ಬೆಳಗಾವಿ : “ಮನಮೋಹನ್ ಸಿಂಗ್ ಅವರು ಈ ದೇಶದ ಶ್ರೇಷ್ಠ ಪ್ರಧಾನ ಮಂತ್ರಿ. ದೇಶದ ಎಲ್ಲಾ ವರ್ಗದ ಜನರನ್ನು ಕಾಪಾಡಿದ ನಿಜವಾದ ಆರ್ಥಿಕ ತಜ್ಞ ಹಾಗೂ ಕ್ರಾಂತಿಕಾರಿ” ಎಂದು ಡಿಸಿಎಂ ಡಿ. ಕೆ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿದರು.
“ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮನಮೋಹನ್ ಸಿಂಗ್ ಅವರ ಹೆಸರಿನಲ್ಲಿ ಆರ್ಥಿಕ ಸಂಶೋಧನಾ ಹಾಗೂ ಅಧ್ಯಯನ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂದು ಉನ್ನತ ಶಿಕ್ಷಣ ಸಚಿವರಲ್ಲಿ ಮನವಿ ಮಾಡುತ್ತೇನೆ. ಮುಂದಿನ ಪೀಳಿಗೆಗೆ ಇವರ ಆರ್ಥಿಕ ಕ್ರಾಂತಿ ಸೇರಿದಂತೆ ದೇಶಕ್ಕೆ ನೀಡಿದ ಕೊಡುಗೆಗಳನ್ನು ತಲುಪಿಸುವುದೇ ನಿಜವಾದ ಶ್ರದ್ಧಾಂಜಲಿ. ವಿದ್ಯಾರ್ಥಿಗಳು ಇವರ ಆರ್ಥಿಕ ನೀತಿಗಳನ್ನು ಅಧ್ಯಯನ ಮಾಡುವ ಮೂಲಕ ಮನಮೋಹನ್ ಸಿಂಗ್ ಅವರ ಜ್ಞಾನವನ್ನು ಪಸರಿಸುವ ಹಾಗೂ ಉಳಿಸುವ ಕೆಲಸವಾಗುತ್ತದೆ ” ಎಂದು ಹೇಳಿದರು.
“ಮದುವೆಗೆ ಮಸಣಕೋ ಎಂದ ಕಡೆಗೋಡು ಮಂಕುತಿಮ್ಮ ಎನ್ನುವ ಕವಿ ಡಿವಿಜಿ ಅವರ ಮಾತು ಇಂದಿಗೆ ತಾಳೆಯಾಗುತ್ತಿದೆ. ಕೊರಗಲೇಕೆ, ಮರುಗಲೇಕೆ, ಹುಟ್ಟಿ ಬಂದಿದ್ದೆ ಅಳಲೇಕೆ ಸುಖವೇ ಬರಲೀ, ದುಃಖವೇ ಬರಲಿ, ರೋಗ ಭೋಗವೆ ಇರಲಿ, ಎಲ್ಲಾ ಹೊತ್ತು ಋಣ ತೆತ್ತು, ಮುಂದೆ ಪುಣ್ಯದ ಬೀಜ ಬಿತ್ತು ಎನ್ನುವ ಮಾತಿದೆ. ಮನಮೋಹನ್ ಸಿಂಗ್ ಅವರು ಪುಣ್ಯದ ಹಾಗೂ ಅಭಿವೃದ್ಧಿಯ ಬೀಜವನ್ನು ಬಿತ್ತಿ ಹೋಗಿದ್ದಾರೆ ಅದನ್ನು ನಾವು ಬೆಳೆಸೋಣ ಉಳಿಸೋಣ” ಎಂದರು.
“ನಾವು ಅವರ ನಿಧನಕ್ಕೆ ದುಃಖವನ್ನು ಪಡುವುದರ ಬದಲು ಅವರು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿ ನಡೆಯುವುದೇ ಅವರಿಗೆ ನಾವು ಸಲ್ಲಿಸುವ ಕೊಡುಗೆ” ಎಂದು ಹೇಳಿದರು.
“ಗಾಂಧಿಯವರ ಇತಿಹಾಸವನ್ನು ಮೆಲುಕು ಹಾಕಲು ಇಡೀ ದೇಶದ ಮೂಲೆ ಮೂಲೆಗಳಿಂದ ನಾಯಕರು ಬೆಳಗಾವಿಗೆ ಬಂದಿದ್ದರು. ನಮ್ಮ ಮುಂದಿನ ಪೀಳಿಗೆಗೆ ಗಾಂಧಿ ಅವರ ಆದರ್ಶಗಳನ್ನು ತಲುಪಿಸುವ ಕೆಲಸಕ್ಕೆ ನಾವು ಮುಂದಾಗಿದ್ದೆವು. ಆದರೆ ವಿಧಿಯಾಟ ಬೇರೆಯಾಗಿತ್ತು” ಎಂದರು.
