ಮೈಸೂರು: ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ನಾಲ್ವರು ಆರೋಪಿಗಳ ಅಪರಾಧದ ಕುರಿತು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿರುವ ಲೋಕಾಯುಕ್ತ ಸಂಸ್ಥೆಯನ್ನು ದೇವರೇ ಕಾಪಾಡಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ವ್ಯಂಗ್ಯವಾಡಿದರು.
ಮೈಸೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು; ಮುಡಾ ಹಗರಣದಲ್ಲಿ ಏನೆಲ್ಲ ನಡೆದಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ದಾಖಲೆಗಳು ಹಾದಿ
ಸರಕಾರ ನಡೆಸುವ ಮುಖ್ಯಮಂತ್ರಿ ತಮಗೆ ಅವರಿಗೆ ಇಷ್ಟಬಂದಂತೆ, ಅನುಕೂಲ ಆಗುವಂತೆ ಲೋಕಾಯುಕ್ತ ವರದಿಯನ್ನು ಬರೆಸಿಕೊಂಡಿದ್ದಾರೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಕಾರಣ, ಪ್ರತಿ ಹಂತದಲ್ಲಿಯೂ ಸರ್ಕಾರ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದೆ. ಈ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಮಗೆ ಕಿರುಕುಳ ನೀಡಲಾಗುತ್ತಿದೆ. ನಮ್ಮ ಜಮೀನು ತನಿಖೆಗೆ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಎಎಸ್ ಎಸ್ ಐಟಿ ರಚನೆ ಮಾಡಲಾಗಿದೆ. ಐವರು ಐಎಎಸ್ ಅಧಿಕಾರಿಗಳನ್ನು ಎಸ್ ಐಟಿಗೆ ನೇಮಕ ಮಾಡಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
40 ವರ್ಷದ ಹಿಂದೆ ನಾನು ಇದೇ ಮೈಸೂರಿನಲ್ಲಿ ಸಿನಿಮಾ ಹಂಚಿಕೆದಾರನಾಗಿದ್ದಾಗ ಕಷ್ಟಪಟ್ಟು ಸಂಪಾದನೆ ಮಾಡಿದ ಜಮೀನು ಅದಾಗಿದೆ. 14 ಎಕರೆ ಒತ್ತುವರಿಯಾಗಿದೆ ಎಂದು ಆರೋಪ ಮಾಡಿದ್ದಾರೆ. ನಾನು ಹಿಂದೆಯೇ ಅವರಿಗೆ ಪತ್ರ ಬರೆದು, ಸರ್ವೇ ಮಾಡಿಕೊಳ್ಳಿ.. ಒತ್ತುವರಿ ಆಗಿದ್ದರೆ ವಾಪಸ್ ಪಡೆದುಕೊಳ್ಳಿ ಎಂದು ಹೇಳಿದ್ದೇನೆ. ತನಿಖೆ ನಡೆಸಿ ವಶಕ್ಕೆ ತೆಗೆದುಕೊಳ್ಳಿ ಎಂದು ಪತ್ರವನ್ನೇ ಬರೆದಿದ್ದೆ. ಆದರೆ, ನನ್ನ ಮನವಿ ಅಲಕ್ಷ್ಯ ಮಾಡಿ ನಲವತ್ತು ವರ್ಷಗಳಿಂದ ನನಗೆ ಕಿರುಕುಳ ನೀಡಲಾಗುತ್ತಿದೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಮೂಲ ದಾಖಲೆಗಳೆ ಇಲ್ಲ ಎಂದು ಸರ್ಕಾರವೇ ಹೇಳುತ್ತಿದೆ. ಆದರೆ, ಈಗ ಮೂಲ ಮಾಲೀಕರು ಹುಟ್ಟಿಕೊಂಡಿದ್ದಾರೆ!! ಅವರು ಯಾರು? ಎಲ್ಲಿಂದ ಬಂದರು? ಯಾರು ಕರೆದುಕೊಂಡು ಬಂದರು ಎನ್ನುವ ಮಾಹಿತಿ ನನಗಿದೆ ಎಂದ ಅವರು; ಇಂಟರ್ ನ್ಯಾಷನಲ್ ಸರ್ವೇ ಮಾಡಿಸಲಿ. ನಾನೇನು ಹೆದರುವ ವ್ಯಕ್ತಿ ಅಲ್ಲ. ಸಿಎಂ ಸಿದ್ದರಾಮಯ್ಯ ಸತ್ಯಹರಿಶ್ಚಂದ್ರರೇ? ಹಿನಕಲ್ ಸಾಕಮ್ಮನ ಜಮೀನು ವಿವಾದ ಯಾವುದು? ಅದಕ್ಕೂ ಸಿದ್ದರಾಮಯ್ಯ ಅವರಿಗೂ ಏನು ಸಂಬಂಧ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು.
