ಮಂಡ್ಯ: ಜಿಲ್ಲೆಯಲ್ಲಿ ಜನವರಿ 26 ರಂದು ವಿಜೃಂಭಣೆ ಹಾಗೂ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ ಕುಮಾರ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಆಚರಿಸುವ ಸಂಬಂಧ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಹಾಜರಾತಿ ಕಡ್ಡಾಯ ಜನವರಿ 26 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನಡೆಯಲಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು. ಪದವಿ ಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳೊಂದಿಗೆ ಸಮಾರಂಭಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಪತ್ರ ಬರೆಯುವಂತೆ ಅಧಿಕಾರಿಗಳಿಗೆ ತಿಳಿಸಿದರು.
ದೀಪಾಲಂಕಾರ ಗಣರಾಜ್ಯೋತ್ಸವದ ಅಂಗವಾಗಿ ಸರ್ಕಾರಿ ಕಚೇರಿಗಳು ದೀಪಾಲಂಕಾರ ಮಾಡಿ ವಿಶೇಷವಾಗಿ ಗಣರಾಜ್ಯೋತ್ಸವವನ್ನು ಆಚರಿಸಿ ಎಂದರು.
ಕಾರ್ಯಕ್ರಮದ ಕೆಲಸಗಳು ಸುಸೂತ್ರವಾಗಿ ನಡೆಸಲು ಸ್ವಾಗತ ಸಮಿತಿ, ವೇದಿಕೆ ಸಮಿತಿ, ಪೆರೇಡ್ ಸಮಿತಿ, ಸಾಂಸ್ಕೃತಿಕ ಸಮಿತಿ, ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿಗಳನ್ನು ವಹಿಸಿದರು.
ಸ್ವಾಗತ ಸಮಿತಿಯು ತಪ್ಪದಂತೆ ಕನ್ನಡಪರ ಸಂಘ ಸಂಸ್ಥೆ ಹಾಗೂ ಸಂಘಟನೆಗಳು, ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನಿಸಿ ಎಂದರು.
ಪಥ ಸಂಚಲನ ಪೊಲೀಸ್, ಗೃಹ ರಕ್ಷಕ, ಅಬಕಾರಿ, ಎನ್.ಸಿ.ಸಿ, ಎನ್.ಎಸ್.ಎಸ್ ಸೇರಿದಂತೆ ಸುಮಾರು 30 ತಂಡಗಳು ಪಥ ಸಂಚಲನ ನೀಡಲು ಪೂರ್ವಾಭ್ಯಸ ನಡೆಸಿ. ಪಥ ಸಂಚಲನ ಉತ್ತಮವಾಗಿ ಮೂಡಿಬರುವಂತೆ ನೋಡಿಕೊಳ್ಳಿ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಭಿನ್ನ ಹಾಗೂ ಆಕರ್ಷಿತವಾಗಿ ದೇಶಭಕ್ತಿ ಹಾಡುಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ರೆಡ್ ಕ್ರಾಸ್ ಸಂಸ್ಥೆಯ ಮೀರಾ ಶಿವಲಿಂಗಯ್ಯ, ಅಗ್ನಿಶಾಮಕ ಅಧಿಕಾರಿ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಲ್ಲಿ ‘ಆಸ್ತಿ ತೆರಿಗೆ ಬಾಕಿ’ ಉಳಿಸಿಕೊಂಡವರಿಗೆ ಬಿಗ್ ಶಾಕ್: ವಾಣಿಜ್ಯ ಮಳಿಗೆಗಳಿಗೆ ‘BBMP ಬೀಗಮುದ್ರೆ’
GOOD NEWS: ವಿಕಲಚೇತನರಿಗೆ ಗುಡ್ ನ್ಯೂಸ್: ‘ಬ್ಯಾಟರಿ ಚಾಲಿತ ವಿಲ್ ಚೇರ್’ಗೆ ಅರ್ಜಿ ಆಹ್ವಾನ