“ಇಡೀ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಸೋನಿಯಾ ಗಾಂಧಿ ಅವರು ಸಾಕ್ಷಿಯಾಗಲಿ ಎಂದು ಜೂಮ್ ಆಪ್ ಮುಖಾಂತರ ಅವರಿಗೆ ಕಾರ್ಯಕ್ರಮದ ಕೊಂಡಿಯನ್ನು ಕಳಿಸಲಾಗಿತ್ತು. ವೇಣುಗೋಪಾಲ್ ಅವರ ಸಲಹೆಯಂತೆ ಮನಮೋಹನ್ ಸಿಂಗ್ ಅವರನ್ನು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನಾವು ಬಯಸಿದ್ದೆವು. ಈ ಕಾರಣಕ್ಕೆ ಅವರ ಕಚೇರಿಯನ್ನು ಸಂಪರ್ಕಿಸಿದಾಗ ಸಿಂಗ್ ಅವರ ಆರೋಗ್ಯ ಸರಿ ಇಲ್ಲ, ಅವರನ್ನು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಮಾಹಿತಿ ದೊರೆಯಿತು. ಅವರು ಆರೋಗ್ಯಯುತವಾಗಿ ಮರಳಿ ಬರುವ ವಿಶ್ವಾಸವಿತ್ತು. ಆದರೆ ಇಂದು ಅವರು ನಮ್ಮ ಜೊತೆಯಲ್ಲಿಲ್ಲ” ಎಂದರು.
“ನಾವೆಲ್ಲರೂ ಗಾಂಧಿ ಭಾರತ ಕಾರ್ಯಕ್ರಮ ಮಾಡಲು ಸಜ್ಜಾಗಿದ್ದೆವು ಆದರೆ, ಇದೇ ಚಪ್ಪರದ ಅಡಿಯಲ್ಲಿ ಆರ್ಥಿಕತೆಯ ಗಾಂಧಿ ಮನಮೋಹನ್ ಸಿಂಗ್ ಅವರ ಶ್ರದ್ಧಾಂಜಲಿ ಸಭೆಯನ್ನು ನಡೆಸುತ್ತಿದ್ದೇವೆ. ಇದನ್ನೇ ವಿಧಿಯಾಟ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ದುಃಖದ ಸಂಗತಿ” ಎಂದರು.
“ತಮ್ಮ ಆಡಳಿತ ಅವಧಿಯಲ್ಲಿ ಸಿಂಗ್ ಅವರು ರೂಪಿಸಿರುವ ಕಾಯ್ದೆಗಳು ಕರಾರುವಕ್ಕಾಗಿದ್ದವು. ಶಿಕ್ಷಣ ಹಕ್ಕು, ಆರೋಗ್ಯದ ಹಕ್ಕು, ಆಹಾರದ ಹಕ್ಕನ್ನು ಪ್ರತಿಪಾದಿಸಿದವರು. ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಆಶಾ ಕಾರ್ಯಕರ್ತರ ಯೋಜನೆಯನ್ನು ರೂಪಿಸಿದವರು” ಎಂದು ಸ್ಮರಿಸಿದರು.
“ರೈತರ ಭೂಸ್ವಾಧೀನದ ವೇಳೆ ನಗರ ಭಾಗದಲ್ಲಿ ದುಪ್ಪಟ್ಟು ಪರಿಹಾರ. ನಗರದ ವ್ಯಾಪ್ತಿಗಿಂತ 18 ಕಿಲೋಮೀಟರ್ ದೂರ ಇದ್ದರೆ ಮೂರು ಪಟ್ಟು ಪರಿಹಾರ, ಗ್ರಾಮೀಣ ಭಾಗದಲ್ಲಿ ನಾಲ್ಕು ಪಟ್ಟು ಪರಿಹಾರ ನೀಡಬೇಕು ಎನ್ನುವ ರೈತ ಪರವಾದ ಕಾನೂನು ತಂದವರು” ಎಂದರು.
