ಮಂಡ್ಯ : ಸ್ವಾತಂತ್ರ್ಯ ಎಂದರೇ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ ಸಹಸ್ರಾರು ನಾಯಕರ ತ್ಯಾಗ ಬಲಿದಾನಗಳ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಹೀಗಾಗಿ ನಾವೆಲ್ಲರೂ ಪ್ರಜಾಪ್ರಭುತ್ವ ಹಾಗೂ ದೇಶದ ಸಂವಿಧಾನ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಹೋರಾಡಬೇಕಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಶುಕ್ರವಾರ ಹೇಳಿದರು.
ಮದ್ದೂರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರಿಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶದ ಇತಿಹಾಸದಲ್ಲಿ ಆಗಸ್ಟ್ 15 ಅವಿಸ್ಮರಣೀಯ ದಿನವಾಗಿದ್ದು, ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹಲವಾರು ರೀತಿಯ ವಿಭಿನ್ನ ಚಳುವಳಿಗಳು ನಡೆದಿದೆ. ಇದರ ಪರಿಣಾಮವಾಗಿ ನಮಗೆ ಸ್ವಾತಂತ್ರ್ಯ ಲಭಿಸಿದೆ. ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಹಾಗೂ ಅವರ ತತ್ವಾದರ್ಶಗಳನ್ನು ಇಂದಿನ ಯುವ ಜನಾಂಗ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಸಮಗ್ರ ಅಭಿವೃದ್ದಿಗೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವದ ಕುರಿತು ಪ್ರಧಾನ ಭಾಷಣ
ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮದ್ದೂರು ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇಗುಲದ ಆವರಣದಿಂದ ನೂರಾರು ವಿದ್ಯಾರ್ಥಿಗಳು ಭಾರತಾಂಬೆ ಭಾವಚಿತ್ರವನ್ನು ತೆರೆದ ವಾಹದಲ್ಲಿಟ್ಟು, ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ತೊಟ್ಟು, ಸ್ಥಬ್ಧ ಚಿತ್ರಗಳು ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸಿದ್ದು ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.
ಸನ್ಮಾನ : ವಿಜಯವಾಣಿ ದಿನ ಪತ್ರಿಕೆಯ ಜಿಲ್ಲಾ ವರದಿದಾರ ಕೆ.ಎನ್.ರಾಘವೇಂದ್ರ, ಭಾರತೀನಗರ ವಿಜಯವಾಣಿ ಹೋಬಳಿ ಮಟ್ಟದ ವರದಿಗಾರ ಎಸ್.ಟಿ.ಕೃಷ್ಣ, ಆಡಳಿತ ವಿಭಾಗದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ವೆಂಕಟೇಗೌಡ, ಅಣ್ಣೂರು ಪಿಡಿಒ ಅಶ್ವಿನಿ, ನಿವೃತ್ತ ಯೋಧ ವಳಗೆರೆಹಳ್ಳಿ ಬಿ.ಡಿ.ಶ್ರೀನಿವಾಸ, ರಂಗಭೂಮಿ ಕಲಾವಿದ ಹುಳಗನಹಳ್ಳಿ ಪಾಪಣ್ಣ, ಶಿಕ್ಷಣ ಕ್ಷೇತ್ರದಲ್ಲಿ ಬ್ಯಾಡರಹಳ್ಳಿ ವಿ.ಆರ್.ಪವಿತ್ರ, ಸಬ್ಬನಹಳ್ಳಿ ಶಿವಕುಮಾರ್ ಹಾಗೂ ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿ ಅತಿ ಹೆಚ್ಚು ಅಂಕಗಳಿಸಿದ ಸಿ.ಪುನೀತ, ಎಲ್.ಅನನ್ಯ, ಎಸ್.ನಿಶ್ಚಲ, ಎಂ.ಲಿಖಿತ, ಎನ್.ಕೆ.ಯಶವಂತ, ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಎಂ.ಲೇಖನ, ಬಿ.ಎಂ.ಯೋಗೇಶ್, ಹಂಸವೇಣಿ, ಕಿಶನ್, ಪ್ರಿಯಾ ಅವರನ್ನು ಸನ್ಮಾನಿಸಲಾಯಿತು ಹಾಗೂ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಅತಿಹೆಚ್ಚು ಅಂಕಗಳಿಸಿದ ಎಸ್.ಪವಿತ್ರ, ಸಿ.ಎಸ್.ಜೀವನ್, ನವ್ಯಶ್ರೀ ಅವರಿಗೆ ಸರ್ಕಾರ ವತಿಯಿಂದ ಲ್ಯಾಪ್ಟ್ಯಾಪ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಸದಸ್ಯರಾದ ಸರ್ವಮಂಗಳ, ಸಿದ್ದರಾಜು, ಎಂ.ಬಿ.ಸಚಿನ್, ಪ್ರಮೀಳ, ಬಸವರಾಜು, ಪ್ರಭಾರ ಮುಖ್ಯಾಧಿಕಾರಿ ಶ್ರೀಧರ್, ತಾಪಂ ಇಒ ರಾಮಲಿಂಗಯ್ಯ, ಬಿಇಓ ಧನಂಜಯ, ವೃತ್ತ ನಿರೀಕ್ಷಕರಾದ ವೆಂಕಟೇಗೌಡ, ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