ಬೆಂಗಳೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು. ಅರಳು- ಮರಳು ರೀತಿ ಮಾತನಾಡಬಾರದು. ಇವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಖಂಡನೀಯ. ದೇಶದಾದ್ಯಂತ ಜನರು ಇವರ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಕೊಲ್ಲಲು ಪ್ರಚೋದನೆ ನೀಡುವುದು ಸರಿ ಅಲ್ಲ ಎಂದರು.
ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ತಡೆ ಮಸೂದೆಗೆ ಅಂಗೀಕಾರ ದೊರೆತಿದೆ. ಆ ಮಸೂದೆ ಅನ್ವಯ ಖರ್ಗೆ ಅವರ ರೀತಿ ಪ್ರಚೋದನಾಕಾರಿಯಾಗಿ ಮಾತನಾಡಿದರೆ ಪ್ರಕರಣ ದಾಖಲು ಮಾಡಬಹುದು. ಆದ್ದರಿಂದ ಬಿಜೆಪಿ ದೂರು ನೀಡಿದೆ. ಖರ್ಗೆ ಅವರ ಹೇಳಿಕೆ ಖಂಡಿಸಿ ಬಿಜೆಪಿಯ ಕಾರ್ಯಕರ್ತರು ಸಿಡಿದೆದ್ದು ಎಲ್ಲಾ ಕಡೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ರಜಾಕರಿಂದ ತಮ್ಮ ಕುಟುಂಬದ ಮೇಲೆ ದಾಳಿ ನಡೆದಿದೆ ಎಂದು ಖರ್ಗೆ ಅವರೇ ಹೇಳಿದ್ದಾರೆ. ತಮ್ಮ ಮನೆತನ ಹಾಳು ಮಾಡಿದವರ ವಿರುದ್ಧ ಮಾತನಾಡುವುದನ್ನು ಬಿಟ್ಟು ಬಿಜೆಪಿ ಮತ್ತು ಆರ್‍ಎಸ್‍ಎಸ್ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ಮಗ ಪ್ರಿಯಾಂಕ್ ಖರ್ಗೆ ಅವರು ಬೆಂಬಲ ನೀಡಿದ್ದಾರೆ. ಇದು ಬೇವಿನ ಕಾಯಿಗೆ ಹಾಗಲಕಾಯಿ ಸಾಕ್ಷಿ ಇದ್ದಂತೆ. ಇವರಿಬ್ಬರ ಮನಸ್ಥಿತಿ ಒಂದೇ ಆಗಿದೆ ಆಗಿದೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಕಾಂಗ್ರೆಸ್‍ನಿಂದ ಯಾರೂ ಬಂದಿಲ್ಲ. ಪ್ರಿಯಾಂಕ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಕಾಂಗ್ರೆಸ್‍ನಿಂದ ಮೂಲೆಗುಂಪಾದ ಇವರಿಬ್ಬರು ತಮ್ಮನ್ನು ತೋರಿಸಿಕೊಳ್ಳಲು ಈ ರೀತಿಯ ಹಗೆತನದ ಹೇಳಿಕೆ ನೀಡಿದ್ದಾರೆ. ಅಪ್ಪ ಮತ್ತು ಮಗನ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇದೆ ಎಂದು ವ್ಯಂಗ್ಯವಾಡಿದರು.
ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕೇಂದ್ರ ಸರ್ಕಾರವು ಸ್ವಯಂಪ್ರೇರಿತ ದೂರು ದಾಖಲಿಸಿ ತಿಹಾರ್ ಜೈಲಿಗೆ ಕಳಿಸಬೇಕು. ಆಗ ಇವರು ಇಂತಹ ವಿಷಕಾರಿ ಹೇಳಿಕೆ ನೀಡುವುದಿಲ್ಲ. ವಯಸ್ಸಾಗಿರುವ ಖರ್ಗೆ ಅವರಿಗೆ ವಿಶ್ರಾಂತಿಯ ಅವಶ್ಯಕತೆ ಇದೆ. ಜೈಲಿಗೆ ಹಾಕಿದರೆ ವಿಶ್ರಾಂತಿ ಸಿಗಲಿದೆ. ಮಗ ಅಲ್ಲೇ ಇದ್ದರೆ ಸಹಾಯವಾಗುತ್ತೆ ಎಂದರು.
ಮಾತೆತ್ತಿದರೆ ತಾವು ದಲಿತರು ಅಂತ ಖರ್ಗೆ ಹೇಳುತ್ತಾರೆ. ದಲಿತ ಅನ್ನೋ ಕಾರಣಕ್ಕೇ ಏನು ಬೇಕಾದರೂ ಮಾತನಾಡಬಾರದು. ವಿಷಕಾರಿ ನಾಲಿಗೆ ಹರಿಬಿಟ್ಟು ಕೆಟ್ಟ ಪದ ಬಳಸಿದಾಗ ಬೇರೆಯವರು ನಿಂದಿಸಿದರೆ ನೀವು ದಲಿತ ಕಾರ್ಡ್ ಚಲಾವಣೆ ಮಾಡ್ತೀರಿ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾದ ಮೇಲೆ ಜಾತಿ ಬಿಟ್ಟು ಮಾತನಾಡಬೇಕು. ಜಾತಿ ಟ್ಯಾಗ್ ಮಾಡಿಕೊಂಡು ಮಾತನಾಡಬಾರದು. ಕಾಂಗ್ರೆಸ್‍ಗೆ ಖರ್ಗೆ ಅವರಿಂದ ಬಾಗಿಲು ಹಾಕಿಸುವ ಕೆಲಸ ಮಾಡಬೇಡಿ ಎಂದು ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿಗೆ ಕಿವಿಮಾತು ಹೇಳಿದರು.
‘ಆಪರೇಷನ್ ಎಪಿಕ್ ಫ್ಯೂರಿ’ಗೆ ಇರಾನ್ ತತ್ತರ: ಕದನ ವಿರಾಮಕ್ಕಾಗಿ ಇರಾನ್ ಬೇಡಿಕೊಂಡಿದೆ ಎಂದ ಅಮೆರಿಕ ರಕ್ಷಣಾ ಸಚಿವ
ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿಗೆ ‘ರಾಜ್ಯ ಸಚಿವ ಸ್ಥಾನ’ ನೀಡಿ ಸರ್ಕಾರ ಆದೇಶ








