ಮಂಡ್ಯ : ವಿಷ ಮಿಶ್ರಿತ ಕಲುಷಿತ ನೀರು ಕುಡಿದು 12 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಶುಕ್ರವಾರ ಜರುಗಿದೆ.
ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಚನ್ನಾಪುರ ಗ್ರಾಮದ ರಾಜು ಎಂಬುವವರ ಕುರಿಗಳೇ ಸಾವನ್ನಪ್ಪಿರುವುದು ಎನ್ನಲಾಗಿದೆ.
ಚನ್ನಾಪುರ ಗ್ರಾಮದಿಂದ ರಾಜು ಎಂಬುವವರು ಕುರಿಗಳಿಗೆ ಆಹಾರ ಅರಸಿಕೊಂಡು (ಮೇಯಿಸಲು) ಅಂದಾಜು 250 ಕ್ಕೂ ಹೆಚ್ಚು ಕುರಿಗಳೊಂದಿಗೆ ಸೋಮನಹಳ್ಳಿ ಕೈಗಾರಿಕಾ ಪ್ರದೇಶದ ಕಡೆ ಬಂದಿದ್ದಾರೆ.
ಮಧ್ಯಾಹ್ನದ ನಂತರ ಮೇವು ತಿಂದ ಬಳಿಕ ಅಲ್ಲಿಯೇ ಇದ್ದ ಚರಂಡಿ ನೀರನ್ನು ಕುಡಿದಿವೆ. ಚರಂಡಿಯಲ್ಲಿ ಮಿಶ್ರಣ ಗೊಂಡಿದ್ದ ಕಲುಷಿತ ನೀರು ಕುಡಿದು ಕೆಲ ಹೊತ್ತಿನಲ್ಲೇ 12 ಕ್ಕೂ ಹೆಚ್ಚು ಕುರಿಗಳು ನರಳಾಟದಿಂದ ಸಾವನ್ನಪ್ಪಿವೆ ಎನ್ನಲಾಗಿದೆ.
ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಿಷ ಮಿಶ್ರಿತ ನೀರನ್ನು ಕುಡಿದು ಹಲವಾರು ಬಾರಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕುರಿಗಳು ಮೃತಪಟ್ಟಿವೆ.
ಇಂದು ಕೂಡ ವಿಷ ಜಲವನ್ನು ಕುಡಿದು 12 ಕ್ಕೂ ಹೆಚ್ಚು ಕುರಿಗಳು ಪ್ರಾಣ ಬಿಟ್ಟಿವೆ. ಇದಕ್ಕೆ ಸಂಬಂಧಪಟ್ಟ ಗ್ರಾಮಪಂಚಾಯಿತಿ, ಪರಿಸರ ಮಾಲಿನ್ಯ ಇಲಾಖೆಯ ಬೇಜವಾಬ್ದಾರಿಯು ಕಾಣುತ್ತಿದೆ. ಮುಂದೆ ಇಂತ ಘಟನೆ ನಡೆಯದಂತೆ ಸಂಬಂಧಿಸಿದ ಕಾರ್ಖಾನೆಗಳ ಮಾಲೀಕರಿಗೆ ನೋಟಿಸ್ ನೀಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಂದು ಸ್ಥಳಿಯರು ಒತ್ತಾಯ ಮಾಡಿದರು.
ಈ ಸಂಬಂಧ ಮದ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ : ಗಿರೀಶ್ ರಾಜ್, ಮಂಡ್ಯ
BREAKING: ‘ರಾಮನಗರ’ ಇನ್ಮುಂದೆ ‘ಬೆಂಗಳೂರು ದಕ್ಷಿಣ ಜಿಲ್ಲೆ’: ರಾಜ್ಯ ಸರ್ಕಾರ ‘ಮರುನಾಮಕರಣ’ ಮಾಡಿ ಅಧಿಕೃತ ಆದೇಶ