ಬೆಂಗಳೂರು: ಪ್ರತಿ ವರ್ಷ ಕೊಡ ಮಾಡುವಂತ ಬೆಂಗಳೂರು ಪ್ರೆಸ್ ಕ್ಲಬ್ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಚಿವ ಎಂ.ಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 12ರಂದು ನಡೆಯುವಂತ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಪ್ರದಾನ ಮಾಡಲಿದ್ದಾರೆ.
ಈ ಕುರಿತಂತೆ ಬೆಂಗಳೂರು ಪ್ರೆಸ್ ಕ್ಲಪ್ ಅಧ್ಯಕ್ಷ ಆರ್.ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪತ್ರಿಕೋದ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಬೆಂಗಳೂರು ಪ್ರೆಸ್‌ಕ್ಲಬ್ ಪ್ರತಿ ವರ್ಷ ನೀಡುವ ಪ್ರೆಸ್ ಕ್ಲಬ್ ‘ವರ್ಷದ ವ್ಯಕ್ತಿ ಪ್ರಶಸ್ತಿ’, ‘ವಿಶೇಷ ಪ್ರಶಸ್ತಿ’ ಮತ್ತು ‘ವಾರ್ಷಿಕ ಪ್ರಶಸ್ತಿ’ ಗಳನ್ನು ಜನವರಿ 12 ರಂದು ಪ್ರದಾನ ಮಾಡಲಾಗುವುದು ಎಂದಿದ್ದಾರೆ.
ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ 50 ಸಾಧಕ ಪತ್ರಕರ್ತರನ್ನು ಗುರುತಿಸಲಾಗಿದೆ. ಇದರ ಜೊತೆಗೆ ಪ್ರೆಸ್‌ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿ ಘೋಷಿಸಿದ್ದು, ಐವರು ಹಿರಿಯ ಪತ್ರಕರ್ತರು ಹಾಗೂ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲು ಪ್ರೆಸ್‌ಕ್ಲಬ್ ಕಾರ್ಯಕಾರಿ ಸಮಿತಿ ತೀರ್ಮಾನ ಕೈಗೊಂಡಿದೆ ಎಂದಿದ್ದಾರೆ.
ಪ್ರೆಸ್ ಕ್ಲಬ್ ಆವರಣದಲ್ಲಿ ಜನವರಿ 12 ರಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಅನೇಕ ಸಚಿವರು ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಕೈಗಾರಿಕಾ ವಲಯಕ್ಕೆ ನೀಡುತ್ತಿರುವ ಉತ್ತೇಜನವನ್ನು ಪರಿಗಣಿಸಿ ಈ ಸಾಲಿನ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಿದ ಪ್ರಯುಕ್ತ ‘ವಿಶೇಷ ಪ್ರಶಸ್ತಿ’ಗೆ ಇಂಧನ ಸಚಿವ ಕೆ.ಜೆ. ಜಾರ್ಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ವರ್ ಹಾಗೂ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಸುವರ್ಣ ಮಹೋತ್ಸವ ಅಂಗವಾಗಿ ಐವರು ಹಿರಿಯ ಪತ್ರಕರ್ತರು ಮತ್ತು ಸಾಧಕರಿಗೆ ‘ಪ್ರೆಸ್ ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿ’ ಯನ್ನು ನೀಡಲಾಗುತ್ತಿದೆ. 2024ನೇ ಸಾಲಿನ ಪ್ರೆಸ್ ಕ್ಲಬ್ ಸುವರ್ಣ ಮಹೋತ್ಸವ ಪ್ರಶಸ್ತಿಗೆ ಜಾಣಗೆರೆ ವೆಂಕಟರಾಮಯ್ಯ, ಇಂದೂಧರ ಹೊನ್ನಾಪುರ, ಸುಭಾಶ್ ಕೆವಿನ್ ರೈ, ಜಿ.ಎಸ್. ಕೃಷ್ಣಮೂರ್ತಿ ಹಾಗೂ ಡಾ. ನಾಗೇಶ್ ಬಸವರಾಜ್ ಅವರನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