ಬೆಂಗಳೂರು: ಹಾಲಿನ ಬೆಲೆ ಹೆಚ್ಚಳ ಮತ್ತೊಂದು ಬರೆ ಹಾಕುವ ಕೆಲಸ ಎಂದು ವಿಧಾನಪರಿಷತ್ ಎನ್. ರವಿಕುಮಾರ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳಕ್ಕೆ ಪ್ಯಾಕೆಟ್‍ಗೆ 50 ಎಂಎಲ್ ಹೆಚ್ಚು ಹಾಲು ಕೊಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಬೂಬು ಕೊಡುತ್ತಿದ್ದಾರೆ. ಅದಕ್ಕಾಗಿ 2 ರೂ. ಹೆಚ್ಚು ಮಾಡಿದ್ದೇವೆ ಎಂದಿದ್ದಾರೆ ಎಂದರು.
ಹಾಲು ಹೆಚ್ಚು ನೀಡಲು ಯಾರಾದರೂ ನಿಮಗೆ ಮನವಿಪತ್ರ ಕೊಟ್ಟಿದ್ದರೇ? ಈ ರೀತಿ ಮನೆಮುರುಕ ನಿರ್ಧಾರವನ್ನು ಯಾಕೆ ಈ ಸರಕಾರ ಮಾಡುತ್ತಿದೆ? ಜನಕ್ಕೆ ಬೇಡದ ಜನವಿರೋಧಿ ನಿರ್ಧಾರವಿದು. ರಾಜ್ಯದಲ್ಲಿ 20 ಲಕ್ಷ ಮೇವಿನ ಅವಶ್ಯಕತೆ ಇದೆ. 8 ಲಕ್ಷ ಟನ್ ಮೇವನ್ನು ಮಾತ್ರ ಕೊಡುತ್ತಿದ್ದಾರೆ. ಈ ಸರಕಾರಕ್ಕೆ ಮೇವು ಕೊಡಲಾಗುತ್ತಿಲ್ಲ ಎಂದು ಟೀಕಿಸಿದರು.
ಹಾಲು ಹೆಚ್ಚು ಕೊಡುವ ನೆಪದಲ್ಲಿ ಹೆಚ್ಚು ಹಣ ಕೇಳುವುದು ಜನದ್ರೋಹಿ ನಿರ್ಧಾರ ಎಂದು ಆಕ್ಷೇಪಿಸಿದರು. ಈ ನಿರ್ಧಾರವನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಅವರು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರನ್ನು ಆಗ್ರಹಿಸಿದರು. ಹಾಲಿನ ದರ ಏರಿಕೆಯ ಪರಿಣಾಮವಾಗಿ ಚಹಾ, ಕಾಫಿ, ಹೋಟೆಲ್‍ಗಳ ತಿಂಡಿ ದರ ಹೆಚ್ಚಳದ ವಿಷಯ ಕೇಳಿ ಬರುತ್ತಿದೆ. ಮದ್ಯದ ಬೆಲೆ ಈಗಾಗಲೇ ಹೆಚ್ಚಿಸಿದ್ದೀರಿ. ಬೊಕ್ಕಸ ತುಂಬಿಸುವ ಕುಕೃತ್ಯವಿದು ಎಂದು ಆರೋಪಿಸಿದರು.
ಬೇಜವಾಬ್ದಾರಿ ಸರಕಾರದ ಜನವಿರೋಧಿ ಮುಖ್ಯಮಂತ್ರಿ..