“2010 ರ ಬಳ್ಳಾರಿ ಪಾದಯಾತ್ರೆ ನಡೆಸುವ ವೇಳೆ ದಾರಿ ಮಧ್ಯೆ ಗ್ರಾಮೀಣ ಭಾಗದ ಮಹಿಳೆಯರು ಇತರೇ ಜಮೀನುಗಳಲ್ಲಿ ದುಡಿಯುತ್ತಿದ್ದರು. ಆಗ ಅವರ ಜೊತೆ ಸಂವಾದ ಮಾಡಿದಾಗ ಹೊಸ ಆಲೋಚನೆಗಳು ಬಂದವು. ಆನಂತರ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ನರೇಗಾ ಕುರಿತಾಗಿ ಅನೇಕ ವಿಚಾರವನ್ನು ಹಂಚಿಕೊಂಡೆ. ಕರ್ನಾಟಕದ ಒಂದಷ್ಟು ಭಾಗದಲ್ಲಿ ಬೇರೆಯವರ ಜಮೀನಿಗೆ ಹೋಗಿ ರೈತರು ದುಡಿಯುವುದಿಲ್ಲ ಎನ್ನುವ ಅಂಶವನ್ನು ಗಮನಕ್ಕೆ ತಂದೆವು.
“ನಾನು, ಧ್ರುವನಾರಾಯಣ ಅವರು ನಿಯೋಗ ಮಾಡಿಕೊಂಡು ಈ ವಿಚಾರವನ್ನು ಸೋನಿಯಾ ಗಾಂಧಿ ಅವರ ಗಮನಕ್ಕೆ ತಂದು, ಸಣ್ಣ ಪುಟ್ಟ ಬದಲಾವಣೆಗಳನ್ನು ಅವರಿಗೆ ವಿವರಣೆ ನೀಡಲಾಯಿತು. ಅವರು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಸಿ.ಪಿ.ಜೋಶಿ ಅವರಿಗೆ ಸಲ್ಲಿಸಿ ಎಂದು ಸೂಚನೆ ನೀಡಿದರು. ಆದರೆ ಸಿ.ಪಿ.ಜೋಶಿ ಅವರನ್ನು ನಾವುಗಳು ಗಮನ ಸೆಳೆಯಲು ಆಗಲಿಲ್ಲ. ಆನಂತರ ಒಂದಷ್ಟು ಪರಿಷ್ಕರಣೆ ನಡೆಸಿದ ನಂತರ ರೈತನು ಸ್ವಂತ ಜಮೀನಿನಲ್ಲಿಯೂ ಸಹ ಮನರೇಗಾ ಮೂಲಕ ಅಭಿವೃದ್ಧಿ ಕೆಲಸಗಳನ್ನು ಮಾಡಿಸಬಹುದು ಎನ್ನುವ ತಿದ್ದುಪಡಿ ತಂದವರು ಮನಮೋಹನ್ ಸಿಂಗ್. ಇದು ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಸಾಕಷ್ಟು ಅವಕಾಶ ನೀಡಿತು.”
“ರಾಜ್ಯದಲ್ಲಿ 2013ರಲ್ಲಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಗೆ ಮುನ್ನುಡಿ ಬರೆದಿದ್ದೆ ಮನಮೋಹನ್ ಸಿಂಗ್ ಅವರ ಆಹಾರ ಭದ್ರತಾ ಕಾಯ್ದೆ. ಉದ್ದಿಮೆಗಳ ಸಿಎಸ್ಆರ್ ಯೋಜನೆಯನ್ನು ಪ್ರಾರಂಭ ಮಾಡಿದ್ದು ಸಹ ಇವರೇ. ಈ ರೀತಿಯ ನೂರಾರು ಕಾರ್ಯಕ್ರಮಗಳನ್ನು ಜಾರಿಗೆ ತಂದವರು.”
“ಅರಣ್ಯ ಭೂಮಿ ಹಕ್ಕು ಕಾಯ್ದೆಯನ್ನು ಜಾರಿಗೆ ತಂದು ದಶಕಗಳಿಂದ ಅರಣ್ಯ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದ ರೈತರಿಗೆ, ಪರಿಶಿಷ್ಟ ಜನಾಂಗ ಮತ್ತು ವರ್ಗದವರಿಗೆ ಅನುಕೂಲ ವಾಗುವಂತೆ ನೋಡಿಕೊಂಡವರು ಮನಮೋಹನ್ ಸಿಂಗ್ ಅವರು” ಎಂದರು.
