ಮಂಡ್ಯ: ಮೂರನೇ ಬಾರಿಗೆ ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಿ ಯಶಸ್ವಿಗೊಳಿಸುವುದರ ಜೊತೆಗೆ ಸಮ್ಮೇಳನದಲ್ಲಿ ಮಂಡ್ಯದ ಹೆಗ್ಗುರುತು ಮೂಡಿಸುವ ಕೆಲಸವಾಗಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಕರೆಕೊಟ್ಟರು.
ಡಿಸೆಂಬರ್ ೨೦,೨೧,೨೨ರಂದು ಮೂರು ದಿನಗಳ ಕಾಲ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತಂತೆ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸ್ವಾಗತ ಸಮಿತಿ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯ ಆಚಾರ ವಿಚಾರ, ಇಲ್ಲಿನ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳ ಮಹತ್ವ, ಐತಿಹ್ಯವನ್ನು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಸಾರುವ ಅವಕಾಶ ಇದೆ. ಇದಕ್ಕಾಗಿ ಒಂದು ಕ್ರಿಯಾಯೋಜನೆ ರೂಪಿಸಿ ಮಂಡ್ಯಕ್ಕೆ ತನ್ನದೇ ಆದ ಐಡೆಂಟಿಟಿ ಸಿಗುವಂತ ಕೆಲಸವಾಗಬೇಕು ಎಂದು ಸ್ವಾಮೀಜಿಗಳು ಸಲಹೆ ನೀಡಿದರು.
ಸಮ್ಮೇಳನದ ಪೂರ್ವ ಸಿದ್ಧತೆಗಳ ಮಾಹಿತಿ ಪಡೆದ ಸ್ವಾಮೀಜಿಗಳು, ಇದು ನಮ್ಮ ಹಬ್ಬ. ಮನೆಯ ಹಬ್ಬದಂತೆ ಆಚರಣೆ ಮಾಡಬೇಕು. ಜಿಲ್ಲೆಯ ಸಾಮಾನ್ಯ ಪ್ರಜೆ ಕೂಡ ಸಮ್ಮೇಳನದ ಪ್ರಚಾರ ಕಾರ್ಯದಲ್ಲಿ ಸ್ವಯಂಪ್ರೇರಿತವಾಗಿ ತೊಡಗಿಕೊಳ್ಳುವಂತಾಗಬೇಕು. ಮಂಡ್ಯ ಹೃದಯ ಶ್ರೀಮಂತಿಕೆಗೆ ಹೆಸರುವಾಸಿ. ಅತಿ ಹೆಚ್ಚು ಕನ್ನಡ ಮಾತನಾಡೋ ಜಿಲ್ಲೆಯೆಂದರೆ ಅದು ಮಂಡ್ಯ. ಹೀಗಾಗಿ ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನ ಮಾದರಿಯಾಗಿರಬೇಕು ಎಂದು ಹೇಳಿದರು.
ಸ್ವಾಗತ ಸಮಿತಿ ಆದ್ಯಕ್ಷರು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಮಾತನಾಡಿ, ಇದೊಂದು ಕನ್ನಡದ ಹಬ್ಬ. ಮಂಡ್ಯದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿ ಜಿಲ್ಲೆಯ ಕೀರ್ತಿ ಎತ್ತಿಹಿಡಿಯೋಣ ಎಂದರು.
ಸಭೆಯಲ್ಲಿ ವ್ಯಕ್ತಪಡಿಸಿದ ಎಲ್ಲಾ ಸಲಹೆಗಳನ್ನು ನೂರಕ್ಕೆ ನೂರು ಜಾರಿ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಗುರುಗಳ ಮಾರ್ಗದರ್ಶನದಲ್ಲಿ ಕೆಲಸ ಮಾಡೋಣ. ಊಟದ ವ್ಯವಸ್ಥೆ ಅಚ್ಚುಕಟ್ಟಾಗಿ ಇರಲಿ. ಬೆಂಗಳೂರು, ಮೈಸೂರಿನ ಜೊತೆಗೆ ತಾಲೂಕು ಕೇಂದ್ರಗಳಿಂದಲೂ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನಾಡೋಜ ಮಹೇಶ್ ಜೋಶಿ ಮಾತನಾಡಿ, ವಿದೇಶದಲ್ಲಿ ಕೂಡ ಆಸಕ್ತಿಯಿಂದ ನೋಡುವ ಕನ್ನಡದ ಹಬ್ಬ ಇದು.
