ಮಂಡ್ಯ : ಮದ್ದೂರು ನಗರದ ( ಶಿವಪುರ ) ರೈಲು ನಿಲ್ದಾಣವನ್ನು ಆಧುನೀಕರಣ ಮಾಡಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ರೈಲ್ವೆ ರಾಜ್ಯ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಬೆಂಗಳೂರಿನಿಂದ ಮೈಸೂರಿನವರೆಗೆ ಪ್ರಸ್ತಾವಿತ ರೈಲ್ವೆ ಕಾಮಗಾರಿಗಳ ವೀಕ್ಷಣೆ ಮಾಡುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗುರುವಾರ ಮದ್ದೂರು ರೈಲು ನಿಲ್ದಾಣಕ್ಕೆ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ವಿಶೇಷ ರೈಲಿನಲ್ಲಿ ಆಗಮಿಸಿ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರ ಸಚಿವರು ಹಾಗೂ ಜಿಲ್ಲೆಯ ಸಂಸದರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಮದ್ದೂರು ನಗರದ ರೈಲು ನಿಲ್ದಾಣವು 80 ವರ್ಷಕ್ಕೂ ಹೆಚ್ಚು ಹಳೆಯದಾಗಿದ್ದು, ಹೀಗಾಗಿ ಆಧುನೀಕರಣ ಮಾಡುವಂತೆ ಈಗಾಗಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಕೇಂದ್ರ ರೈಲ್ವೆ ಸಚಿವರ ಸೂಚನೆ ಮೇರೆಗೆ ಮದ್ದೂರಿಗೆ ಭೇಟಿ ನೀಡಿದ್ದು, ಇಲ್ಲಿನ ವಸ್ತು ಸ್ಥಿತಿಯನ್ನು ಅವಲೋಕನ ಮಾಡಲಾಗಿದೆ.
ಮಂಡ್ಯ ಜಿಲ್ಲೆಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯನ್ನು ಮಾಡುವುದರ ಜೊತೆಗೆ ಮದ್ದೂರು ರೈಲು ನಿಲ್ದಾಣವನ್ನು ಆಧುನೀಕರಣ ಮಾಡಲು ಈಗಾಗಲೇ ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಮುಂದಿನ 6 ತಿಂಗಳೊಳಗೆ ಈ ರೈಲು ನಿಲ್ದಾಣವನ್ನು ಆಧುನೀಕರಣ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಅಧಿಕಾರಿಗಳ ಜೊತೆಗೆ ಆಗಮಿಸಿ ಉದ್ಘಾಟನೆ ಮಾಡಲಾಗುವುದು ಎಂದರು.
ಮದ್ದೂರು ಜನತೆಯ ಹಲವು ದಶಕಗಳ ಬೇಡಿಕೆಯಾದ ನೂತನ ರೈಲು ನಿಲ್ದಾಣ ( ಹಾಲ್ಟ್ ) ವನ್ನು ನಿರ್ಮಾಣ ಮಾಡಲು ಕೆಲ ದಿನಗಳಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಗರದ ಸಾರಿಗೆ ನಿಲ್ದಾಣದ ಸಮೀಪದ ತೋಟಗಾರಿಕೆ ಇಲಾಖೆಯ ಸ್ಥಳದಲ್ಲಿ ರೈಲು ನಿಲ್ದಾಣವನ್ನು ನಿರ್ಮಿಸಿದರೆ ನಗರದ ಹೆಚ್ಚಿನ ಸಾರ್ವಜನಿಕರಿಗೆ ಅನುಕೂಲವಾಗುವ ಬಗ್ಗೆ ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ ಅವರು ಈಗಾಗಲೇ ಮನದಟ್ಟು ಮಾಡಿದ್ದು, ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವರ ಬಳಿ ಕುಮಾರಸ್ವಾಮಿ, ಮತ್ತು ನಾನು ಗಂಭೀರವಾಗಿ ಚರ್ಚಿಸಿ ರೈಲು ನಿಲ್ದಾಣ ಮಾಡಲು ಅಗತ್ಯ ಕ್ರಮ ವಹಿಸಲಾಗುವುದು. ಈ ಬಗ್ಗೆ ಇನ್ನೊಂದು ವಾರದಲ್ಲಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಇನ್ನು ಮದ್ದೂರು ರೈಲು ನಿಲ್ದಾಣದಲ್ಲಿ ಕೆಲ ರೈಲುಗಳು ನಿಲುಗಡೆ ನೀಡುತ್ತಿಲ್ಲ ಎಂದು ಸಾರ್ವಜನಿಕರು ಸಚಿವರಿಗೆ ಮನವಿ ಸಲ್ಲಿಸಿದ ವೇಳೆ ಮಾತನಾಡಿದ ಅವರು, ಈ ಬಗ್ಗೆ ರೈಲು ನಿಲ್ದಾಣದ ಆಧುನೀಕರಣಗೊಂಡ ಬಳಿಕ ಎಕ್ಸ್ ಪ್ರೆಸ್ ರೈಲುಗಳು ಸೇರಿದಂತೆ ಎಲ್ಲಾ ರೈಲುಗಳನ್ನು ನಿಲುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗೊಂದಲದ ಗೂಡಾದ ಪರಿಶೀಲನಾ ಕಾರ್ಯಕ್ರಮ, ಪರಿಶೀಲನೆ ಕೈ ಬಿಟ್ಟ ಕೇಂದ್ರ ಸಚಿವರು
ಬೆಂಗಳೂರಿನಿಂದ ಮೈಸೂರಿನವರೆಗೆ ಪ್ರಸ್ತಾವಿತ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಕಾರ್ಯಕ್ರಮ ನಡೆಸಲು ಆಗಮಿಸಿದ್ದ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರುಗಳು ಕಾರ್ಯಕರ್ತರ ಗೊಂದಲದಿಂದ ರೈಲು ನಿಲ್ದಾಣವನ್ನು ಪರಿಶೀಲನೆ ನಡೆಸಲು ಸಾಧ್ಯವಾಗದೆ ಕೆಲ ಸಮಯದಲ್ಲೆ ಸ್ಥಳದಿಂದ ಕಾಲ್ಕಿತ್ತ ಘಟನೆ ಗುರುವಾರ ಜರುಗಿತು.
