ಮಂಡ್ಯ : ಮದ್ದೂರು ವಿಧಾನಸಭಾ ಕ್ಷೇತ್ರಕ್ಕೆ ಮೆಟ್ರೋ, ಏರ್ಪೋರ್ಟ್ ಬೇಡ ರೈತರಿಗೆ ನೀರಾವರಿ ಯೋಜನೆಗಳನ್ನು ಮಾಡಿಕೊಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಮನವಿ ಮಾಡಿದರು.
ಮದ್ದೂರು ತಾಲೂಕಿನ ಸೋಮನಹಳ್ಳಿಯ ತಿಮ್ಮದಾಸ್ ಹೋಟೆಲ್ ಸಮೀಪ ಸೋಮವಾರ ನಡೆದ ಸಾಧನಾ ಸಮಾವೇಶ ಮತ್ತು 1146 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಿಎಂ ಮುಂದೆ ಬೇಡಿಕೆ ಇಟ್ಟರು.
ಮದ್ದೂರು ಕ್ಷೇತ್ರದ ಜನತೆಯ ಆಶೀರ್ವಾದದಿಂದ ಮೊದಲ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಜನತೆಯ ಋಣ ತೀರಿಸಲು ವಾರದಲ್ಲಿ ನಾಲ್ಕೈದು ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದುಕೊಂಡು ಹಗಲಿರುಳು ಶ್ರಮಿಸುತ್ತಿದ್ದೇನೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇವಲ 2 ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ 1146 ಕೋಟಿ ಅನುದಾನ ನೀಡುವ ಮೂಲಕ ಕ್ಷೇತ್ರದ ಜನರ ಋಣ ತೀರಿಸಲು ನನಗೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದು ಬಣ್ಣಿಸಿದರು.
ಹತ್ತಾರು ವರ್ಷಗಳಿಂದ ರೈತರ ಬೇಸಾಯಕ್ಕೆ ವಿದ್ಯುತ್ ಕೊರತೆಯಿಂದಾಗಿ ಅನ್ನದಾತರ ಸಮಸ್ಯೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಇಂದು ಸೋಮನಹಳ್ಳಿ ಬಳಿ 220 ಕೆ.ವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದು, ಇನ್ನು ಮುಂದೆ ವಿದ್ಯುತ್ ಸಮಸ್ಯೆಗೆ ಮುಕ್ತಿ ನೀಡಲಾಗುವುದು ಎಂದರು.
ಮದ್ದೂರು ತಾಲೂಕು ಕೊನೆ ಭಾಗಕ್ಕೆ ಕೆ.ಆರ್.ಎಸ್ ಅಣೆಕಟ್ಟೆಯಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಲು ನಾಲೆಗಳ ಅಭಿವೃದ್ಧಿಯಾಗಬೇಕಿದೆ.
ಈಗಾಗಲೇ ಕಾವೇರಿ ನೀರಾವರಿ ನಿಗಮದ ವತಿಯಿಂದ 500 ಕೋಟಿಗೂ ಹೆಚ್ಚು ಅನುದಾನದಲ್ಲಿ ಕೆಮ್ಮಣ್ಣುನಾಲೆ, ಬೈರನ್ ನಾಲೆ, ಮದ್ದೂರು ಕೆರೆ, ಸೂಳೆಕೆರೆ ಅಚ್ಚುಕಟ್ಟು ಪ್ರದೇಶದ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ. ಅದೇ ರೀತಿ ವಿವಿಧ ನಾಲೆಗಳ ಅಭಿವೃದ್ಧಿ ಮತ್ತು ಶಿಂಷಾ ಬಲದಂಡೆಯ ಕೆರೆಗಳ ಪುನಶ್ಚೇತನಕ್ಕೆ ಅನುದಾನ ನೀಡುವಂತೆ ಕೋರಿದರು.
ಇನ್ನು ಮದ್ದೂರು ಪಟ್ಟಣದ ಪೇಟೆ ಬೀದಿ ಅಗಲೀಕರಣಕ್ಕೆ ಅನುದಾನ, ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ, ಪಾಲಿಟೆಕ್ನಿಕ್ ಕಾಲೇಜು, ಕಾನೂನು ಕಾಲೇಜು, ನ್ಯಾಯಾಲಯ ಸಿಬ್ಬಂದಿಗಳಿಗೆ ವಸತಿಗೃಹ, ಭಾರತೀನಗರವನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಶಾಸಕ ಕೆ.ಎಂ.ಉದಯ್ ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು.
ಇನ್ನು ಕಾರ್ಯಕ್ರಮದಲ್ಲಿ ಮದ್ದೂರು ಪಟ್ಟಣದ ಪೇಟೆ ಬೀದಿ ಅಗಲೀಕರಣಕ್ಕೆ ಅನುದಾನ ನೀಡುವಂತೆ ಶಾಸಕ ಉದಯ್ ಅವರ ಮನವಿಯ ಮೇರೆಗೆ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಶಾಸಕ ಉದಯ್ ಕ್ಷೇತ್ರದ ಜನರ ಪರವಾಗಿ ಅಭಿನಂದನೆ ಸಲ್ಲಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ನಾನು ಎಲ್ಲಾ ಹೆಣ್ಮಕ್ಕಳ ಪರವಾಗಿ ಬಂದು ದೂರು ನೀಡಿದ್ದೇನೆ: ನಟಿ ರಮ್ಯಾ
ಬೆಂಗಳೂರು ವಿಮಾನ ನಿಲ್ದಾಣ ಸೇವಾ ನಿಯಮಿತ ವತಿಯಿಂದ ತಿರುಚಿನಾಪಳ್ಳಿ ವಿಮಾನ ನಿಲ್ದಾಣದಲ್ಲಿ ಓ’ವೆಟ್ರಾ ಲೌಂಜ್ ಪ್ರಾರಂಭ