ಶಿವಮೊಗ್ಗ: ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಮಹಿಳಾ ನೌಕರರಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಂತ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ಸಾಗರದ ಸರ್ಕಾರಿ ನೌಕರರ ಸಂಘದ ಮಹಿಳಾ ಪದಾಧಿಕಾರಿಗಳು ಧನ್ಯವಾದ ತಿಳಿಸಿದ್ದಾರೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷೆ ಅನುಸೂಯ ತಲ್ವಾರ ಅವರು ಮುಟ್ಟಿನ ರಜೆ ನೀಡಿದ್ದು ಮಹಿಳಾ ನೌಕರರಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದಂತೆ ಆಗಿದೆ. ಮಹಿಳೆಯರ ಹೆಣ್ತನವನ್ನು ಅರ್ಥ ಮಾಡಿಕೊಂಡ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು ಅಂತ ಹೇಳಿದ್ದಾರೆ.
ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಬೇಕು ಎಂಬುದಾಗಿ ಮಹಿಳಾ ನೌಕರರ ಹಲವು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದಂತ ಸಿಎಸ್ ಷಡಕ್ಷರಿಯವರು ಸಿಎಂ, ಡಿಸಿಎಂ ಅವರಿಗೆ ಮನವರಿಕೆ ಮಾಡಿ ಬೇಡಿಕೆ ಈಡೇರಿಸುವಂತೆ ಮನವಿ ಮಾಡಲಾಗಿತ್ತು. ರಾಜ್ಯಾಧ್ಯಕ್ಷರ ಅವಿರತ ಶ್ರಮದಿಂದಾಗಿ ಇಂದು ಸಚಿವ ಸಂಪುಟ ಸಭೆಯಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯನ್ನು ವೇತನ ಸಹಿತ ನೀಡಲು ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಕಾರಣರಾದಂತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದಂತ ಸಿಎಸ್ ಷಡಕ್ಷರಿಗೆ ಅವರಿಗೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಹಿಳಾ ನೌಕರರೆಲ್ಲರೂ ಧನ್ಯವಾದವನ್ನು ಸಲ್ಲಿಸಿದ್ದಾರೆ ಎಂದರು.
ಉದ್ಯೋಗಸ್ಥ ಸರ್ಕಾರಿ ಹಾಗೂ ಖಾಸಗಿ ಮಹಿಳೆಯರಿಗೆ ಋತುಚಕ್ರ ರಜೆ ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಗಾರ್ಮೆಂಟ್ಸ್, ಕೈಗಾರಿಕೆಗಳಿಗೂ ಅನ್ವಯಿಸಲಿದೆ. ಹೆಣ್ಣುಮಕ್ಕಳಿಗೆ ಒಂದು ದಿನ ರಜೆ ನೀಡಲು ಒಪ್ಪಿಗೆ ನೀಡಿದ್ದು ಮಹತ್ವದ ನಿರ್ಧಾರವಾಗಿದೆ. ಇದರಿಂದ ಉದ್ಯೋಗ ಮಾಡುವ ಮಹಿಳೆಯರಿಗೆ ಅನುಕೂಲ ಆಗಲಿದೆ. ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಒಂದು ದಿನದ ರಜೆ ಸಿಗಲಿದೆ ಎಂದು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಮಹಿಳಾ ಪದಾಧಿಕಾರಿಗಳಾದಂತ ಕುಮಾರಿ ಸುಮಾ, ವಿದ್ಯಾ.ಎಂ.ಪಿ, ಅಭಿಷ ಸಂತಸ ಹಂಚಿಕೊಂಡಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಾಲೆಗಳಲ್ಲಿ ನಾಡಗೀತೆಯ ಹಾಡುವಿಕೆ ಕಡ್ಡಾಯದ ಆದೇಶವನ್ನು ಅನುಷ್ಠಾನ ಮಾಡಿ: ಬಿಳಿಮಲೆ ಖಡಕ್ ಸೂಚನೆ