೆಯು ಗಣನೀಯವಾಗಿ ಇಳಿಕೆಯಾಗಿದ್ದು, ವಾರ್ಷಿಕವಾಗಿ ಅಂತರ್ಜಲ ಮರುಪೂರಣ ಸಾಮರ್ಥ್ಯದಲ್ಲಿ ಭಾರಿ ಏರಿಕೆಯಾಗಿದೆ.
ಈ ವರದಿಯ ಪ್ರಕಾರ, ರಾಜ್ಯದ ಒಟ್ಟಾರೆ ಅಂತರ್ಜಲ ಬಳಕೆಯು (𝗢𝘃𝗲𝗿𝗮𝗹𝗹 𝗚𝗿𝗼𝘂𝗻𝗱𝘄𝗮𝘁𝗲𝗿 𝗘𝘅𝘁𝗿𝗮𝗰𝘁𝗶𝗼𝗻) 𝟮𝟬𝟮𝟰 ರಲ್ಲಿದ್ದ ಶೇ. 𝟲𝟴.𝟰𝟰 ರಿಂದ 𝟮𝟬𝟮𝟱 ರಲ್ಲಿ ಶೇ. 𝟲𝟲.𝟰𝟵 ಕ್ಕೆ ಇಳಿಕೆಯಾಗಿರುವುದು ಕಂಡುಬಂದಿದೆ. ಈ ಸಕಾರಾತ್ಮಕ ಇಳಿಕೆಯು, ರಾಜ್ಯದಾದ್ಯಂತ ಲಭ್ಯವಿರುವ ವಾರ್ಷಿಕ ಅಂತರ್ಜಲದಲ್ಲಿ ಸರಾಸರಿ ಶೇ. 𝟲𝟲.𝟱 ರಷ್ಟನ್ನು ಮಾತ್ರ ಪ್ರಸ್ತುತ ಬಳಸಲಾಗುತ್ತಿದೆ ಎಂಬುದನ್ನು ಸೂಚಿಸುತ್ತದೆ. ಅಂತರ್ಜಲದ ಜವಾಬ್ದಾರಿಯುತ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಇಲಾಖೆಯು ನಿರಂತರವಾಗಿ ನಡೆಸುತ್ತಿರುವ ವ್ಯಾಪಕ ಪ್ರಯತ್ನಗಳು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಸುಸ್ಥಿರ ಬಳಕೆ ಹಾಗೂ ನೈಸರ್ಗಿಕ ಅಂತರ್ಜಲ ಮೂಲಗಳ ಮೇಲಿನ ಒತ್ತಡ ಕಡಿಮೆಯಾಗಿರುವುದನ್ನು ಧೃಡವಾಗುತ್ತದೆ.
ಇದಕ್ಕೆ ಪೂರಕವಾಗಿ, ಕರ್ನಾಟಕದ ಅಂತರ್ಜಲ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಒಟ್ಟು ವಾರ್ಷಿಕ ಅಂತರ್ಜಲ ಮರುಪೂರಣ (𝗧𝗼𝘁𝗮𝗹 𝗔𝗻𝗻𝘂𝗮𝗹 𝗚𝗿𝗼𝘂𝗻𝗱𝘄𝗮𝘁𝗲𝗿 𝗥𝗲𝗰𝗵𝗮𝗿𝗴𝗲) ಪ್ರಮಾಣವು 𝟮𝟬𝟮𝟰 ರಲ್ಲಿದ್ದ 𝟭𝟴.𝟳𝟰 ಬಿಲಿಯನ್ ಕ್ಯೂಬಿಕ್ ಮೀಟರ್ (𝗕𝗖𝗠) ನಿಂದ 𝟮𝟬𝟮𝟱 ರಲ್ಲಿ 𝟭𝟵.𝟮𝟴 𝗕𝗖𝗠 ಗೆ ಗಮನಾರ್ಹವಾಗಿ ಏರಿಕೆಯಾಗಿದೆ. ಈ ಮರುಪೂರಣ ದರದ ಹೆಚ್ಚಳದ ನೇರ ಪರಿಣಾಮವಾಗಿ, ವಾರ್ಷಿಕ ಲಭ್ಯವಿರುವ ಅಂತರ್ಜಲ ಸಂಪನ್ಮೂಲವೂ (𝗔𝗻𝗻𝘂𝗮𝗹 𝗘𝘅𝘁𝗿𝗮𝗰𝘁𝗮𝗯𝗹𝗲 𝗚𝗿𝗼𝘂𝗻𝗱𝘄𝗮𝘁𝗲𝗿 𝗥𝗲𝘀𝗼𝘂𝗿𝗰𝗲𝘀) 𝟭𝟲.𝟴𝟴 𝗕𝗖𝗠 ನಿಂದ 𝟭𝟳.𝟰𝟭 𝗕𝗖𝗠 ಗೆ ಏರಿಕೆಯಾಗಿದೆ.