ರೈತರ ಸಾಲ ಮನ್ನಾ ಮಾಡಿದ ಧೀಮಂತ
“ಅನೇಕ ಬಾರಿ ಕೇವಲ ದೊಡ್ಡ ದೊಡ್ಡ ಉದ್ದಿಮೆದಾರರ ಸಾಲಗಳನ್ನು ಮಾತ್ರ ಮನ್ನಾ ಮಾಡಲಾಗುತ್ತಿತ್ತು. ಮನಮೋಹನ್ ಸಿಂಗ್ ಅವರು ಮೊಟ್ಟಮೊದಲ ಬಾರಿಗೆ 70,000 ಕೋಟಿ ರೂ. ರೈತರ ಸಾಲವನ್ನು ಮನ್ನಾ ಮಾಡಿದವರು” ಎಂದು ಹೇಳಿದರು.
“ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಅವರ ಕಾರ್ಯಕ್ರಮಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ನಾವೆಲ್ಲರೂ ಅವರ ಆದರ್ಶ ಗಳನ್ನು ಉಳಿಸುವ ಕೆಲಸ ಮಾಡಬೇಕು. ನಾವೆಲ್ಲರೂ ಇವರ ಹಾದಿಯಲ್ಲಿ ನಡೆಯೋಣ ಎಂದು ಆಶಿಸುತ್ತೇನೆ. ಅತ್ಯಂತ ಗೌರವ ಪೂರಕವಾಗಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ” ಎಂದು ಭಾವುಕರಾದರು.
“ಗುರುವಾರದ ಗಾಂಧಿ ಭಾರತ ಕಾರ್ಯಕ್ರಮದ ನಂತರ ಊಟದ ವೇಳೆಯಲ್ಲಿ ರಾತ್ರಿ 9:50 ರ ಹೊತ್ತಿಗೆ ಅವರ ನಿಧನದ ಸುದ್ದಿ ತಿಳಿಯಿತು. ಮುಂದಿನ ಕಾರ್ಯಕ್ರಮಗಳನ್ನು ರದ್ದು ಮಾಡಿ ಎಂದು ಉನ್ನತ ವರಿಷ್ಠರು ತಿಳಿಸಿದರು” ಎಂದು ಹೇಳಿದರು.
ಶ್ರದ್ಧಾಂಜಲಿ ಸಭೆಯ ನಂತರ ಮಾಧ್ಯಮಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.
“ಮನಮೋಹನ್ ಸಿಂಗ್ ಅವರು ನಿಧನ ಹೊಂದಿಲ್ಲ. ಅವರ ಕೆಲಸಗಳ ಮೂಲಕ ಎಂದಿಗೂ ನಮ್ಮ ನಡುವೆ ಜೀವಂತವಾಗಿದ್ದಾರೆ. ಜನಸಾಮಾನ್ಯನಿಗೆ ಆಹಾರದ ಹಕ್ಕನ್ನು ಸಂವಿಧಾನಾತ್ಮಕವಾಗಿ ನೀಡಿದವರು.”
“ಅವರು ಜಾರಿಗೆ ತಂದ ಅನೇಕ ಯೋಜನೆಗಳನ್ನು ಯಾವ ಸರ್ಕಾರವು ನಿಲ್ಲಿಸಲು ಆಗುವುದಿಲ್ಲ. ಆಧಾರ್ ಯೋಜನೆ, ಅರಣ್ಯ ಭೂಮಿ ಹಕ್ಕು ಕಾಯ್ದೆ, ಆಶಾ ಕಾರ್ಯಕರ್ತರ ಯೋಜನೆ, ನರೇಗಾ, ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು, ರೈತರಿಗೆ ಸಂಕಷ್ಟದ ಹೊತ್ತಿದಲ್ಲಿ ಪರಿಹಾರ ಪ್ಯಾಕೇಜ್ ನೀಡುವ ಮೂಲಕ ಅವರ ಬೆನ್ನಿಗೆ ನಿಂತ ಶಕ್ತಿ ಮನಮೋಹನ್ ಸಿಂಗ್ ಅವರು” ಎಂದರು.
SHOCKING NEWS: ನಮ್ಮ ಅತ್ತೆ ಬೇಗ ಸಾಯಬೇಕು: ನೋಟಿನ ಮೇಲೆ ಹರಕೆ ಬರೆದು ಹಾಕಿದ ಸೊಸೆ, ಪೋಟೋ ವೈರಲ್
BREAKING: ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ: ಹಾಡಹಗಲೇ ಕಣ್ಣಿಗೆ ಕಾರದಪುಡಿ ಎರಚಿ ಹಂದಿ ವ್ಯಾಪಾರಿ ಬರ್ಬರ ಕೊಲೆ