ಶಿವಮೊಗ್ಗ: ಸಾಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಬೇಕಿರುವಂತ ಎಲ್ಲಾ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ಬದ್ಧನಾಗಿದ್ದೇನೆ. ಕಾಲೇಜಿಗೆ ಯಾವುದೇ ಮೂಲಸೌಕರ್ಯದ ಕೊರತೆಯಾಗದಂತೆ ಕ್ರಮವಹಿಸುವುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಿಡಿಸಿ ಸಭೆ ನಡೆಸಿ ಮಾತನಾಡಿದಂತ ಅವರು, ಕಾಲೇಜಿನಲ್ಲಿ ಮೂಲ ಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಎರಡು ಕಟ್ಟಡ, ಹಿಂಭಾಗದಲ್ಲಿ ಕಟ್ಟಡವೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ಮೂರನೇ ಮಹಡಿಯಲ್ಲಿ ರಂಗಮಂದಿರ ನಿರ್ಮಿಸಲಾಗುತ್ತಿದೆ. ಅದಕ್ಕೆ ಟೈಲ್ಸ್ ಬಾಕಿ ಇದ್ದು, ಅದನ್ನು ಹಾಕಿಸಿಕೊಡುವುದಾಗಿ ಹೇಳಿದರು.

ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆ
ಕಾಲೇಜಿಗೆ ಬಣ್ಣ ಹೊಡೆಸಿಕೊಡುವಂತೆ ಮನವಿ ಮಾಡಲಾಗಿದೆ. ಅದರಂತೆ ಬಣ್ಣವನ್ನು ಹೊಡೆಸಿಕೊಡಲಾಗುತ್ತದೆ. ಇಂಟರ್ ಲಾಕ್ ಕೂಡ ಮಾಡಿಸಿಕೊಡಲಾಗುತ್ತದೆ. ಕಾಲೇಜಿನಲ್ಲಿ 613 ವಿದ್ಯಾರ್ಥಿಗಳಿದ್ದು ಉತ್ತಮ ಪಾಠ ಪ್ರವಚನ ನಡೆಯುತ್ತಿದೆ. ಶಿಕ್ಷಣಕ್ಕೆ ನನ್ನ ಮೊದಲ ಆದ್ಯತೆಯಾಗಿದೆ. ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂಬುದಾಗಿಯೂ ತಿಳಿಸಿದರು.
ಶಾಲೆ ಒಂದು ದೇವಾಲಯವಿದ್ದಂತೆ. ಇಲ್ಲಿ ಬರುವಂತ ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗಬಾರದು. ನಾನು ಆಗಾಗ ಭೇಟಿ ನೀಡಲಿದ್ದೇನೆ. ಏನಾದರೂ ದೂರುಗಳು ಬಂದರೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇನೆ. ಸುಮ್ಮನಿರಲ್ಲ ಎಂಬುದಾಗಿ ಎಚ್ಚರಿಸಿದರು.
ತಮ್ಮ ಕಾಲೇಜು ದಿನಗಳನ್ನು ನೆನೆದ ಶಾಸಕರು
ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ನಾನು ಪಿಯುಸಿಗೆ ವ್ಯಾಸಂಗ ನಿಲ್ಲಿಸುವಂತೆ ಆಯ್ತು. ಆ ರೀತಿ ಬೇರೆ ಯಾರಿಗೂ ಆಗಬಾರದು. ಚೆನ್ನಾಗಿ ಓದಿ, ಕಾಲೇಜಿಗೆ ಕೀರ್ತಿಯನ್ನು ತರಬೇಕು ಎಂದರು.
ನೆಹರು ಮೈದಾನದಲ್ಲಿ 40 ಲಕ್ಷದಲ್ಲಿ ರಂಗಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಶೌಚಾಲಯ ಕೊರತೆಯಿತ್ತು. ಅದನ್ನು ನಿರ್ಮಾಣ ಮಾಡಲಾಗುತ್ತದೆ. ಇದಲ್ಲದೇ ಡ್ರೆಸಿಂಗ್ ರೂಂ ಕೂಡ ನಿರ್ಮಿಸಲಾಗುವುದು ಎಂದರು.