ರಾಜ್ಯದಾದ್ಯಂತ ಮೂಲಸೌಕರ್ಯಗಳಲ್ಲಿ ಮೇಲ್ದರ್ಜೆಗೇರಿಕೆಯಾಗಿರುವುದು ಈ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಜಲ ಸಂರಕ್ಷಣಾ ರಚನೆಗಳಿಂದ (𝗪𝗮𝘁𝗲𝗿 𝗖𝗼𝗻𝘀𝗲𝗿𝘃𝗮𝘁𝗶𝗼𝗻 𝗦𝘁𝗿𝘂𝗰𝘁𝘂𝗿𝗲𝘀 – 𝗪𝗖𝗦) ಆಗುವ ಅಂತರ್ಜಲ ಮರುಪೂರಣವು 𝟮𝟬𝟮𝟰 ರಲ್ಲಿದ್ದ 𝟬.𝟴𝟭 𝗕𝗖𝗠 ನಿಂದ 𝟮𝟬𝟮𝟱 ರಲ್ಲಿ 𝟭.𝟬𝟰 𝗕𝗖𝗠 ಗೆ ಏರಿಕೆಯಾಗಿದ್ದು, ಶೇ. 𝟮𝟵.𝟭𝟭 ರಷ್ಟು ಜಿಗಿತ ಕಂಡಿದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಾದ್ಯಂತ ಇಂತಹ ಜಲಸಂರಕ್ಷಣಾ ಕಾಮರಾರಿಗಳ ಸಂಖ್ಯೆ 𝟯,𝟭𝟱,𝟮𝟴𝟰 ರಿಂದ 𝟯,𝟵𝟰,𝟬𝟲𝟬 ಕ್ಕೆ ಏರಿಕೆಯಾಗಿರುವುದು ಈ ಸಾಧನೆಗೆ ಪ್ರಮುಖ ಕಾರಣವಾಗಿದೆ.
ಈ ಸಕಾರಾತ್ಮಕ ಬೆಳವಣಿಗೆಗೆ ಕಳೆದ ಸಾಲಿನಲ್ಲಿ ಆದಂತಹ ಉತ್ತಮ ಮಳೆ ಹಾಗೂ ಸರ್ಕಾರದ ದೂರದೃಷ್ಟಿಯ ಯೋಜನೆಗಳು ಪ್ರಮುಖ ಕಾರಣವಾಗಿದೆ. “ಅಂತರ್ಜಲ ಬಳಕೆಯಲ್ಲಿ ಗಣನೀಯ ಇಳಿಕೆ ಮತ್ತು ನಮ್ಮ ವಾರ್ಷಿಕ ಮರುಪೂರಣ ಪ್ರಮಾಣದಲ್ಲಿನ ಭಾರಿ ಏರಿಕೆಯು, ಜಲ ಸುಸ್ಥಿರತೆಯ ಕಡೆಗಿನ ನಮ್ಮ ಸರ್ಕಾರದ ಬದ್ಧತೆಗೆ ಸಾಕ್ಷಿಯಾಗಿದೆ,” ಎಂದು ಅವರು ತಿಳಿಸಿದರು.
