ಮಂಡ್ಯ : ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ಕೆಆರ್ಎಸ್ ಜಲಾಶಯದಿಂದ ನೀರು ಬರಲು ಒಂದು ವಾರ ಆಗುತ್ತಿತ್ತು. ಆದರೆ, ಈಗ ಎರಡು ಮೂರು ದಿನಗಳಲ್ಲೇ ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿಯಲು ನಾಲೆಗಳ ಆಧುನಿಕರಣ ಮಾಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಮದ್ದೂರು ತಾಲೂಕಿನ ಪಣ್ಣೆದೊಡ್ಡಿ, ಕೆರೆಮೇಗಳದೊಡ್ಡಿ, ಬೆಳತೂರು, ಹೊಂಬಾಳೆಗೌಡನದೊಡ್ಡಿ ಗ್ರಾಮಗಳಲ್ಲಿ ಶನಿವಾರ 1.80 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮದ್ದೂರು ತಾಲೂಕಿನ ಕೊನೆ ಭಾಗಕ್ಕೆ ಕೆಆರ್ಎಸ್ ಜಲಾಶಯದಿಂದ ನೀರು ಬರಲು ಈ ಹಿಂದೆ ಒಂದು ವಾರ ಆಗುತ್ತಿತ್ತು. ಆದರೆ, ಈಗ ಸಾಕಷ್ಟು ನಾಲೆಗಳ ಆಧುನಿಕರಣವಾಗಿರುವುದರಿಂದ ಎರಡು ಮೂರು ದಿನಗಳಲ್ಲೇ ಕೊನೆ ಭಾಗಕ್ಕೆ ನೀರು ಸರಾಗವಾಗಿ ಹರಿದು ರೈತರಿಗೆ ಅನುಕೂಲವಾಗುತ್ತಿದೆ ಎಂದರು.
ರೈತರು ಬೇಸಾಯ ಮಾಡಲು ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಸಮಸ್ಯೆಗಳ ಬಗ್ಗೆ ಸಾಕಷ್ಟು ಚರ್ಚಿಸಿ ನೀರಾವರಿ ಯೋಜನೆಗಳಿಗೆ ಅಂದಾಜು 800 ಕೋಟಿಗೂ ಹೆಚ್ಚಿನ ಅನುದಾನ ತಂದು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ಈಗಾಗಲೇ ಕೆಮ್ಮಣ್ಣುನಾಲೆ ಆಧುನಿಕರಣ ಕಾಮಗಾರಿ 100 ಕೋಟಿ ರೂ ವೆಚ್ಚದಲ್ಲಿ ಪ್ರಗತಿಯಲ್ಲಿದ್ದು, ಶೀಘ್ರವಾಗಿ ಪೂರ್ಣಗೊಂಡು ರೈತರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಬೈರನ್, ವೈದ್ಯನಾಥಪುರ ಹಾಗೂ ಚಾಮನಹಳ್ಳಿ ನಾಲೆಗಳ ಕಾಮಗಾರಿಗಳನ್ನು ಶೀಘ್ರವಾಗಿ ಚಾಲನೆ ನೀಡಲಾಗುವುದು. ಹಾಗೂ ತಾಲೂಕಿನ ಜೀವನಾಡಿಗಳಾಗಿರುವ ಸೂಳೆಕೆರೆ ಅಚ್ಚುಕಟ್ಟು ಮತ್ತು ಮದ್ದೂರಮ್ಮನ ಕೆರೆ ಅಚ್ಚುಕಟ್ಟು ಪ್ರದೇಶಗಳ ನಾಲೆಗಳು ಹಾಗೂ ಕೆರೆಗಳ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದರು.
ನಾನು ಶಾಸಕನಾದ ಎರಡುವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ವಿಶೇಷ ಅನುದಾನ ನೀಡಿ ರಸ್ತೆ, ಚರಂಡಿ, ಕುಡಿಯುವ ನೀರು, ಕೆರೆ,ಕಟ್ಟೆಗಳ ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ವಿಭಾಗಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಂದೆಯೂ ಸರ್ಕಾರದಿಂದ ವಿಶೇಷ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಲಾಗುವುದು ಎಂದರು.
ಮನ್ ಮುಲ್ ನಿರ್ದೆಶಕ ಹರೀಶ್ ಬಾಬು, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಗ್ರಾಪಂ ಸದಸ್ಯರಾದ ಪ್ರಸನ್ನಕುಮಾರ್, ಮೂರ್ತಿ, ಶೋಭಾ, ಮುಖಂಡರಾದ ಧನಂಜಯ, ಸುಧಾಕರ್, ತಿಮ್ಮೇಗೌಡ, ಪುಟ್ಟಸ್ವಾಮಿ, ಗೋವಿಂದ, ಶರತ್, ಸಿ.ಕೆ.ವೆಂಕಟೇಶ್, ಪ್ರಕಾಶ್,
ಪಿಡಬ್ಲ್ಯೂಡಿ ಎಇಇ ದೇವಾನಂದ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ








