ದಕ್ಷಿಣ ಕನ್ನಡ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಂಜೂರಾತಿ ಹಾಗೂ ಈ ಕೆಳಕಂಡ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ಅಧಿಕೃತ ಮುದ್ರೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಒತ್ತಿದ್ದಾರೆ.
ದೇವಸ್ಥಾನದ ಕಾಮಗಾರಿ ಕೆಲಸಗಳನ್ನು ದೇವರಿಗೆ ಮಾಡುತ್ತಿರುವ ಸೇವೆ ಎಂದು ಪರಿಗಣಿಸಿ ಪ್ರಾಮಾಣಿಕವಾಗಿ ಮಾಡಲು ಕಾಮಗಾರಿ ನಡೆಸುವ ಕಾಂಟ್ರಾಕ್ಟರುಗಳು ಹಾಗೂ ವ್ಯವಸ್ಥಾಪನ ಸಮಿತಿಯ ಸದಸ್ಯರಿಗೆ ಮುಜರಾಯಿ ಸಚಿವರು ಹಿತನುಡಿಯನ್ನು ನುಡಿದರು.
ಶ್ರೀ ಕುಕ್ಕೆ ದೇವಸ್ಥಾನದ ಮಾಸ್ಟರ್ ಪ್ಲಾನ್ ಮೇಲ್ವಿಚಾರಣೆ ಮತ್ತು ವ್ಯವಸ್ಥಾಪನಾ ಸಮಿತಿ ಸಭೆ ನಡೆಸಿದರು. ಶ್ರೀ ಕುಕ್ಕೆ ದೇವಳದ ಮಾಸ್ಟರ್ ಪ್ಲಾನ್ ಯೋಜನೆಯ ಮೂರನೇ ಹಂತದಲ್ಲಿ ಪ್ರಥಮ ಆದ್ಯತೆಯಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳ ಯೋಜನೆಯ ನಕ್ಷೆ ಹಾಗೂ ಪರಿಗಣಿಸಿರುವ ಸೌಲಭ್ಯಗಳ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಸಚಿವರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೆಲವೊಂದು ಸಲಹೆಗಳನ್ನು ಸಚಿವರು ಸದಸ್ಯರುಗಳು ನೀಡಿದ್ದು, ಅವುಗಳನ್ನು ಅಳವಡಿಸಿಕೊಂಡು ಅನುಷ್ಠಾನ ಮಾಡಲು ಸೂಚನೆ ನೀಡಿದರು.
ಅಷ್ಟಮಂಗಲ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಿಗದಿ
1. ಶ್ರೀ ದೇವಳದ ತುಳಸಿ ತೋಟದಲ್ಲಿ ಆಶ್ಲೇಷ ಬಲಿ ಪೂಜಾ ಮಂದಿರದ ನಿರ್ಮಾಣ ದಾನಿಗಳಾದ ಮಾಜಿ ಮುಜರಾಯಿ ಇಲಾಖೆ ಸಚಿವರಾದ ಕೃಷ್ಣಯ್ಯ ಸೆಟ್ಟಿ ಅವರ ಅಳಿಯ ಜೈ ಪುನೀತ್ ರವರ ಮೂಲಕ ಸೇವಾ ರೂಪದಲ್ಲಿ ಅಂದಾಜು ಸುಮಾರು ₹.4.62 ಕೋಟಿ ಮೊತ್ತದಲ್ಲಿ ನಿರ್ಮಿಸಲು ಇಲಾಖೆಯ ವಾಸ್ತುಶಿಲ್ಪಿ ನಕ್ಷೆ ಮತ್ತು ವಿನ್ಯಾಸದೊಂದಿಗೆ ನಿರ್ಮಿಸಲು ಅನುಮೋದನೆ ನೀಡಿದ್ದು ಈ ಕುರಿತಾದ ಅನುಮತಿ ಪತ್ರವನ್ನು ಧಾನಿಗಳಿಗೆ ಹಸ್ತಾಂತರಿಸಿ ಕಾಮಗಾರಿಯನ್ನು ಅತ್ಯಂತ ಶೀಘ್ರವಾಗಿ ಮುಕ್ತಾಯಗೊಳಿಸಲು ವಿನಂತಿಸಿದರು.
2. ಶ್ರೀ ದೇವಳದ ಸುತ್ತು ಪೌಳಿ ನಿರ್ಮಾಣ ಕಾಮಗಾರಿ ಶಾಸ್ತ್ರದಂತೆ, ಅತ್ಯಂತ ಸುದೃಢವಾಗಿ ಎಲ್ಲಾ ಅಗತ್ಯ ವಾಸ್ತು ವಿನ್ಯಾಸಗಳನ್ನು ಅಳವಡಿಸಿಕೊಂಡು ಕೂಡಲೇ ನಿರ್ಮಿಸಲು ತಿಳಿಸಿದರು
3. ರಥ ಬೀದಿಯ ಬಲಭಾಗ ಹಾಗೂ ಅಂಗಡಿಗುಡ್ಡೆಯ ಸ್ಥಳವನ್ನು ಬಳಸಿಕೊಂಡು ಹೊಸದಾಗಿ, ಆಧುನಿಕ ತಂತ್ರಜ್ಞಾನ ಹಾಗೂ ಯಾಂತ್ರಿಕತೆಯನ್ನು ಅಳವಡಿಸಿಕೊಂಡು 5000 ಭಕ್ತಾದಿಗಳಿಗೆ ನಿರಂತರ ಅನ್ನದಾಸೋಹ ನೀಡುವ ರೀತಿಯಲ್ಲಿ ಸುಸಜ್ಜಿತವಾಗಿ ಅನ್ನದಾಸೋಹ ಭವನ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳಲು ಸಮ್ಮತಿಸಿದರು.