“ವೈಜ್ಞಾನಿಕ ಜಲ ನಿರ್ವಹಣೆ, ಕೆರೆಗಳ ಪುನರುಜ್ಜೀವನ ಯೋಜನೆಗಳು ಮತ್ತು ಕರ್ನಾಟಕದಾದ್ಯಂತ ಜಲ ಸಂರಕ್ಷಣಾ ರಚನೆಗಳ ನಿರ್ಮಾಣದ ಮೂಲಕ, ಅಂತರ್ಜಲದ ಮರುಪೂರಣವನ್ನು ಹೆಚ್ಚಿಸಿದ್ದೇವೆ. ಅಲ್ಲದೇ, ಜನಜಾಗೃತಿಯ ಅಭಿಯಾನದ ಮೂಲಕ ಅತಿಯಾದ ಬಳಕೆಯನ್ನು ನಾವು ಯಶಸ್ವಿಯಾಗಿ ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಇದಲ್ಲದೆ, ನಮ್ಮ ಮಹತ್ವಾಕಾಂಕ್ಷೆಯ ಕೆರೆ ತುಂಬಿಸುವ ಯೋಜನೆಗಳು ಅತ್ಯುತ್ತಮ ಫಲಿತಾಂಶಗಳನ್ನು ನೀಡಿದ್ದು, ಕೆರೆ-ಕುಂಟೆಗಳ ಮೂಲಕ ಆಗುವ ಮರುಪೂರಣ ಶೇ. 𝟰.𝟰𝟴 ರಷ್ಟು ಹೆಚ್ಚಾಗಿದೆ. ಕೇವಲ 𝟭𝟮𝟬 ದಿನಗಳ (𝟭𝟮𝟬-𝗱𝗮𝘆) ಮಳೆಗಾಲವನ್ನು ನೆಚ್ಚಿಕೊಳ್ಳುವ ಬದಲು, ವರ್ಷದ 𝟯𝟲𝟱 ದಿನಗಳೂ (𝟯𝟲𝟱 𝗱𝗮𝘆𝘀) ಸಂಸ್ಕರಿಸಿದ ಅಥವಾ ಮೇಲ್ಮೈ ನೀರನ್ನು ಒದಗಿಸುವ ಮೂಲಕ ರೈತರು ಮತ್ತು ನಾಗರಿಕರಿಗೆ ನಾವು ದೀರ್ಘಾವಧಿಯ ಜಲ ಭದ್ರತೆಯನ್ನು ನೀಡದ್ದೇವೆ.” ಎಂದು ಹೇಳಿದರು.
