ಬೆಂಗಳೂರು: ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಇತಿಹಾಸದಲ್ಲಿಯೇ ಅತ್ಯಂತ ವಿಶಿಷ್ಟವೆನಿಸಬೇಕಾದ ವೇದಿಕೆಯಾಗಿದ್ದು, ದುರದೃಷ್ಟವಶಾತ್, ಅದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜಕೀಯ ಸಮಾವೇಶವಾಗಿ ಮಾರ್ಪಟ್ಟಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಕನ್ನಡ ಸಾಹಿತ್ಯ, ಸಂಸ್ಕೃತಿ ಹಾಗೂ ಭಾಷೆಯ ಪ್ರಾಮುಖ್ಯತೆಯನ್ನು ಹೆಸರಿಸಬೇಕಾದ ಈ ಸಮ್ಮೇಳನವು, ರಾಜಕೀಯ ಪ್ರಚಾರ ವೇದಿಕೆಯಾಗುತ್ತಿರುವುದು ಕನ್ನಡಿಗರಿಗೆ ನೋವಿನ ಸಂಗತಿಯಾಗಿದೆ. ಸಮ್ಮೇಳನವನ್ನು ಉದ್ಘಾಟಿಸಿ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಾಡಿರುವ ಭಾಷಣವು ಕನ್ನಡದ ಬೆಳವಣಿಗೆ, ಸಾಹಿತ್ಯ, ಹಾಗೂ ಸಂಸ್ಕೃತಿಯ ಬಗ್ಗೆ ಮಾತುಕತೆ ನಡೆಸುವ ಬದಲು ಕೇಂದ್ರ ಸರ್ಕಾರದ ತೆರಿಗೆ ಹಂಚಿಕೆ, ಮನುಸ್ಮೃತಿಯ ವಿವಾದಗಳು ಹಾಗೂ ಹಿಂದಿ ಪ್ರಭಾವದ ವಿಚಾರದತ್ತ ಮುಖಮಾಡಿದೆ. ಈ ರೀತಿಯ ರಾಜಕೀಯ ಚರ್ಚೆಗಳನ್ನು ಸಾಹಿತ್ಯ ಸಮ್ಮೇಳನದ ವೇದಿಕೆಗೆ ತಂದಿರುವುದು ಖಂಡನೀಯ ಮತ್ತು ವಿಷಾದನೀಯ ಎಂದಿದ್ದಾರೆ.
ಸಾಹಿತ್ಯ ಸಮ್ಮೇಳನವು ಭಾವನೆಗಳ ಮತ್ತು ಚಿಂತನೆಗಳ ವಿನಿಮಯಕ್ಕೆ ಸಾಂಸ್ಕೃತಿಕ ಪೀಠವಾಗಿ ಉಳಿಯಬೇಕಾಗಿತ್ತು. ಆದರೆ, Indian National Congress – Karnataka ಸರ್ಕಾರದ ಅವಧಿಯಲ್ಲಿ ರಾಜಕೀಯ ಮತ್ತು ಗ್ಯಾರಂಟಿ ಯೋಜನೆಗಳ ಪ್ರಚಾರಕ್ಕಾಗಿ ಈ ವೇದಿಕೆಯನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಕನ್ನಡ ಸಾಹಿತ್ಯ ಸಮ್ಮೇಳನದ ಮೂಲ ಉದ್ದೇಶಕ್ಕೆ ಧಕ್ಕೆಯಾಗಿದೆ ಎಂದು ತಿಳಿಸಿದ್ದಾರೆ.
“ದಿವಾಳಿಯತ್ತ ಭಾರತ” ಎಂಬ ಪುಸ್ತಕದ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಉದ್ದೇಶವು ರಾಜಕೀಯ ಪ್ರೇರಿತವಾಗಿ, ದಿವಾಳಿ ಎಂಬಂತೆ ದೇಶದ ಸ್ಥಿತಿಯನ್ನು ಬಿಂಬಿಸಿರುವುದು, ಭಾರತದ ಮಾನ್ಯ ಪ್ರಧಾನಿ ಮೋದಿಯವರಿಗೆ ಅಪಮಾನವಾಗುವ ರೀತಿಯಲ್ಲಿ ಬಿಂಬಿಸಿರುವುದು ಮತ್ತು ನೇರ ರಾಜಕೀಯ ದುರಾಸೆಯನ್ನು ಮುಂದುವರಿಸಿರುವ ರೀತಿಯಲ್ಲಿ ನಿಂತಿದೆ. ಇದರ ಮೂಲಕ ನಮ್ಮ ರಾಜ್ಯ ಸರ್ಕಾರದ ಮತ್ತು ಕರ್ನಾಟಕದ ಜನತೆಯ ನಿಜವಾದ ಧ್ಯೇಯ-ಆಕಾಂಕ್ಷೆಗಳನ್ನು ಅವಹೇಳನ ಮಾಡಲಾಗಿದೆ ಎಂಬುದು ನನ್ನ ನಂಬಿಕೆ ಎಂದಿದ್ದಾರೆ.
ನಾನು ಈ ಕಾರಣದಿಂದಲೇ, ರಾಜಕೀಯ ಪ್ರೇರಿತ ವೇದಿಕೆಯನ್ನು ಹಂಚಿಕೊಳ್ಳದೆ, ಕಾರ್ಯಕ್ರಮದ ಆಹ್ವಾನವನ್ನು ಬಹಿಷ್ಕರಿಸುತ್ತೇನೆ. ಈ ಬೆಳವಣಿಗೆಗಳಿಂದ ನನ್ನ ಮನಸ್ಸಿಗೆ ನೋವಾಗಿದ್ದು, ಈ ರೀತಿಯ ಕ್ರಮಗಳು ಕನ್ನಡ ನಾಡಿನ ಗೌರವಕ್ಕೆ ವಿರೋಧವಾಗಿ ಕೆಲಸ ಮಾಡುತ್ತದೆ ಎಂಬ ನನ್ನ ದೃಢ ನಿಲುವು ಎಂದು ಹೇಳಿದ್ದಾರೆ.
ಸಾಹಿತ್ಯ ಸಮ್ಮೇಳನವು ಕನ್ನಡದ ಬೆಳವಣಿಗೆ, ಸಾಹಿತ್ಯ, ಹಾಗೂ ಸಾಂಸ್ಕೃತಿಯ ವಿಷಯಗಳಿಗೆ ಮಾತ್ರ ಮೀಸಲಾಗಿರಬೇಕು ಮತ್ತು ಅದು ಕನ್ನಡಿಗರ ಬದುಕಿಗೆ ಪ್ರೇರಣೆ ನೀಡುವ ರೀತಿಯಲ್ಲಿರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಆಯೋಜಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂಬುದಾಗಿ ತಿಳಿಸಿದ್ದಾರೆ.
BREAKING: ಪಡಿತರ ಪಡೆಯಲು ಎಲ್ಲರ ‘ವೇತನ ಪ್ರಮಾಣಪತ್ರ’ ಅಗತ್ಯವಿಲ್ಲ: ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ
Watch Video: ನಟ ಅಲ್ಲು ಅರ್ಜುನ್ ಮನೆ ಮುಂದೆ ಹೈಡ್ರಾಮಾ: ಸ್ಥಳದಲ್ಲಿ ಬಿಗುವಿನ ವಾತಾವರಣ | Actor Allu Arjun