ಬೆಂಗಳೂರು: 16ನೇ ವಿಧಾನಸಭೆಗೆ ಆಯ್ಕೆಯಾಗಿರುವಂತ ರಾಜ್ಯದ ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ಜೂನ್.30ರೊಳಗೆ ಸಲ್ಲಿಸುವಂತೆ ಲೋಕಾಯುಕ್ತ ಡೆಡ್ ಲೈನ್ ನೀಡಿದೆ.
ಈ ಸಂಬಂಧ ವಿಧಾನಸಭೆ ಸದಸ್ಯರಿಗೆ ಪತ್ರ ಬರೆದಿರುವಂತ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು, ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಕಲಂ 7 ರ ಉಪ ಕಲಂ (1)ರಡಿ ಉಲ್ಲೇಖಿಸಿರುವಂತೆ ಪ್ರತಿಯೊಬ್ಬ ವಿಧಾನಸಭೆಯ ಸದಸ್ಯರು, ಆಯಾ ವರ್ಷದ ಜೂನ್ 30ರೊಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ನಿಗದಿಪಡಿಸಲಾದ ನಮೂನೆಯಲ್ಲಿ ಮಾನ್ಯ ಲೋಕಾಯುಕ್ತರಿಗೆ ಸಲ್ಲಿಸತಕ್ಕದೆಂದು ಕರ್ನಾಟಕ ಲೋಕಾಯುಕ್ತ ಕಾಯಿದೆ, 1984ರ ಕಲಂ 22ರಲ್ಲಿ ಅಧ್ಯಾದೇಶಿಸಲಾಗಿದ್ದು, ಅದರಂತೆ ಪಟ್ಟಿಯನ್ನು ಸಲ್ಲಿಸಲು ಮಾನ್ಯ ಸದಸ್ಯರುಗಳಿಗೆ ತಿಳಿಸುವಂತೆ ದಿನಾಂಕ:21.03.2025ರಂದು ಲೋಕಾಯುಕ್ತ ನಿಬಂಧಕರು ಬರೆದಿರುವ ಪತ್ರದಲ್ಲಿ ತಿಳಿಸಿರುತ್ತಾರೆ ಎಂದಿದ್ದಾರೆ.
ಆದುದರಿಂದ, 16ನೇ ವಿಧಾನಸಭೆಗೆ ಆಯ್ಕೆಯಾಗಿರುವ ಮಾನ್ಯ ಸದಸ್ಯರು 2024-25ನೇ ಸಾಲಿಗೆ ಸಂಬಂಧಿಸಿದ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಪ್ರತಿ ಪುಟ ಹಾಗೂ ಲಗತ್ತುಗಳಿಗೂ ಸಹಿ ಮಾಡಿ ಪುಟ ಸಂಖ್ಯೆಯೊಂದಿಗೆ ದಿನಾಂಕ 30ನೇ ಜೂನ್, 2025 ರೊಳಗಾಗಿ ಮಾನ್ಯ ಕರ್ನಾಟಕ ಲೋಕಾಯುಕ್ತರವರಿಗೆ ನೇರವಾಗಿ ಸಲ್ಲಿಸಿ, ಅದರ ಮಾಹಿತಿಯನ್ನು ಈ ಸಚಿವಾಲಯಕ್ಕೆ ನೀಡಬೇಕೆಂದು ಈ ಮೂಲಕ ತಿಳಿಯಪಡಿಸಲಾಗಿದೆ ಎಂಬುದಾಗಿ ವಿಧಾನಸಭೆಯ ಎಲ್ಲಾ ಮಾನ್ಯ ಸದಸ್ಯರುಗಳಿಗೆ ಪತ್ರ ಬರೆದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ತಿಳಿಸಿದ್ದಾರೆ.