ರಾಜ್ಯದ ಬೇಜವಾಬ್ದಾರಿ ಸರಕಾರದ ಜನವಿರೋಧಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿರ್ಧಾರಗಳಿಂದ ರಾಜ್ಯದ ಜನತೆ ದಿನದಿಂದ ದಿನಕ್ಕೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಕೋಟ್ಯಂತರ ಜನರು ಸಂಕಷ್ಟಕ್ಕೆ ಈಡಾಗಿದ್ದರು. ಇದರಿಂದ ರಸ್ತೆ ಮೇಲೆ ಓಡಾಡುವ ಬಸ್‍ಗಳು, ಲಾರಿಗಳು, ಕಾರುಗಳು, ಸಾಮಗ್ರಿಗಳನ್ನು ಒಯ್ಯುವ ವಾಹನಗಳ ದರ ಹೆಚ್ಚಾಗಿ ವಸ್ತುಗಳ ದರವೂ ದುಬಾರಿಯಾಗಿದೆ ಎಂದು ರವಿಕುಮಾರ್ ಅವರು ವಿವರಿಸಿದರು.
ಮಳೆ ಬರುತ್ತಿದೆ. ಬಿತ್ತನೆ ಬೀಜ, ಗೊಬ್ಬರಗಳ ದರವನ್ನೂ ನೀವು ಹೆಚ್ಚು ಮಾಡಿದ್ದೀರಿ. ತರಕಾರಿ, ದವಸಧಾನ್ಯಗಳ ಬೆಲೆ ಹೆಚ್ಚಾಗಿದೆ. ಇದಲ್ಲದೆ, ಮನೆ ಕಂದಾಯ, ನೋಂದಣಿ ಶುಲ್ಕ ಹೆಚ್ಚಿಸಿದ್ದೀರಿ. ಸರಕಾರಿ ಆಸ್ತಿಗಳ ಪರಭಾರೆ ಮಾಡಿ ಸರಕಾರ ವ್ಯಾಪಾರ ಮಾಡುತ್ತಿದೆ ಎಂದು ಆರೋಪಿಸಿದರು. ಈ ಸರಕಾರದ ಮನೆಮುರುಕ ನಿರ್ಧಾರಗಳನ್ನು ನೋಡಿದರೆ ಇವರು ಕರ್ನಾಟಕ ರಾಜ್ಯದಲ್ಲಿ ಏನೂ ಉಳಿಸುವುದಿಲ್ಲ ಎಂದು ಗೊತ್ತಾಗುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ನಿದ್ರೆಯಲ್ಲಿ ಇದ್ದಂತಿದೆ. ಜನರ ಸಂಕಷ್ಟ ಅವರಿಗೆ ಕಾಣುತ್ತಿಲ್ಲ. ಮುಖ್ಯಮಂತ್ರಿ, ಕಣ್ಣಿದ್ದೂ ಕುರುಡರಾಗಿದ್ದಾರೆ. ಕಿವಿ ಇದ್ದರೂ ಕಿವುಡರಾಗಿದ್ದಾರೆ. ಬುದ್ಧಿ ಇದ್ದರೂ ಬುದ್ಧಿ ಕಳಕೊಂಡು ಬುದ್ಧಿ ಭ್ರಮಣೆ ಆದಂತೆ ಕಾಣುತ್ತಿದೆ. ಜನರು ರೊಚ್ಚಿಗೇಳುವ ಮೊದಲು, ಜನರು ರಸ್ತೆಗೆ ಇಳಿಯುವ ಮುಂಚೆ ಕೂಡಲೇ ಹಾಲು, ಡೀಸೆಲ್, ಪೆಟ್ರೋಲ್ ದರ ಹೆಚ್ಚಳವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜುಲೈ 2ನೇ ವಾರದಲ್ಲಿ ಬೆಂಗಳೂರಿನ ‘ಯಲಹಂಕದ ಅನಿಲ ವಿದ್ಯುತ್ ಘಟಕ’ ಲೋಕಾರ್ಪಣೆ: ಸಚಿವ ಕೆ.ಜೆ ಜಾರ್ಜ್
ವಿದ್ಯಾರ್ಥಿಗಳೇ ಗಮನಿಸಿ: ಜುಲೈ.13, 14ರಂದು ನಿಗದಿ ಪಡಿಸಿದ್ದ ‘PG CET-2024ರ ಪರೀಕ್ಷೆ’ ಮುಂದೂಡಿಕೆ