ಮಂಡ್ಯ : ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ ಪ್ರವಾಸವು ಮಕ್ಕಳ ನೆನಪುಗಳಲ್ಲಿ ಖಜಾನೆಯಾಗಲಿ ಎಂದು ಶಾಸಕ ಕೆ.ಎಂ.ಉದಯ್ ಕಿವಿಮಾತು ಹೇಳಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ 4 ದಿನಗಳ ಕಾಲ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ವಿಧ್ಯಾರ್ಥಿಗಳಲ್ಲಿ ಜ್ಞಾನ ವಿಸ್ತರಣೆಯ ಜೊತೆಗೆ ನಮ್ಮ ರಾಜ್ಯದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯ ಕುರಿತು ಆಳವಾದ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಸರ್ಕಾರದಿಂದ 2025-26 ನೇ ಸಾಲಿನ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ 8,9, ಮತ್ತು 10 ನೇ ತರಗತಿಯ ಪ್ರತಿಭಾವಂತ 80 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 4 ದಿನಗಳ ಕಾಲ ಕರ್ನಾಟಕ ದರ್ಶನ ಶೈಕ್ಷಣಿಕ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದರು.
ಶೈಕ್ಷಣಿಕ ಪ್ರವಾಸವು ಮಕ್ಕಳಲ್ಲಿ ಪರಿಸರ ಪ್ರೇಮ, ನಿಸರ್ಗದ ರಮ್ಯತೆಗಳು, ಇತಿಹಾಸ ಮತ್ತು ವಾಸ್ತುಶಿಲ್ಪಗಳ ಅಧ್ಯಯನ, ವೈವಿಧ್ಯಮಯ ಜನ ಸಮುದಾಯ ಮತ್ತು ವಿವಿಧ ಸಂಸ್ಕೃತಿಗಳ ಪರಿಚಯ, ಪಾರಂಪರಿಕ ತಾಣಗಳ ವೀಕ್ಷಣೆ ಮೂಲಕ ಜ್ಞಾನ ವಿಕಾಸಕ್ಕೆ ಪೂರಕವಾಗಲಿದೆ.
ಇವುಗಳ ಜೊತೆಗೆ ಮಕ್ಕಳಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಶೈಕ್ಷಣಿಕ ಪ್ರವಾಸ ಹೆಚ್ಚು ಮಹತ್ತರವಾಗಿದೆ. ಶೈಕ್ಷಣಿಕ ಪ್ರವಾಸಗಳು ಮಕ್ಕಳಲ್ಲಿ ಒಗ್ಗಟ್ಟು, ಸಹಬಾಳ್ವೆ, ಪರಸ್ಪರ ಸಹಕಾರ, ಜವಾಬ್ಧಾರಿ ನಿರ್ವಹಣೆ ಸೇರಿದಂತೆ ವಿವಿಧ ಸಂಸ್ಕೃತಿಗಳ ಮೆಚ್ಚುಗೆ ಹೀಗೆ ಹಲವು ಬಗೆಯ ಸೌಜನ್ಯಯುತ ನಡವಳಿಕೆಗಳನ್ನು ಮಕ್ಕಳು ಬೆಳೆಸಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಪಠ್ಯದಲ್ಲಿನ ಪರಿಕಲ್ಪನೆಗಳನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ತಿಳಿದಾಗ ಹೆಚ್ಚು ಸ್ಪಷ್ಟವಾಗಿ ನೆನಪಿನಲ್ಲಿ ಉಳಿಯುತ್ತದೆ. ಹಾಗಾಗಿ ಶೈಕ್ಷಣೀಕ ಪ್ರವಾಸಕ್ಕೆ ತನ್ನದೇ ಆದ ಮಹತ್ವವಿದೆ ಎಂದು ತಿಳಿಸಿದರು.
ದಿ.10 ರಿಂದ 14 ರವರೆಗೆ ಚಿತ್ರದುರ್ಗ, ಟಿ.ಬಿ ಡ್ಯಾಂ, ಹಂಪಿ, ಆಲಮಟ್ಟಿ, ಐಹೊಳೆ ಪಟ್ಟದಕಲ್ಲು, ಬಾದಾಮಿ, ಗೋಕರ್ಣ, ಮುರುಡೇಶ್ವರ, ಕೊಲ್ಲೂರು, ಉಡುಪಿ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದಾರೆ ಎಂದರು.
ಇದೇ ವೇಳೆ ಬಿಇಓ ಧನಂಜಯ, ಬಿಆರ್ಸಿ ನಾಗೇಶ್, ಇಸಿಓ ರಮೇಶ್, ರವಿ, ತಾ.ಫ್ರೌ.ಶಿಕ್ಷಕರ ಸಂಘದ ಅಧ್ಯಕ್ಷ ಅನಂತೇಗೌಡ, ಆನಂದ್, ಮಹೇಶ್, ಶಿವಲಿಂಗಯ್ಯ, ಕೆಎಸ್ಟಿಡಿಸಿ
ರುಕ್ಮಾಂಗದ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








