ನವದೆಹಲಿ : ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ವೇಗವಾಗಿ ಬಂದ ಟ್ರಕ್ ಮದುವೆ ಸಮಾರಂಭಕ್ಕಿ ನುಗ್ಗಿದ ಪರಿಣಾಮ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರು ಗಾಯಗೊಂಡಿದ್ದಾರೆ.
ಸುಲ್ತಾನ್ಪುರ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಲಿಯಾದವರಲ್ಲಿ ಮದುವೆ ಸಮಾರಂಭದಲ್ಲಿ ದೀಪಗಳನ್ನು ಹೊತ್ತ ಕಾರ್ಮಿಕರೂ ಸೇರಿದ್ದಾರೆ ಎಂದು ಸುಲ್ತಾನ್ಪುರ ಪೊಲೀಸ್ ಠಾಣೆಯ ಉಸ್ತುವಾರಿ ರಜತ್ ಸಾರಥೆ ತಿಳಿಸಿದ್ದಾರೆ. ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಅವರು ಹೇಳಿದರು.
ಘಟನೆಯ ನಂತರ, ರೈಸನ್ ಜಿಲ್ಲಾಧಿಕಾರಿ ಅರವಿಂದ್ ದುಬೆ ಅವರು ಸೋಮವಾರ ರಾತ್ರಿ 10 ಗಂಟೆಗೆ ಖಮಾರಿಯಾ ಗ್ರಾಮದ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದರು. ಮದುವೆ ಮೆರವಣಿಗೆ ಹೋಶಂಗಾಬಾದ್ ಜಿಲ್ಲೆಯ ಅಂಚಲ್ಖೇಡಾದಿಂದ ಬಂದಿತ್ತು. ಘಟನೆಯಲ್ಲಿ ಐವರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಭೋಪಾಲ್ ಗೆ ಸ್ಥಳಾಂತರಿಸಲಾಗಿದೆ. ನಂತರ ಚಿಕಿತ್ಸೆ ಫಲಕಾರಿಯಾಗದೆ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾನೆ.
ಮೃತರ ಕುಟುಂಬಕ್ಕೆ 4 ಲಕ್ಷ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಅಪಘಾತದ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಮೃತರ ಕುಟುಂಬಗಳಿಗೆ 4 ಲಕ್ಷ ರೂ ಮತ್ತು ಗಾಯಗೊಂಡವರಿಗೆ 50,000 ರೂ ಪರಿಹಾರವನ್ನು ಘೋಷಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಅರವಿಂದ್ ದುಬೆ ತಿಳಿಸಿದ್ದಾರೆ.