ಮಂಡ್ಯ: ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ 2023-24ನೇ ಸಾಲಿನ ಮುಂಗಾರು ಬೆಳೆ ನಷ್ಟ ವಿಮಾ ಯೋಜನೆಯನ್ನು ತಡೆಹಿಡಿದಿದ್ದಾರೆಂದು ಆರೋಪಿಸಿ ಮದ್ದೂರು ತಾಲೂಕಿನ ಕೊಪ್ಪದಲ್ಲಿ ರೈತ ಸಂಘದ ವತಿಯಿಂದ ಮದ್ದೂರು – ನಾಗಮಂಗಲ ರಸ್ತೆ ಮಾರ್ಗದ ಸಂಚಾರ ತಡೆದು ಮಂಗಳವಾರ ಪ್ರತಿಭಟಿಸಲಾಯಿತು.
ವಿಮಾ ಯೋಜನೆ ಹಣ ತಡೆ ಹಿಡಿದಿರುವ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು ಹಾಗೂ ರಸ್ತೆ ಸಂಚಾರ ತಡೆದ ಹಿನ್ನೆಲೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಬಳಿಕ ಪ್ರತಿಭಟನೆ ರ್ಯಾಲಿ ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಕೀಳಘಟ್ಟ ನಂಜುಂಡಯ್ಯ ಮುಂಗಾರು 2023-24ನೇ ಸಾಲಿನ ಬೆಳೆ ನಷ್ಟ ವಿಮಾ ಹಣವನ್ನು ರೈತರಿಗೆ ಈ ವಾರದಲ್ಲಿ ತಕ್ಷಣ ಬಿಡುಗಡೆ ಮಾಡಬೇಕು. ಕೃಷಿ ಇಲಾಖೆಯವರು ಫಸಲ್ ಭೀಮಾ ಯೋಜನೆಯ ವಿಮೆಯ ವರದಿಯನ್ನು ಮರು ಪರಿಶೀಲಿಸಿ ನಾಗಮಂಗಲ ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ವಾರು ಸಮಿಕ್ಷೆ ಮಾಡಿದಂತೆ ಮದ್ದೂರು ಮತ್ತು ಮಳವಳ್ಳಿ ತಾಲೂಕುಗಳಲ್ಲೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ವೆ ಮಾಡಬೇಕು ಹಾಗೂ ಮದ್ದೂರು ತಾಲೂಕಿನಲ್ಲಿ ಹೋಬಳಿ ಮಟ್ಟದಲ್ಲಿ ಬೆಳೆ ಸಮೀಕ್ಷೆ ವರದಿ ಮಾಡಿರುವುದನ್ನು ಕೈ ಬಿಟ್ಟು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ವೆ ಮಾಡಬೇಕೆಂದು ಒತ್ತಾಯಿಸಿದರು.
2023-24ನೇ ಸಾಲಿನಲ್ಲಿ ರಾಜ್ಯದಲ್ಲಿ 164 ಬರಪೀಡಿತ ತಾಲೂಕುಗಳಾಗಿದ್ದು ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತ ತಾಲೂಕು ಆಗಿರುವುದರಿಂದ ತೋಟಗಾರಿಕೆ, ತೆಂಗು ಹಾಗೂ ಇತ್ಯಾದಿ ಮರಗಳು ಸಂಪೂರ್ಣ ಒಣಗಿದ್ದು ಹೆಚ್ಚುವರಿ ವಿಮಾ ಹಣವನ್ನು ಪರಿಹಾರ ಕೊಡಿಸಿಕೊಡಬೇಕು ಹಾಗೂ 2023-24ನೇ ಸಾಲಿನಲ್ಲಿ ಕಳೆದ ವರ್ಷ ಮಳೆಯಾಗದೆ ಕೆರೆ ಕಟ್ಟೆಗಳಿಗೂ ನೀರು ಇಲ್ಲದೆ ಬೋರ್ವೆಲ್ಗಳು ಬತ್ತಿ ಹೋಗಿ ಬರಗಾಲ ಬಂದು ರೈತರಿಗೆ ಬೆಳೆ ನಷ್ಟವಾಗಿದ್ದರೂ ಉತ್ತಮ ಬೆಳೆ ಬಂದಿದೆ ಎಂದು ವಿಮಾ ಕಂಪನಿಗೆ ಸರ್ವೆ ವರದಿ ಕೊಟ್ಟಿರುವ ಭ್ರಷ್ಟ ಅಧಿಕಾರಿಗಳನ್ನು ಅಮಾನತ್ತಿನಲ್ಲಿಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಕೊಟ್ಟರು ಪ್ರಕೃತಿ ವಿಕೋಪಕ್ಕೆ ಸಿಲುಕಿ ಮಳೆ ಗಾಳಿಯಿಂದ ಬೆಳೆ ಹಾನಿಯಾಗಿರುವ ತೆಂಗು, ಭಾಳೆ ಇನ್ನಿತರೆ ಬೆಳೆ ನಷ್ಟ ಹೊಂದಿದ ರೈತರಿಗೆ ಬೆಳೆ ನಷ್ಟ ಪರಿಹಾರ ತಲುಪಿಲ್ಲದ ಕಾರಣ ತಕ್ಷಣವೇ ಪರಿಹಾರ ಕೊಡಿಸಿ ಕೊಡಬೇಕೆಂದು ಒತ್ತಾಯ ಮಾಡಿದರು.