ನಾಳೆಯಿಂದ ಪುಂಡರ ಹಾವಳಿ ಬಂದ್ ಮಾಡಬೇಕು, ಪೊಲೀಸರಿಗೆ ಖಡಕ್ ಸೂಚನೆ
ಸಾಗರ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಹೆಚ್ಚಾಗಿದೆ ಎಂಬುದಾಗಿ ಪ್ರಾಂಶುಪಾಲರು ಶಾಸಕರ ಗಮನಕ್ಕೆ ತಂದರು. ಕೂಡಲೇ ಸಾಗರ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಅವರಿಗೆ ಪೋನ್ ಮಾಡಿ, ಸಿಡಿಸಿ ಸಭೆಗೆ ಬರುವಂತೆ ಸೂಚಿಸಿದರು. ಶಾಸಕರ ಸೂಚನೆಯಂತೆ ಸಭೆಗೆ ಆಗಮಿಸಿದಂತ ಪಿಐ ಪುಲ್ಲಯ್ಯ ರಾಥೋಡ್ ಅವರಿಗೆ ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ತಡೆಗಟ್ಟುವಂತೆ ಖಡಕ್ ಸೂಚನೆ ನೀಡಿದರು.
ಶಾಸಕರು ಕರೆದರೂ ಬಾರದ ಪಿಎಸ್ಐ ನಾಗರಾಜ್ ವಿರುದ್ಧ ಎಸ್ ಪಿಗೆ ದೂರು
ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಸಿಡಿಸಿ ಸಭೆಯ ವೇಳೆಯಲ್ಲಿ ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಬಗ್ಗೆ ಚರ್ಚೆಯಾದಾಗ ಸಭೆಗೆ ಪೊಲೀಸರಿಗೆ ಬರುವಂತೆ ಸೂಚಿಸಲಾಗಿತ್ತು. ಆದರೇ ಕಾಲೇಜು ಬಳಿ ಬಂದರೂ ಒಳಗೆ ಬಾರದಂತ ಸಾಗರ ಪೇಟೆ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಅವರ ನಡೆಯ ಬಗ್ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಕೆಂಡಾಮಂಡಲವಾದರು.
ಕೂಡಲೇ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಗೆ ಕರೆ ಮಾಡಿದಂತ ಅವರು, ನೋಡಿ ಸಾಗರದ ಬಾಲಕಿಯರ ಪಿಯು ಕಾಲೇಜು ಬಳಿಯಲ್ಲಿ ಪುಂಡರ ಹಾವಳಿ ಇದೆ. ಕ್ರಮ ಕೈಗೊಳ್ಳುವಂತೆ ಸೂಚಿಸಿದಾಗ ಪೊಲೀಸ್ ಇನ್ಸ್ ಪೆಕ್ಟರ್ ಪುಲ್ಲಯ್ಯ ರಾಥೋಡ್ ಬಂದಿದ್ದಾರೆ. ಆದರೇ ಪಿಎಸ್ಐ ನಾಗರಾಜ್ ಮಾತ್ರ ಸ್ಥಳಕ್ಕೆ ಬರುವಂತೆ ಸೂಚಿಸಿದರೂ ಬಂದಿಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಯುವ ಸಂಸತ್ತಿನಲ್ಲಿ ಜಿಲ್ಲಾ ಮಟ್ಟದಲ್ಲಿ ಗೆದ್ದು ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಶಾಸಕರಿಂದ ಸನ್ಮಾನ
ಸಾಗರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿಂದುಶ್ರೀ ಯುವ ಸಂಸತ್ತಿನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದರು. ಈ ವಿಷಯ ತಿಳಿದು ಸಂತಸಗೊಂಡಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಬಿಂದುಶ್ರೀಗೆ ಶಾಲು, ಹೂವಿನ ಹಾರ ಹಾಕಿ ಸನ್ಮಾನಿಸಿ ಪ್ರೋತ್ಸಾಹಿಸಿದರು. ಕಾಲೇಜಿಗೆ ಮತ್ತಷ್ಟು ಕೀರ್ತಿ ತರುವಂತೆ ಹುರಿದುಂಬಿಸಿದರು.
ಸಿಡಿಸಿ ಸಭೆಯ ವೇಳೆ ಸಿಡಿಸಿಯ ಸುಮಂಗಲ, ಹಿಂದೂಮತಿ, ರಘುರಾಂ, ಪ್ರಾಚಾರ್ಯರಾದಂತ ಅರುಣ್ ಕುಮಾರ್, ತ್ಯಾಗಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಶಿವಮೊಗ್ಗ: ಮಳೆಯಿಂದ ಸಮಸ್ಯೆ ತಡೆಯಲು ಹಾಲಂಬಿ ಹಳ್ಳಕ್ಕೆ ಸೇತುವೆ ತಡೆಗೋಡೆ- ಶಾಸಕ ಗೋಪಾಲಕೃಷ್ಣ ಬೇಳೂರು
ಶಿವಮೊಗ್ಗ: ನಾಳೆ ಸೊರಬದ ಉಳವಿಯಲ್ಲಿ ‘ಈದ್ ಮಿಲಾದ್’ ಪ್ರಯುಕ್ತ ‘ಬೃಹತ್ ರಕ್ತದಾನ ಶಿಬಿರ’







