ಬೆಂಗಳೂರು: ನಗರದ ರೆಸ್ಟೋರೆಂಟ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಅನಾಹುತದಿಂದ ಯುವಕ, ಯುವತಿ ಸಜೀವ ದಹನವಾಗಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿರುವ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ಗದಗ ಮೂಲದ ಯುವಕ, ಹುನಗುಂದ ಮೂಲದ ಕಾವೇರಿ ಸಾವನ್ನಪ್ಪಿದ್ದಾರೆ.
ಯಲಹಂಕದ ಕಿಚನ್ ಫ್ಯಾಮಿಲಿ ರೆಸ್ಟೋರೆಂಟಿನ ಲಾಡ್ಜ್ ಕೊಠಡಿಯ ಬಾತ್ ರೂಮ್ ನಲ್ಲಿ ಕಾವೇರಿ ಬಡಿಗೇರ್ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಇದ್ದರು. ಹೊಗೆ ಬಂದ ತಕ್ಷಣ ಲಾಡ್ಜ್ ಸಿಬ್ಬಂದಿಗೆ ಕರೆಯನ್ನು ಕಾವೇರಿ ಮಾಡಿದ್ದರು.
ಬೆಂಕಿ ಕಾಣಿಸಿಕೊಂಡ ನಂತ್ರ ಸ್ಥಳಕ್ಕೆ ಬಂದಿದ್ದಂತ ಅಗ್ನಿ ಶಾಮಕ ಸಿಬ್ಬಂದಿ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು. ಬೆಂಕಿಯಿಂದ ಯುವಕ ಸಾವನ್ನಪ್ಪಿದರೇ, ಹೊಗೆಯಿಂದ ಯುವತಿ ಸಾವನ್ನಪ್ಪಿದ್ದಾರೆ. ಸದ್ಯ ಇಬ್ಬರ ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.