ಮಾರ್ಗದರ್ಶಕ ಸೂಚಕದಂತೆ ಮಳಿಗೆ, ವೇದಿಕೆ ಸಿದ್ಧತೆ ಮಾಡಲಾಗುತ್ತದೆ. ಅಧ್ಯಕ್ಷರ ಆಯ್ಕೆ ಬಗ್ಗೆ ಎಲ್ಲೆಡೆ ಪ್ರಶಂಸೆ ಮಾತುಗಳು ವ್ಯಕ್ತವಾಗುತ್ತಿವೆ. ಸಾಹಿತ್ಯ ಸಮ್ಮೇಳನಕ್ಕೆ 18 ದೇಶಗಳಿಂದ ಕನ್ನಡ ಪ್ರೇಮಿಗಳು ಆಗಮಿಸುತ್ತಿದ್ದು ಮಂಡ್ಯದ ಸಾಹಿತ್ಯ ಸಮ್ಮೇಳನ ಅಂತಾರಾಷ್ಟ್ರೀಯ ಮಟ್ಟದ ಆಕರ್ಷಣೆ ಆಗಲಿದೆ ಎಂದರು.
ಸಭೆಯಲ್ಲಿ ಶಾಸಕರುಗಳಾದ ರಮೇಶ್ ಬಂಡಿಸಿದ್ದೇಗೌಡ, ನರೇಂದ್ರಸ್ವಾಮಿ, ರವಿಕುಮಾರ್, ಉದಯ್, ವಿಧಾನಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ, ಮಧು ಜಿ ಮಾದೇಗೌಡ, ವಿವೇಕಾನಂದ, ನಗರಸಭೆ ಅಧ್ಯಕ್ಷ ಪ್ರಕಾಶ್, ಮಾಜಿ ಸಚಿವ ಸೋಮಶೇಖರ್, ಮಾಜಿ ಸಂಸದೆ ಸುಮಲತಾ, ಮಾಜಿ ವಿಧಾನಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಶ್ರೀಕಂಠೇಗೌಡ, ಮಾಜಿ ಶಾಸಕ ಅನ್ನದಾನಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಮೊದಲಬಾರಿಗೆ ಆನ್ ಲೈನ್ ನೊಂದಣಿ: ಡಿಸಿ ಕುಮಾರ
ಜಿಲ್ಲಾಧಿಕಾರಿ ಡಾ. ಕುಮಾರ ಅವರು ಸಮ್ಮೇಳನದ ಸಿದ್ಧತೆ ಕುರಿತು ಸಭೆಗೆ ವಿವರಿಸಿದರು. ವೇದಿಕೆ, ಮಳಿಗೆ, ಆಹಾರ ವಿತರಣಾ ಕೌಂಟರ್, ಪಾರ್ಕಿಂಗ್ ಗೆ ಸಾಂಜೋ ಆಸ್ಪತ್ರೆ ಹಾಗೂ ಅಮರಾವತಿ ಹೋಟೆಲ್ ಹಿಂಭಾಗದಲ್ಲಿ ಜಾಗ ಗುರುತಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ಆಹಾರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಇದೇ ಮೊದಲ ಬಾರಿಗೆ ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಅಂಬೇಡ್ಕರ್ ಭವನ, ಕಲಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. 87 ಕಡೆ ಸ್ವಾಗತ ಕಮಾನುಗಳು ಇರಲಿವೆ. ಮುಂಜಾಗ್ರತಾ ಕ್ರಮವಾಗಿ ಹೆಲ್ತ್ ಡೆಸ್ಕ್, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ನಗರದಿಂದ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಸ್ಥಳೀಯ ಕಲಾವಿದರಿಗೆ ಗೌರವಧನ ಹೆಚ್ಚಳ: ದಿನೇಶ್ ಗೂಳಿಗೌಡ
ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಕಲಾತಂಡಗಳ ಗೌರವಧನವನ್ನು ಹೆಚ್ಚಳ ಮಾಡಲಾಗಿದೆ ಎಂದು ಶಾಸಕ ದಿನೇಶ್ ಗೂಳಿಗೌಡ ಅವರು ಹೇಳಿದರು.