4. ಕುಕ್ಕೆ ಸುಬ್ರಹ್ಮಣ್ಯದ ಪ್ರಮುಖ ಸೇವೆಯಲ್ಲಿ ಒಂದಾದ ಸರ್ಪಸಂಸ್ಕಾರವನ್ನು ಪ್ರತ್ಯೇಕವಾಗಿ ಕೈಗೊಳ್ಳಲು ಅನೇಕ ಸೇವಾರ್ಥಿಗಳಿಂದ ಬೇಡಿಕೆ ಇರುವುದರಿಂದ, ಹಾಲಿ ಇರುವ ಆದಿ ಸುಬ್ರಹ್ಮಣ್ಯದ ಸಾಮೂಹಿಕ ಸರ್ಪಸಂಸ್ಕಾರ ಯಾಗ ಶಾಲೆಯ ಬಳಿ ಹೊಸದಾಗಿ 20 ಪ್ರತ್ಯೇಕ ಸರ್ಪ ಸಂಸ್ಕಾರ ಕೈಗೊಳ್ಳುವಂತೆ ಪ್ರತ್ಯೇಕ ಸರ್ಪಸಂಸ್ಕಾರ ಯಾಗ ಶಾಲೆ ನಿರ್ಮಾಣ ಮಾಡಲು ಸಮ್ಮತಿ.
5. ಹೆಚ್ಚುವರಿಯಾಗಿ ಮತ್ತಷ್ಟು ಪ್ರತ್ಯೇಕ ಸಪಸಂಸ್ಕಾರವನ್ನು ಕೈಗೊಳ್ಳಲು ಅನುಕೂಲವಾಗುವಂತೆ ಯೋಜನೆಯನ್ನು ರೂಪಿಸಲು ಸೂಚಿಸಿದರು.
6. ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳ ತಂಗುವಿಕೆಗೆ ಕೊಠಡಿಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಶ್ರೀ ದೇವಳದ ಇಂಜಾಡಿ ತೋಟದಲ್ಲಿ ಪ್ರತಿ ಬ್ಲಾಕ್ ನಲ್ಲಿ 224 ಕೊಠಡಿಗಳಿರುವ ಹಾಗೂ ಉಪಹಾರ ಮಂದಿರವನ್ನು ಒಳಗೊಂಡ ನಾಲ್ಕು ಬ್ಲಾಕ್ ಕಟ್ಟಡ ಸಮುಚ್ಚಯದಲ್ಲಿ ಒಟ್ಟು 896 ವಸತಿ ಗೃಹಗಳ ನಿರ್ಮಾಣ
7. ಶ್ರೀ ಕ್ಷೇತ್ರಕ್ಕೆ ಸಮೂಹ ಸಾರಿಗೆ ಅಥವಾ ಗುಂಪು ಪ್ರವಾಸ ಮೂಲಕ ಬರುವ ಭಕ್ತಾದಿಗಳಿಗೆ ಹಾಗೂ ಶೈಕ್ಷಣಿಕ ಪ್ರವಾಸ ಮೂಲಕ ಬರುವ ಶಾಲಾ ಮಕ್ಕಳಿಗೆ ಉಳಿದುಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ 20 ರಿಂದ 50 ಜನ ಉಳಿದುಕೊಳ್ಳುವ ಹಾಲ್ ಮಾದರಿಯಲ್ಲಿ ಡಾರ್ಮಿಟರಿ ವಸತಿಗೃಹ ಕಟ್ಟಡ ನಿರ್ಮಾಣ ಮಾಡಲು ಒಪ್ಪಿಗೆ ನೀಡಿದರು.
8. ಶ್ರೀ ದೇವಳದ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಪ್ರತಿ ಬ್ಲಾಕ್ ನಲ್ಲಿ 24 ಶೌಚಾಲಯ, 12 ಸ್ನಾನ ಗೃಹಗಳು, 4 ಬಟ್ಟೆ ಬದಲಾಯಿಸುವ ಕೊಠಡಿ ಇರುವ ಶೌಚಾಲಯ ಸಂಕೀರ್ಣಗಳ ನಿರ್ಮಾಣ
9. ಶ್ರೀ ದೇವಳದ ನೌಕರರಿಗೆ ಸಿ ಮತ್ತು ಡಿ ಮಾದರಿಯ ವಸತಿ ಗೃಹ ಪ್ರತಿ ಮನೆಯಲ್ಲಿ ಕನಿಷ್ಠ ಎರಡು ಬೆಡ್ ರೂಮ್ ಇರುವಂತೆ ಸ್ಥಳೀಯ ಪ್ರಾಧಿಕಾರದ ನಿಯಮಾವಳಿಯಂತೆ ಬಹುಮಹಡಿ ಕಟ್ಟಡವನ್ನು ಸುಸಜ್ಜಿತ ಲಿಫ್ಟ್ ನೊಂದಿಗೆ ನಿರ್ಮಾಣ ಮಾಡಲು ಸಮ್ಮತಿಸಿದರು.
