ಪ್ರಯಾಗ್‌ರಾಜ್: ಸಮಾಜದ ನೈತಿಕತೆ ಮತ್ತು ಕಾನೂನು ಎರಡೂ ಬೇರೆ ಬೇರೆ ಎಂದು ಪ್ರತಿಪಾದಿಸಿರುವ ಅಲಹಾಬಾದ್ ಹೈಕೋರ್ಟ್, ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಸಮ್ಮತಿಯಿಂದ ‘ಲಿವ್-ಇನ್’ ಸಂಬಂಧದಲ್ಲಿರುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
“ನೈತಿಕತೆ ಮತ್ತು ಕಾನೂನನ್ನು ಪ್ರತ್ಯೇಕವಾಗಿ ಇಡಬೇಕು. ಕಾನೂನಿನ ಅಡಿಯಲ್ಲಿ ಯಾವುದೇ ಅಪರಾಧ ನಡೆಯದಿದ್ದಾಗ, ಸಾಮಾಜಿಕ ಅಭಿಪ್ರಾಯಗಳು ಅಥವಾ ನೈತಿಕ ಮೌಲ್ಯಗಳು ನ್ಯಾಯಾಲಯದ ನಿರ್ಧಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ” ಎಂದು ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ತರುಣ್ ಸಕ್ಸೇನಾ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.
ಶಹಜಹಾನ್‌ಪುರದ ದಂಪತಿಗಳ ವಿರುದ್ಧ ದಾಖಲಾಗಿದ್ದ ಕಿಡ್ನ್ಯಾಪಿಂಗ್ ಕೇಸ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಈ ಅವಲೋಕನ ಮಾಡಲಾಗಿದೆ. ಅರ್ಜಿದಾರ ಪುರುಷನಿಗೆ ಈಗಾಗಲೇ ಮದುವೆಯಾಗಿದ್ದು, ಆತ ಮತ್ತೊಬ್ಬ ಮಹಿಳೆಯೊಂದಿಗೆ ವಾಸವಿರುವುದನ್ನು ಮಹಿಳೆಯ ಕುಟುಂಬದವರು ವಿರೋಧಿಸಿ ಪೊಲೀಸರಿಗೆ ದೂರು ನೀಡಿದ್ದರು.
ಇಬ್ಬರು ವಯಸ್ಕರು ಪರಸ್ಪರ ಇಚ್ಛೆಯಿಂದ ಜೊತೆಯಾಗಿ ವಾಸಿಸುತ್ತಿರುವಾಗ ಅವರಿಗೆ ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯ ಎಂದು ಹೈಕೋರ್ಟ್ ಹೇಳಿದೆ. ಈ ದಂಪತಿಗೆ ಯಾವುದೇ ತೊಂದರೆ ನೀಡದಂತೆ ಮತ್ತು ಅವರನ್ನು ಬಂಧಿಸದಂತೆ ಪೊಲೀಸರಿಗೆ ಮಧ್ಯಂತರ ಆದೇಶ ನೀಡಿದೆ.ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬರಿಗೂ ಅವರ ಇಚ್ಛೆಯಂತೆ ಬದುಕುವ ಹಕ್ಕಿದೆ. ಕೇವಲ ಒಬ್ಬ ವ್ಯಕ್ತಿ ವಿವಾಹಿತನಾಗಿದ್ದಾನೆ ಎಂಬ ಕಾರಣಕ್ಕೆ ಆತನ ಸಂಬಂಧವು ಕ್ರಿಮಿನಲ್ ಅಪರಾಧವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.








