ಬೆಂಗಳೂರು: ಈಡಿಗ ಸಮುದಾಯ ಎಂಜನಿಯರಿಂಗ್ ಕಾಲೇಜಷ್ಟೇ ಅಲ್ಲ, ಮೆಡಿಕಲ್ ಕಾಲೇಜನ್ನೂ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ‘ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ’ ಉದ್ಘಾಟಿಸಿ ಮಾತನಾಡಿ, ಈಡಿಗ – ಬಿಲ್ಲವ ಸಮಾಜದ ಸಮುದಾಯ ಭವನ ನಿರ್ಮಾಣ, ಹಾಸ್ಟೆಲ್ ನಿರ್ಮಾಣಕ್ಕೆ ಸ್ಥಳ ಒದಗಿಸಿದವುದೂ ಸೇರಿದಂತೆ ನಮ್ಮ ಸರ್ಕಾರ ಅನುದಾನವನ್ನು ನೀಡಲಿದೆ. ಈಡಿಗರು, ಬಿಲ್ಲವರ ಅಭಿವೃದ್ಧಿ ನಿಗಮ ಈಗಾಗಲೇ ಘೋಷಣೆಯಾಗಿದೆ. ಕಾನೂನುನಾತ್ಮಕವಾಗಿ ಅವುಗಳನ್ನು ನೋಂದಣಿ ಮಾಡುವ ಕಾರ್ಯ ಆಗಬೇಕಾಗಿದೆ. ದೇವರಾಜ ಅರಸು ನಿಗಮದಲ್ಲಿ ಇದಕ್ಕಾಗಿ 10 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಅದರ ಬದಲಿಗೆ ನಿಗಮಗಳಲ್ಲಿಯೇ ಸ್ವತಂತ್ರವಾಗಿ ಇಡಲು ಕ್ರಮ ಕೈಗೊಳ್ಳಲಾಗುವುದು. ಕಂಪನಿ ಕಾಯ್ದೆ ಪ್ರಕಾರ ನೋಂದಣಿ ಮಾಡಲಾಗುವುದು ಎಂದರು.
ಬ್ರಹ್ಮ ಶ್ರೀ ನಾರಾಯಣ ಗುರುಗಳ ಚಿಂತನೆ, ಹೋರಾಟಗಳ ಉದ್ದೇಶವನ್ನು ಜನರು ಅರ್ಥೈಸಿಕೊಳ್ಳಬೇಕಿದೆ. ನಾರಾಯಣ ಗುರುಗಳು ಯಾವುದೇ ಒಂದು ಸಮುದಾಯ, ಜಾತಿಗೆ ಮೀಸಲಾಗದೇ, ಇಡೀ ಸಮಾಜದ ಆಸ್ತಿಯಾಗಿದ್ದಾರೆ. ಸಮಾಜದಲ್ಲಿರುವ ಜಾತಿವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆಯ ವಿರುದ್ಧ ಹೋರಾಟ ನಡೆಸಿದರು. ನಾರಾಯಣ ಗುರುಗಳು’ ವಿದ್ಯೆಯಿಂದ ಸ್ವತಂತ್ರರಾಗಿರಿ’ ಎಂಬ ಮಾತನ್ನು ಪ್ರತಿಪಾದಿಸಿದರು, ಇತಿಹಾಸದಲ್ಲಿ ನಮ್ಮ ಸಮಾಜದಲ್ಲಿ ಅನಕ್ಷರತೆಯಿತ್ತು, ಈಗ ಪರಿಸ್ಥಿತಿ ಕೊಂಚ ಸುಧಾರಿಸಿದೆ.
ದೇವಸ್ಥಾನಕ್ಕೆ ಪ್ರವೇಶ ದೊರೆಯದಿದ್ದರೆ, ದೇವಸ್ಥಾನವೇ ನಿಮ್ಮ ಬಳಿ ಕರೆತರಲು ಪ್ರಯತ್ನಿಸಿ ಎಂದು ನಾರಾಯಣಗುರುಗಳು ತಿಳಿಸಿದ್ದರು. ನಾರಾಯಣ ಗುರುಗಳ ಕಾಲಮಾನದಲ್ಲಿ ಕೇರಳದಲ್ಲಿ ಶೂದ್ರವರ್ಗದವರನ್ನು ತುಚ್ಛವಾಗಿ ಕಾಣುವ ಪರಿಸ್ಥಿತಿಯಿತ್ತು. ಪರ್ಯಾಯ ವ್ಯವಸ್ಥೆಯನ್ನು ನಾರಾಯಣ ಗುರುಗಳು ಹುಡುಕಿದರು. ಅವರು ಮೊದಲನೇ ದೇವಸ್ಥಾನ ಕಟ್ಟಿದ್ದು 1885ರಲ್ಲಿ. ಅಲ್ಲಿಂದೀಚೆಗೆ 150ಕ್ಕೂ ಹೆಚ್ಚು ದೇವಸ್ಥಾನಗಳನ್ನು ಕಟ್ಟಿದರು. ಮೇಲ್ಜಾತಿಯವರೇ ಪೂಜಾರಿಗಳಾಗಬೇಕೆಂದು ದೇವರು ಹೇಳಿಲ್ಲ. ಪೂಜಾರಿಗಳಾದವರಿಗೆ ತರಬೇತಿ ಕೊಡುವ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ. ಒಂದು ಜಾತಿ, ಒಂದು ಮತ, ಒಂದು ದೇವರು ಎಂಬ ಮಾತುಗಳನ್ನು ಅವರು ಹೇಳಿದರು.
ನಮಗೆ ದೊರೆತಿರುವ ಸ್ವಾತಂತ್ರ್ಯ ಯಶಸ್ವಿಯಾಗಬೇಕಾದರೆ ಶಕ್ತಿ ಇಲ್ಲದವರನ್ನು ಶಕ್ತಿಯುತರಾಗಿಸಬೇಕು. ಆಗ ಮಾತ್ರ ನಿಜವಾದ ಸ್ವಾತಂತ್ರ್ಯ ದೊರೆಯುತ್ತದೆ. ಬಸವಣ್ಣನ ಕಾಲದಿಂದಲೂ ಜಾತಿ, ವರ್ಗ ಹೋಗಬೇಕೆಂದು ಹೇಳುತಾ ಬಂದಿದ್ದರೂ ಜಾತಿ ವರ್ಗ ಹೋಗಿಲ್ಲ. ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಎಲ್ಲರಿಗೂ ಸಮಾನ ಅವಕಾಶಗಳು ದೊರೆಯಬೇಕು ಎಂದಿದ್ದರೂ ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಿಲ್ಲ.
ಬಸವಣ್ಣವ ವಚನವನ್ನು ಹೇಳುತ್ತಲೇ ಯಾವ ಜಾತಿ ಎಂದು ಕೇಳುತ್ತೇವೆ. ಇದನ್ನು ಹೋಗಲಾಡಿಸಬೇಕಾದರೆ ಆರ್ಥಿಕ, ಸಾಮಾಜಿಕವಾಗಿ ಸ್ವಾವಲಂಬಿಗಳಾಗಬೇಕು. ಅದಕ್ಕಾಗಿ ಕಸುಬು ಯಾವುದೇ ಇದ್ದರೂ ವಿದ್ಯೆ ಕಲಿಯಲೇಬೇಕು. ವೈದ್ಯರು, ಇಂಜಿನಿಯರ್, ಪ್ರೊಫೆಸರ್, ವಿಜ್ಞಾನಿಗಳಾಗಬೇಕು. ವೈದ್ಯರು, ಇಂಜಿನಿಯರ್ ಅಥವಾ ವಿಜ್ಞಾನಿಗಳಾಗುವುದು ಯಾರೊಬ್ಬರ ಸ್ವತ್ತಲ್ಲ. ಎಲ್ಲರಿಗೂ ಸಾಮರ್ಥ್ಯವಿದೆ. ನಾನು ಕುರುಬ ಜಾತಿಯಲ್ಲಿ ಹುಟ್ಟಿದ್ದರೂ ಮುಖ್ಯಮಂತ್ರಿಯಾಗಿಲ್ಲವೆ. ಹುಟ್ಟಿನಿಂದ ಎಲ್ಲವೂ ನಿರ್ಧಾರವಾಗುವುದಿಲ್ಲ. ಅವಕಾಶಗಳು ದೊರೆಯುವುದು ಹಾಗೂ ಅದನ್ನು ಬಳಕೆ ಮಾಡುವುದರ ಮೇಲೆ ನಿರ್ಧಾರವಾಗುತ್ತದೆ. ಜಾಲಪ್ಪ ಅವರು ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ಯೋಚನೆ ಮಾಡದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ.
ಸರ್ಕಾರ ಎಲ್ಲರಿಗೂ ಉಚಿತ ಶಿಕ್ಷಣ ನೀಡುತ್ತಿದೆ. ಕಡ್ಡಾಯ ಶಿಕ್ಷಣ ನೀಡಲು ಬದ್ಧವಾಗಿದೆ. ಪೋಷಕರು ತಾವು ಯಾವುದೇ ವೃತ್ತಿಯನ್ನು ಮಾಡುತ್ತಿರಲಿ, ಮಕ್ಕಳಿಗೆ ಮಾತ್ರ ಒಳ್ಳೆಯ ಶಿಕ್ಷಣ ಕೊಡಿಸಿ ಅವರನ್ನು ವಿದ್ಯಾವಂತರನ್ನಾಗಿ ಮಾಡುವುದು ತಂದೆ ತಾಯಿಗಳ ಕರ್ತವ್ಯ. ವಿದ್ಯೆ ಇಲ್ಲದೆ ಹೋಗಿದ್ದರೆ ದೇವರಾಜ ಅರಸು ಅವರನ್ನು ಮೊದಲ್ಗೊಂಡು, ನಾನಾಗಲಿ, ಬಂಗಾರಪ್ಪನವರಾಗಲಿ, ವೀರಪ್ಪ ಮೊಯ್ಲಿ ಅವರಾಗಲಿ, ಎಸ್. ಎಂ.ಕೃಷ್ಣ ಅವರಾಗಲಿ, ದೇವೇಗೌಡ ಅವರಾಗಲಿ ಮುಖ್ಯಮಂತ್ರಿಗಳಾಗಲು ಸಾಧ್ಯವಿತ್ತೆ? ಎಲ್ಲಾ ಸಾಧನೆಗಳಿಗೂ ಶಿಕ್ಷಣವೇ ಅಡಿಪಾಯ ಎಂದು ಶಿಕ್ಷಣದ ಮಹತ್ವವನ್ನು ನಾರಾಯಣ ಗುರುಗಳು ಪದೇ ಪದೇ ಹೇಳುತ್ತಿದ್ದರು.
ಸರ್ಕಾರದ ವತಿಯಿಂದ ಸುಮಾರು 31 ಜಯಂತಿಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಸುಮಾರು 15 ಜಯಂತಿಗಳ ಆಚರಣೆ ಜಾರಿಗೆ ತಂದಿದ್ದು ನಮ್ಮ ಸರ್ಕಾರ. 2016ರಲ್ಲಿ ನಾರಾಯಣ ಗುರುಗಳ ಜಯಂತಿ ಆಚರಣೆ ಪ್ರಾರಂಭಿಸಿದ್ದು ನಮ್ಮದೇ ಸರ್ಕಾರದ ಅವಧಿಯಲ್ಲಿ. ನಿಮ್ಮ ಸಮುದಾಯಗಳ ಎಲ್ಲಾ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದು ನೀವು ನಾರಾಯಣ ಗುರುಗಳಿಗೆ ಸಲ್ಲಿಸುವಂತಹ ಗೌರವ. ನಾವೆಲ್ಲ ಅವರ ಚಿಂತನೆಗಳನ್ನು ರೂಢಿಸಿಕೊಂಡು ಸಾಗಬೇಕಿದೆ ಎಂದು ಹೇಳಿದ್ದಾರೆ.
ನಾನು ಸದಾ ಅವಕಾಶ ವಂಚಿತರ ಪರ, ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ನಮ್ಮ ಸರ್ಕಾರವು ಅದಕ್ಕೆ ಬದ್ಧವಾಗಿರುತ್ತದೆ. ನನ್ನ ರಾಜಕೀಯ ಜೀವನವನ್ನೇ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟಿದ್ದೇನೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ "ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ" ಕಾರ್ಯಕ್ರಮವನ್ನು ಉದ್ಘಾಟಿಸಿ, ಧಾರ್ಮಿಕ ಸುಧಾರಣೆಯ ಮೂಲಕ ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆದ ಗುರುಗಳಿಗೆ ಶಿರಬಾಗಿ ನಮಿಸಿದೆ.
ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರು ಹಾಗೂ… pic.twitter.com/2rObjGBx1Z
— Siddaramaiah (@siddaramaiah) September 7, 2025