ಬೆಂಗಳೂರು: ಬಿಜೆಪಿ ಸ್ಥಾಪನೆ ಹಿಂದೆ ಅನೇಕ ಮಹನೀಯರ ಪರಿಶ್ರಮ, ತ್ಯಾಗ, ಬಲಿದಾನವಿದೆ. ಅಂಥ ಮಹನೀಯರನ್ನು ಸ್ಮರಿಸುವ ಕಾರ್ಯ ಇಂದು ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಬಿಜೆಪಿ ಸ್ಥಾಪನಾ ದಿವಸದ ಅಂಗವಾಗಿ ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಧ್ವಜಾರೋಹಣ ಮಾಡಿ, ಪ್ರದರ್ಶಿನಿ ಉದ್ಘಾಟನೆ ನೆರವೇರಿಸಿದ ಅವರು ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶಕ್ಕಾಗಿ ತಮ್ಮ ಪ್ರಾಣದ ಬಲಿದಾನ ಮಾಡಿದ ಶ್ಯಾಮಪ್ರಸಾದ ಮುಖರ್ಜಿ ಅವರ ಬಲಿಷ್ಠ ನಾಯಕತ್ವದ ಪಕ್ಷ ನಮ್ಮದು. ದೀನದಯಾಳ್ ಉಪಾಧ್ಯಾಯರು, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಅವರ ಬಲಿಷ್ಠ ನಾಯಕತ್ವ ಇದ್ದ ಪಕ್ಷ ನಮ್ಮದು ಎಂದು ವಿವರಿಸಿದರು.
ಅನೇಕ ಹಿರಿಯರ ತಪಸ್ಸು, ಪರಿಶ್ರಮದಿಂದ ಪಕ್ಷ ಬೆಳೆದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ, ಅನಂತಕುಮಾರ್, ಶಂಕರಮೂರ್ತಿ, ವಿ.ಎಸ್.ಆಚಾರ್ಯ ಸೇರಿ ಅನೇಕ ಹಿರಿಯರು ಬಿಜೆಪಿ ಸಂಘಟನೆ ಕೆಲಸನ್ನು ಯಶಸ್ವಿಯಾಗಿ ಮಾಡಿದ್ದಾರೆ. ಸ್ವಾತಂತ್ರ್ಯದ ಬಳಿಕ ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಪಕ್ಷ ನಮ್ಮ ಬಿಜೆಪಿ ಎಂದು ತಿಳಿಸಿದರು. ಇದೇವೇಳೆ ಸರ್ವರಿಗೂ ರಾಮನವಮಿಯ ಶುಭಾಶಯ ಕೋರಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಬೆಂಗಳೂರು ಕೇಂದ್ರ ಸಂಸದ ಪಿ.ಸಿ ಮೋಹನ್, ಕಾರ್ಯಕ್ರಮದ ಸಂಚಾಲಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ, ಮಹಾನಗರದ ಅಧ್ಯಕ್ಷರಾದ ಹರೀಶ್, ಸಪ್ತಗಿರಿ ಗೌಡ ಹಾಗೂ ಪಕ್ಷದ ಮುಖಂಡರು ಭಾಗವಹಿಸಿದ್ದರು.