ಈ ದೂರದೃಷ್ಟಿಯ ಯೋಜನೆಗಳ ಸಕಾರಾತ್ಮಕ ಪರಿಣಾಮವು ಪ್ರಾದೇಶಿಕ ಮಟ್ಟದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. 𝟮𝟬𝟮𝟰 ಸಾಲಿನ ದತ್ತಾಂಶಗಳಿಗೆ ಹೋಲಿಸಿದರೆ 𝟭𝟭 ತಾಲೂಕುಗಳ (𝗔𝘀𝘀𝗲𝘀𝘀𝗺𝗲𝗻𝘁 𝗨𝗻𝗶𝘁𝘀) ಅಂತರ್ಜಲ ಸ್ಥಿತಿಗತಿಯಲ್ಲಿ ಸುಧಾರಣೆ ಕಂಡುಬಂದಿದೆ. ಗಮನಾರ್ಹವಾಗಿ, ಚಾಮರಾಜನಗರ (𝗖𝗵𝗮𝗺𝗮𝗿𝗮𝗷𝗮𝗻𝗮𝗴𝗮𝗿𝗮) ತಾಲೂಕು ‘ಅತಿ-ಬಳಕೆ’ ಪಟ್ಟಿಯಿಂದ ‘ನಿರ್ಣಾಯಕ’ ಹಂತದ ಪಟ್ಟಿಗೆ ವರ್ಗಾವಣೆಯಾಗಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಅದೇ ರೀತಿ, ಬೆಳಗಾವಿಯ ಅಥಣಿ (𝗔𝘁𝗵𝗮𝗻𝗶), ಬೆಂಗಳೂರು ದಕ್ಷಿಣದ ಚನ್ನಪಟ್ಟಣ (𝗖𝗵𝗮𝗻𝗻𝗮𝗽𝗮𝘁𝗻𝗮), ಚಿತ್ರದುರ್ಗದ ಮೊಳಕಾಲ್ಮೂರು (𝗠𝗼𝗹𝗮𝗸𝗮𝗹𝗺𝘂𝗿𝘂) ಹಾಗೂ ಹಾವೇರಿಯ ರಾಣೆಬೆನ್ನೂರು (𝗥𝗮𝗻𝗲𝗯𝗲𝗻𝗻𝘂𝗿), ಸವಣೂರು (𝗦𝗮𝘃𝗮𝗻𝘂𝗿) ಮತ್ತು ಶಿಗ್ಗಾಂವಿ (𝗦𝗵𝗶𝗴𝗴𝗮𝗼𝗻) ತಾಲೂಕುಗಳು ‘ಅರೆ-ನಿರ್ಣಾಯಕ’ ಸ್ಥಿತಿಯಿಂದ ಸಂಪೂರ್ಣ ‘ಸುರಕ್ಷಿತ’ ವರ್ಗಕ್ಕೆ ಯಶಸ್ವಿಯಾಗಿ ಬಡ್ತಿ ಪಡೆದಿವೆ.
ಜೊತೆಗೆ, ಗೃಹಬಳಕೆಯ ಅಂತರ್ಜಲ ಅವಲಂಬನೆಯೂ ತಗ್ಗುತ್ತಿದೆ. ಗೃಹಬಳಕೆಯ ಅಂತರ್ಜಲ ಹೊರತೆಗೆಯುವಿಕೆ ಶೇ. 𝟬.𝟱𝟴 ರಷ್ಟು ಕಡಿತಗೊಂಡಿದ್ದು, 𝟮𝟬𝟮𝟰 ರಲ್ಲಿದ್ದ 𝟭,𝟮𝟭,𝟳𝟯𝟭 ಹೆಕ್ಟೇರ್-ಮೀಟರ್ (𝗵𝗮𝗺) ನಿಂದ 𝟮𝟬𝟮𝟱 ರಲ್ಲಿ 𝟭,𝟮𝟭,𝟬𝟮𝟯 𝗵𝗮𝗺 ಗೆ ಇಳಿಕೆಯಾಗಿದೆ. ಜಲ ಜೀವನ್ ಮಿಷನ್ (𝗝𝗮𝗹 𝗝𝗲𝗲𝘃𝗮𝗻 𝗠𝗶𝘀𝘀𝗶𝗼𝗻 – 𝗝𝗝𝗠) ಯೋಜನೆಯಡಿ ಜನರು ಅಂತರ್ಜಲದ ಬದಲಾಗಿ ಮೇಲ್ಮೈ ನೀರಿನ ಮೂಲಗಳತ್ತ ಯಶಸ್ವಿಯಾಗಿ ಮುಖಮಾಡಿರುವುದು ಈ ಕಡಿತಕ್ಕೆ ಪ್ರಮುಖ ಕಾರಣವಾಗಿದೆ.
ಈ ಸಂಧರ್ಭದಲ್ಲಿ ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ ಪವಿತ್ರ, ಕೇಂದ್ರ ಅಂತರ್ಜಲ ಅಭಿವೃದ್ದಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.








