ಬೆಂಗಳೂರು: ದಪ್ಪ ಇರುವುದಕ್ಕೆ ಪತಿಯ ನಿಂದನೆಗೆ ಬೇಸತ್ತು ಬೆಂಗಳೂರಿನಲ್ಲಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಮಂಜುನಾಥನಗರ ನಿವಾಸಿ ಸಂಧ್ಯಾ (31) ಅಂತ ತಿಳಿದು ಬಂದಿದೆ. ಮೃತ ಸಂಧ್ಯಾ ದಪ್ಪ ಇರುವುದಕ್ಕೆ ಪತಿಯ ನಿಂದನೆ ಹಾಗೂ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿನ ವಿಚಾರಕ್ಕೆ ದಾಂಪತ್ಯ ಕಲಹ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮಗಳು ಸಂಧ್ಯಾ ಆತ್ಮಹತ್ಯೆಗೆ ಅಳಿಯ ಜಯಪ್ರಕಾಶ್ ಹಾಗೂ ಕುಟುಂಬಸ್ಥರ ದೈಹಿಕ, ಮಾನಸಿಕ ಕಿರುಕುಳವೇ ಕಾರಣ ಎಂದು ಆರೋಪಿಸಿ ಅವರ ತಂದೆ, ಬಿಎಂಟಿಸಿ ನಿವೃತ್ತ ಚಾಲಕ ಕಂದನ್ ದೂರು ನೀಡಿದ್ದು, ಘಟನೆ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪದನ್ವಯ ಪ್ರಕರಣ ದಾಖಲಿಸಿಕೊಂಡು ಬಸವೇಶ್ವರನಗರ ಪೋಲಿಸ್ ಠಾಣೆಯವರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.