ಬೆಂಗಳೂರು: ಮೊದಲ ಸುತ್ತಿನ ಸೀಟು ಹಂಚಿಕೆ ನಂತರದ ಪ್ರವೇಶ ಪ್ರಕ್ರಿಯೆ ಸದ್ಯ ನಡೆಯುತ್ತಿದ್ದು, ವೈದ್ಯಕೀಯ/ದಂತ ವೈದ್ಯಕೀಯ ಹೊರತುಪಡಿಸಿ ಇತರ ಕೋರ್ಸ್ ಗಳಿಗೆ ಛಾಯ್ಸ್-1 ಅನ್ನು ಆಯ್ಕೆ ಮಾಡಿದವರಿಗೆ ಕಾಲೇಜು ಪ್ರವೇಶದ ಕೊನೆ ದಿನಾಂಕವನ್ನು ಆಗಸ್ಟ್ 14ವರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಿಸ್ತರಿಸಿದೆ.
ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸೀಟು ಹಂಚಿಕೆಯಾದವರಿಗೆ ಛಾಯ್ಸ್ ಆಯ್ಕೆಗೆ ಆಗಸ್ಟ್ 9ರಿಂದ ಅವಕಾಶ ನೀಡಲಾಗುವುದು. ಛಾಯ್ಸ್-1 ಆಯ್ಕೆ ಮಾಡಿದವರಿಗೆ ಶುಲ್ಕ ಕಟ್ಟಿ ಕಾಲೇಜು ಪ್ರವೇಶಕ್ಕೆ ಆಗಸ್ಟ್ 16ರವರೆಗೆ ಅವಕಾಶ ಇರುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರ ಮಟ್ಟದಲ್ಲಿ ದಿನಾಂಕಗಳನ್ನು ವಿಸ್ತರಿಸಿರುವ ಕಾರಣ ರಾಜ್ಯದಲ್ಲಿ ಕೂಡ ಬದಲಾವಣೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಡಿಪ್ಲೊಮಾ ಅಭ್ಯರ್ಥಿಗಳಿಗೆ 3ನೇ ಸುತ್ತಿನ ಸೀಟು ಹಂಚಿಕೆ:
ಅರ್ಹ ಡಿಪ್ಲೊಮಾ ಅಭ್ಯರ್ಥಿಗಳಿಗೆ 3ನೇ ಸುತ್ತಿನ (ಅಂತಿಮ ಸುತ್ತು) ಸೀಟು ಹಂಚಿಕೆ ಪ್ರಕ್ರಿಯೆ ಆ.14ರಂದು ಆರಂಭವಾಗಲಿದ್ದು, ಮೊದಲನೇ ಹಾಗೂ ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಪಡೆಯದ ಅಭ್ಯರ್ಥಿಗಳು ಹೊಸದಾಗಿ ಆಪ್ಷನ್ ಗಳನ್ನು ದಾಖಲಿಸಿ ಭಾಗವಹಿಸಬಹುದು ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.
ಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳು ಹೊಸದಾಗಿ ನೋಂದಣಿ ಮಾಡಿ ಹೊಸದಾಗಿ ಆಪ್ಷನ್ ಗಳನ್ನು ದಾಖಲಿಸಿ ಭಾಗವಹಿಸಬಹುದು. ಅಲ್ಲದೇ, ಆ.12ರಂದು ದಾಖಲೆ ಪರಿಶೀಲನೆಗೆ ಹಾಜರಾಗುವ ಹಾಗೂ ಅರ್ಹತೆ ಪಡೆಯುವ ಅಭ್ಯರ್ಥಿಗಳು 3ನೇ ಸುತ್ತಿನ (ಅಂತಿಮ ಸುತ್ತು) ಸೀಟು ಹಂಚಿಕೆಯಲ್ಲಿ ಲಭ್ಯವಿರುವ ಸೀಟುಗಳಿಗೆ ಇಚ್ಛೆ /ಆಯ್ಕೆಗಳನ್ನು ದಾಖಲಿಸಿ ಭಾಗವಹಿಸಬಹುದು ಎಂದು ತಿಳಿಸಲಾಗಿದೆ. .
ಆರ್ಕಿಟೆಕ್ಟರ್ ಕೋರ್ಸಿಗೆ ರಾಂಕ್ ಪಡೆದಿರುವ ಅಭ್ಯರ್ಥಿಗಳು ಇಚ್ಛೆ /ಆಯ್ಕೆಗಳನ್ನು ದಾಖಲಿಸಿ ಭಾಗವಹಿಸಬಹುದು. ವೃತ್ತಿನಿರತ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಪಾಲ್ಗೊಳ್ಳಬಹುದು. ಇಚ್ಛೆ / ಆಯ್ಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ನಿಯಮಾನುಸಾರ ಪ್ರವೇಶ ಪಡೆಯಲು ಅರ್ಹತೆ ಇರುವ ಕಾಲೇಜುಗಳನ್ನು ಮಾತ್ರ ದಾಖಲಿಸಬೇಕೆಂದು ಸೂಚಿಸಲಾಗಿದೆ. ಅಭ್ಯರ್ಥಿಗಳು ದಾಖಲಿಸುವ ಇಚ್ಛೆ / ಆಯ್ಕೆಗಳನ್ನು ಪರಿಗಣಿಸಿ ಸೀಟು ಹಂಚಿಕೆ ಮಾಡುವುದರಿಂದ ಸೀಟು ಹಂಚಿಕೆಯ ನಂತರ ಉಂಟಾಗುವ ಪರಿಣಾಮಗಳಿಗೆ ಅಭ್ಯರ್ಥಿಗಳೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ.
ವಿವರ ವೇಳಾಪಟ್ಟಿ ಸದ್ಯದಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
BREAKING: ಸಾಗರದ ಆಸ್ಪತ್ರೆಯಲ್ಲಿ ‘ಜನರೇಟರ್ ಕಳ್ಳತನ’ ಕೇಸ್: ‘ಕಚೇರಿ ಅಧೀಕ್ಷಕ ಸುನೀಲ್’ ಸೇವೆಯಿಂದ ಅಮಾನತು