ರೈಲು ನಿಲ್ದಾಣವನ್ನು ಪರಿಶೀಲನೆ ಮತ್ತು ಸಾರ್ವಜನಿಕರ ಅಹವಾಲು ಸ್ವೀಕರಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಕೇಂದ್ರ ಸಚಿವರು ಆಗಮಿಸುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ತಮ್ಮ ನಾಯಕರುಗಳನ್ನು ನೋಡಿ ರೈಲಿನಿಂದ ಕೆಳಗಿಳಿಯುವ ಮುನ್ನವೇ ಜೈಕಾರ, ಹೂಗುಚ್ಛ ನೀಡಲು ಮುಗಿಬಿದ್ದ ಹಿನ್ನೆಲೆಯಲ್ಲಿ ನೂಕು ನುಗ್ಗಲು ಉಂಟಾಗಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಈ ವೇಳೆ ರೈಲು ನಿಲ್ದಾಣಕ್ಕೆ ಇಳಿದ ಕೇಂದ್ರ ಸಚಿವರು ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಪರಿಶೀಲನೆಯನ್ನು ನಡೆಸಲು ಸಾಧ್ಯವಾಗದೆ ಮತ್ತೆ ರೈಲಿನ ಬಾಗಿಲಿನಲ್ಲೆ ನಿಂತು ಅಹವಾಲು ಸ್ವೀಕರಿಸಿದರು. ಕೇಂದ್ರ ಸಚಿವ ವಿ.ಸೋಮಣ್ಣ ಮಾತನಾಡಿ, ರೈಲು ನಿಲ್ದಾಣದ ಆಧುನೀಕರಣ, ಹೊಸ ರೈಲು ನಿಲ್ದಾಣ ಹಾಗೂ ರೈಲು ನಿಲುಗಡೆಯ ಬಗ್ಗೆ ಮಾತನಾಡಿ ಮಂಡ್ಯ ನಗರದತ್ತ ಹೊರಟರು.
ಅಂಗವಿಕಲರಿಗೆ ಅವಕಾಶ ಕಲ್ಪಿಸದ ಅಧಿಕಾರಿಗಳು
ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದ ಇಬ್ಬರು ಅಂಗವಿಕಲರಿಗೆ ಪೋಲೀಸ್ ಅಧಿಕಾರಿಗಳು ಅವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಬರಿಗೈಲಿ ವಾಪಸ್ಸಾದ ಘಟನೆ ಜರುಗಿತು.
ಕೇಂದ್ರ ಸಚಿವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯ ಬಗ್ಗೆ ಮನವಿ ನೀಡಲು ಮುಂದಾಗಿದ್ದರು. ಈ ವೇಳೆ ಕಾರ್ಯಕರ್ತರ ಗೊಂದಲದಿಂದ ನೂಕು ನುಗ್ಗಲು ಉಂಟಾದ ಪರಿಣಾಮ ಇಬ್ಬರು ಅಂಗವಿಕಲರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸದ ಹಿನ್ನೆಲೆಯಲ್ಲಿ ಸಚಿವರಿಗೆ ಮನವಿ ಸಲ್ಲಿಸಲು ಸಾಧ್ಯವಾಗದೆ ಬರಿಗೈಯಲ್ಲಿ ತೆರಳಿದರು.
ಈ ವೇಳೆ ಮೈಸೂರು ಹಾಗೂ ಕೊಡಗು ಸಂಸದ ಯದುವೀರ್ ಒಡೆಯರ್, ಮಾಜಿ ಸಚಿವರಾದ ಡಿ.ಸಿ ತಮ್ಮಣ್ಣ, ಸಿ.ಎಸ್.ಪುಟ್ಟರಾಜು, ಸಾರಾ ಮಹೇಶ್, ಜಿಲ್ಲಾಧಿಕಾರಿ ಡಾ. ಕುಮಾರ, ಸಿಇಓ ಕೆ.ಆರ್.ನಂದಿನಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿಜೆ ಶೋಭಾರಾಣಿ ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಕೆ.ಸತೀಶ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ದ್ವಿತೀಯ ಪಿಯುಸಿ ಫಲಿತಾಂಶ: ಹೊಸದುರ್ಗದ ವಿಲಾಸ್ 583, ಹಿರಿಯೂರಿನ ಪ್ರಜ್ವಲ್ 574 ಅಂಕ ಗಳಿಸಿ ಅತ್ಯುತ್ತಮ ಸಾಧನೆ
BREAKING : ದ್ವಿತೀಯ ಪಿಯು ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ : 3 ವಿಭಾಗದಲ್ಲೂ ಇವರೇ ನೋಡಿ ಟಾಪರ್!