ಸ್ಥಳೀಯ ಕಲಾ ತಂಡಗಳ ಗೌರವಧನವನ್ನು ಪರಿಷ್ಕರಣೆ ಮಾಡಲಾಗಿದೆ. ಐದು ಸಾವಿರವಿದ್ದ ಗೌರವಧನವನ್ನು ಹತ್ತು ಸಾವಿರಕ್ಕೆ ಹೆಚ್ಚಿಸಲಾಗಿದೆ. 471 ತಂಡಗಳಿಂದ ಅರ್ಜಿಗಳು ಬಂದಿದ್ದು 191 ತಂಡಗಳಿಗೆ ಅವಕಾಶ ಕಲ್ಪಿಸಬೇಕಾಗಿದೆ. ನಾಡಗೀತೆ, ರೈತಗೀತೆ, ನಾಲ್ವಡಿ ಗೀತೆ ಹಾಡುವ 87 ಮಂದಿಗೆ ಏಕರೂಪದ ವಸ್ತ್ರ ವಿತರಣೆ ಮಾಡುವುದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಹಾಗೂ ಸಮ್ಮೇಳನದ ಪ್ರಚಾರಕ್ಕಾಗಿ ಡಿಸೆಂಬರ್ 18,19ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದರು.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳು
ಆನ್ ಲೈನ್ ಜೊತೆಗೆ ಆಫ್ ಲೈನ್ ನೋಂದಣಿಗೂ ಅವಕಾಶ ಕೊಡಿ
ಜಿಲ್ಲಾಧಿಕಾರಿ ಉದ್ಯಾನವನದಿಂದ ಮೆರವಣಿಗೆ ಆರಂಭ
ಕೃಷಿ ಬದುಕಿನ ಕುರಿತು ಕೃಷಿಯತ್ತ ಸೆಳೆಯಲು ಕೃಷಿ ಗೋಷ್ಠಿ ಇರಲಿ
ಕನ್ನಡ ಶಾಲೆಗಳ ಮುಚ್ಚದಂತೆ ಅವುಗಳ ಸಶಕ್ತಿಕರಣಗೊಳಿಸುವ ಹಾಗೂ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವ ಎರಡು ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಬೇಕು
ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು, ಶಿಕ್ಷಣ ಸಂಸ್ಥೆಗಳ ಮೇಲೆ ಬೆಳಕು ಚೆಲ್ಲಬೇಕು
ಸಮ್ಮೇಳನದಲ್ಲಿ ಉತ್ತರ ಕನ್ನಡ ದಕ್ಷಿಣ ಕನ್ನಡ ಶೈಲಿಯ ಆಹಾರ ಇರಲಿದೆ
ಸಾಹಿತಿಗಳ ತಾರತಮ್ಯ ಬೇಡ. ಒಂದೇ ರೀತಿಯ ಊಟದ ವ್ಯವಸ್ಥೆ ಇರಲಿ. ಆಹಾರ ಮಳಿಗೆಗಳ ಸಮೀಪ ಶುಚಿತ್ವಕ್ಕೆ ಒತ್ತು ಕೊಡಬೇಕು.
ಆಕರ್ಷಣೀಯ ಲೈಟಿಂಗ್ ವ್ಯವಸ್ಥೆ ಆಗಬೇಕು. ಉಚಿತ ವಾಹನ, ರೂಟ್ ಮ್ಯಾಪ್ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು.
ಮೂರು ದಿನಗಳ ಕಾರ್ಯಕ್ರಮದಂತೆ ನೋಡದೆ ಜಿಲ್ಲೆಯ ಖ್ಯಾತಿ, ಹೆಸರನ್ನು ಎತ್ತಿ ಹಿಡಿಯಬೇಕು.
ಪ್ರವಾಸಿ ತಾಣಗಳು, ಪುರಾಣ ಪ್ರಸಿದ್ಧ ಸ್ಥಳಗಳ ಹೈಲೈಟ್ ಆಗಬೇಕು.
BIG NEWS: ಫೆಂಗಲ್ ಚಂಡಮಾರುತದ ಹಿನ್ನಲೆ: ನಾಳೆ ಈ ಜಿಲ್ಲೆಗಳ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಣೆ | School Holiday