ಬೆಂಗಳೂರು: ವಿಧಾನಸೌಧದ ಕಚೇರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶಾಲಿನಿ ರಜನೀಶ್ ಅವರ ನೇತೃತ್ವದಲ್ಲಿ “ಶರಾವತಿ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆಗಳು ಹಾಗೂ ಭೂ ಹಕ್ಕಿಗೆ ಸಂಬಂಧಿಸಿದಂತೆ” ಮಹತ್ವದ ಸಭೆ ನಡೆಸಲಾಯಿತು.
“ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾದ ವಿಷಯಗಳು”
♦️ಶಿವಮೊಗ್ಗ ಜಿಲ್ಲೆಯಲ್ಲಿನ ಸೊಪ್ಪಿನಬೆಟ್ಟ ಮತ್ತು ಕಾನು ಭೂಮಿಗಳ ಅನಧೀಕೃತ ಸಾಗುವಳಿ ಸಕ್ರಮಗೊಳಿಸುವ ಕುರಿತು.
♦️ಹಂಗಾಮಿ ಮನೆಗಳ ಪತ್ರಗಳನ್ನು ಖಾಯಂಗೊಳಿಸುವ ಕುರಿತು.
♦️ಕಂದಾಯ ದಾಖಲೆಗಳಲ್ಲಿ ತಪ್ಪಾಗಿ ನಮೂದಿಸಲಾಗಿರುವ ಸೂಚಿತ ಅರಣ್ಯ (ಪಿಎಫ್) ಎಂಬ ಉಲ್ಲೇಖವನ್ನು ಕೈಬಿಡುವ ಕುರಿತು.
♦️ ಕರ್ನಾಟಕ ಅರಣ್ಯ ಕಾಯ್ದೆ 1963 ರ ಸೆಕ್ಷನ್ 4 ರ ಅಡಿಯಲ್ಲಿ ಮೀಸಲು ಅರಣ್ಯದ ಅಂತಿಮ ಅಧಿಸೂಚನೆಗೆ ಕಾಲಮಿತಿ ನಿಗದಿಪಡಿಸುವುದು ಮತ್ತು ಅನುಮೋದನೆ ನೀಡುವ ಕುರಿತು.
♦️ಮೈಸೂರು ಸರ್ಕಾರದಿಂದ ನೀಡಲಾದ ಹಕ್ಕುಪತ್ರಗಳಿಗೆ ಇ-ಸ್ವತ್ತು ದಾಖಲೆ ಸೃಜಿಸುವ ಕುರಿತು.
♦️ಸರ್ಕಾರದ ವಿವಿಧ ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಮುಳುಗಡೆ ಸಂತ್ರಸ್ತರ ಪುನರ್ವಸತಿ ಜಮೀನುಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಕುರಿತು.
♦️27.04.1978 ರ ಪೂರ್ವದ ಮೂರು ಎಕರೆ ಅರಣ್ಯ ಭೂಮಿಯನ್ನು ಸಕ್ರಮಗೊಳಿಸುವುದು ಮತ್ತು ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ 2006 ರ ಅಡಿಯಲ್ಲಿ ಅರಣ್ಯ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ವಿಷಯಗಳನ್ನು ಸೇರಿದಂತೆ ಈ ಭಾಗದ ಅನೇಕ ಸಮಸ್ಯೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.
ಜೊತೆಗೆ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲ್ಲೂಕುಗಳ ವ್ಯಾಪ್ತಿಯಲ್ಲಿನ ವಾರಾಹಿ, ಚಕ್ರ, ಸಾವೆಹಕ್ಲು, ಭಧ್ರಾ, ತುಂಗಾ ಹಾಗೂ ಇನ್ನಿತರೆ ವಿದ್ಯುತ್ ಮತ್ತು ನೀರಾವರಿ ಯೋಜನೆಗಳ ಮುಳುಗಡೆ ಸಂತ್ರಸ್ತರ ಭೂ ಹಕ್ಕಿಗೆ ಸಂಬಂಧಿಸಿದ ಸಮಸ್ಯೆಗಳು ಹಾಗೂ 0.05 ಗುಂಟೆ ಒಳಗಿನ ವಿಸ್ತೀರ್ಣದ ಕಂದಾಯ ನಿವೇಶನವನ್ನು ಭೂ ಪರಿವರ್ತನೆ ಮಾಡುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರವು ಅಗತ್ಯ ಕ್ರಮ ಕೈಗೊಂಡು, ಅರಣ್ಯ ಮತ್ತು ಕಂದಾಯ ಭೂ ಹಕ್ಕಿನ ಶಿವಮೊಗ್ಗ ಜಿಲ್ಲೆಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಯಿತು.
ಸಭೆಯಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಾರದಾ ಪೂರ್ಯಾನಾಯ್ಕ್, ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಬಲ್ಕೀಶ್ ಬಾನು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಶ್ರೀ ಅಂಜುಂ ಪರ್ವೇಜ್ ಹಾಗೂ ಹಿರಿಯ ವಕೀಲರಾದ ಶ್ರೀ ಜಯಂತ್, ಶ್ರೀ ರಮೇಶ್ ಹೆಗ್ಡೆ, ಶ್ರೀ ಶೇಖರ್ ಸೇರಿದಂತೆ ಕಂದಾಯ ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗಡೆ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಹಾಜರಿದ್ದರು.