ಜಿಲ್ಲೆಯ ಕೆ.ಆರ್.ಎಸ್. ಹಾಗೂ ಹೇಮಾವತಿ ಡ್ಯಾಂ ತುಂಬಿದ್ದು ಮಾರ್ಕೋನಹಳ್ಳಿ ಡ್ಯಾಂ ನಿಂದ ಶಿಂಷಾ ಎಡ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಬೇಕು. ಹಾಗೂ ಕೊಪ್ಪ ಕೆರೆಯಿಂದ ಬಿದ್ದ ಹೆಚ್ಚುವರಿ ನೀರಿನಿಂದ ಶಿಂಷಾ ಎಡ ಮತ್ತು ಬಲದಂಡೆ ನಾಲಾ ರೈತರು ನಾಟಿ ಮಾಡಿದ್ದು ನೀರಿಲ್ಲದೆ ಬೆಳೆ ಒಣಗುತ್ತಿರುವುದರಿಂದ ತಕ್ಷಣವೇ ಶಿಂಷಾ ಎಡ ಮತ್ತು ಬಲ ನಾಲೆಗಳಿಗೆ ನೀರು ಹರಿಸಿ ಬೆಳೆ ರಕ್ಷಿಸಬೇಕು ಎಂದರು.
ರೈತರ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸದೆ ಹೋದರೆ ಮುಂದಿನ ದಿನಗಳಲ್ಲಿ ಮದ್ದೂರು ಕೃಷಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಮುಂದೆ ಅಹೋರಾತ್ರಿ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪ ತಹಸೀಲ್ದಾರ್ ಮಹೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ರೈತ ಮುಖಂಡರಾದ ಸೊ.ಶಿ.ಪ್ರಕಾಶ್, ಪ್ರಭುಲಿಂಗು, ಶಿವಲಿಂಗಯ್ಯ, ಚನ್ನಪ್ಪ, ಉಮೇಶ್, ರಾಮೇಗೌಡ, ಜಗದೀಶ್, ನಿಂಗೇಗೌಡ, ರಮೇಶ್, ಪುಟ್ಟಸ್ವಾಮಿ ಹಾಗೂ ತಿಮ್ಮೇಶ್ ಸೇರಿದಂತೆ ಹಲವಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ: ಗಿರೀಶ್ ರಾಜ್, ಮಂಡ್ಯ
BMTC ಬಸ್ಸಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ: 2,778 ಪ್ರಕರಣ ಪತ್ತೆ, 5.58 ಲಕ್ಷ ದಂಡ ವಸೂಲಿ
BIG NEWS : ಏನ್ರಿ ಮೀಡಿಯಾ?…ಎಂದಿದ್ದ ಕೊಲೆ ಆರೋಪಿ ನಟ ದರ್ಶನ್ ಗೆ ಜೈಲಿನಲ್ಲಿ ಟಿವಿ ಬೇಕೆ ಬೇಕಂತೆ!
ರೈಲ್ವೆ ಪ್ರಯಾಣಿಕರ ಗಮನಕ್ಕೆ: ಭುವನೇಶ್ವರ-ಬೆಳಗಾವಿ ನಡುವೆ ವಿಶೇಷ ರೈಲು ಸಂಚಾರ