10. ಕ್ಷೇತ್ರದಲ್ಲಿ ಪರಿಸರ ಮಾಲಿನ್ಯ ಹಾಗೂ ನದಿಗಳ ಮಲಿನತೆಯನ್ನು ತಡೆಗಟ್ಟಲು ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಸಮ್ಮತಿಸಿದರು.
11. ರಥ ಬೀದಿಯ ಎಡ ಭಾಗದಲ್ಲಿ ಖಾಲಿ ಇರುವ ಜಮೀನಿನಲ್ಲಿ ಒಂದು ಮಹಡಿಯಲ್ಲಿ ವಾಣಿಜ್ಯ ಸಂಕೀರ್ಣ ಅಂಗಡಿ ಮಳಿಗೆ*ಯನ್ನು ನಿರ್ಮಾಣ ಮಾಡಿ ಉಳಿಕೆ ಕೆಳಮಹಡಿಯಲ್ಲಿ *ಪಾರ್ಕಿಂಗ್ ವ್ಯವಸ್ಥೆ ಒದಗಿಸಿ ಮೇಲ್ಮಡಿಯಲ್ಲಿ ಪ್ರತ್ಯೇಕ ದ್ವಾರದ ಮೂಲಕ ಪ್ರವೇಶಿಸುವ ಯೋಜನೆ ರೂಪಿಸಿಕೊಂಡು ಎಕ್ಸಿಕ್ಯೂಟಿವ್ ಸೂಟ್ ರೂಮ್ ಗಳನ್ನು ನಿರ್ಮಿಸಲು ಯೋಜನೆ ತಯಾರು ಮಾಡಲು ಒಪ್ಪಿಗೆ ನೀಡಿದರು.
12. ಶ್ರೀ ದೇವಳದ ಮುಂಭಾಗದಲ್ಲಿ ಪಾರಂಪರಿಕ ರಥ ಬೀದಿಯನ್ನು ಪಾರಂಪರಿಕ ರೀತಿಯಲ್ಲಿ ರಥೋತ್ಸವವನ್ನು ವೀಕ್ಷಿಸಲು ಗ್ಯಾಲರಿ ಹಾಗೂ ರಂಗಮಂದಿರ, ವೈದ್ಯಕೀಯ ಸೌಲಭ್ಯ, ಪೊಲೀಸ್ ಭದ್ರತಾ ಕೊಠಡಿ, ಹಣ್ಣು ಕಾಯಿ ಅಂಗಡಿಗಳು ಚಿನ್ನ ಬೆಳ್ಳಿ ಹರಕೆ ಅಂಗಡಿ ಮ್ಯೂಸಿಯಂ, ಆಡಿಯೋ ವಿಡಿಯೋ ಕೊಠಡಿ ಮೊದಲಾದ ಎಲ್ಲಾ ಸೌಲಭ್ಯ
13. ಹೆಚ್ಚುವರಿಯಾಗಿ ದೇವಳದ ಪೂರ್ವ ದ್ವಾರದಲ್ಲಿ ಪ್ರವೇಶಿಸಲು ಅನುಕೂಲವಾಗುವ ರೀತಿಯಲ್ಲಿ ಸೇತುವೆ ನಿರ್ಮಾಣ ಕಾರ್ಯವನ್ನು, ಸಂಚಾರದಟ್ಟಣೆಯನ್ನು ಕಡಿತಗೊಳಿಸಲು ಎಡ್ಡೋಳಿ ಆರಂಪಾಡಿ ಬೈಪಾಸ್ ರಸ್ತೆಯನ್ನು, ಶ್ರೀ ದೇವಳದಲ್ಲಿ ಹಾಲಿ ಇರುವ ವಸತಿ ಗೃಹಗಳನ್ನು ನವೀಕರಣ ಮಾಡಲು, ಹಾಗೂ ಹಾಲಿರುವ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ಮೇಲ್ದರ್ಜೆಗೇರಿಸಲು ಸೂಚನೆ ನೀಡಿದರು.
ಮುಜರಾಯಿ ಇಲಾಖೆ ಆಯುಕ್ತರಾದ ವೆಂಕಟೇಶ್, ಭಾಆಸೇ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಹಾಸನದಲ್ಲಿ ಸರಣಿ ಹೃದಯಾಘಾತ: ಅಧ್ಯಯನ ನಡೆಸಿ 10 ದಿನಗಳಲ್ಲಿ ವರದಿಗೆ ಸೂಚನೆ- ಸಚಿವ ದಿನೇಶ್ ಗುಂಡೂರಾವ್