ಕನ್ನಡಿಗರಿಗೆ ರಕ್ಷಣೆ ಇಲ್ಲ:
ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಪ್ರಕರಣದ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವರು; ಈ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ? ಮಂತ್ರಿಗಳೊಬ್ಬರು ಮರಾಠಿಯಲ್ಲೇ ಭಾಷಣ ಮಾಡಿದ್ದಾರೆ. 2006-07ರಲ್ಲಿ ನಾನು ಸಿಎಂ ಆಗಿದ್ದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಬಳಿ ನಿಯೋಗ ಹೋಗಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನ ಮಾಡಿದರು. ಆದರೆ, ನಾನು ಅದಕ್ಕೆ ಅವಕಾಶ ಕೊಡಲಿಲ್ಲ. ಬೆಳಗಾವಿಯನ್ನು ರಾಜ್ಯದ ಎರಡನೇ ರಾಜಧಾನಿ ಮಾಡಿ, ಅಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದೆ. ಈ ಸರ್ಕಾರದ ಆಡಳಿತದಲ್ಲಿ ಬೆಳಗಾವಿ ಪರಿಸ್ಥಿತಿ ಅಯೋಮಯವಾಗಿದೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರಿಗೆ ರಾಜಕೀಯ ವೈರಾಗ್ಯ ಬಂದ ಹಾಗಿದೆ. ರಾಜೀನಾಮೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಕೀಯದಲ್ಲಿ ಮರ್ಯಾದಸ್ಥರು ಇರುವುದು ಒಳ್ಳೆಯದಲ್ಲ ಎಂದು ಅವರಿಗೆ ಅನಿಸಿರಬೇಕು. 136 ಕ್ಷೇತ್ರಗಳನ್ನು ಗೆದ್ದಿರುವ ಈ ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲ. ಯಾವ ವಿಚಾರದಲ್ಲಿಯೂ ಇವರಿಗೆ ನಿಯಂತ್ರಣ ಇಲ್ಲ. ಆದರೂ, ಸಚಿವ ಮಹದೇವಪ್ಪ ಅವರು ಸಿಎಂ ರೆಕಾರ್ಡ್ ಮಾಡಬೇಕು ಎನ್ನುತ್ತಾರೆ. ಮಹದೇವಪ್ಪ ಅವರೇ.. ಎಷ್ಟು ವರ್ಷ ಆಡಳಿತ ನಡೆಸಿದಿರಿ ಎನ್ನುವುದು ಮುಖ್ಯವಲ್ಲ. ಅಧಿಕಾರ ನಡೆಸಿದ ಸಂದರ್ಭದಲ್ಲಿ ಈ ನಾಡಿನ ಜನರ ಎಷ್ಟು ಸಮಸ್ಯೆ ಬಗೆಹರಿಸಿದಿರಿ ಎನ್ನುವುದು ಮುಖ್ಯ ಎಂದು ಕುಮಾರಸ್ವಾಮಿ ಅವರು ತಿರುಗೇಟು ಕೊಟ್ಟರು.
ಬೆಲೆ ಏರಿಸಿ ಗ್ಯಾರಂಟಿ ಕೊಡೋದಾದ್ರೆ ನಾನು ₹10,000 ಕೊಡುತ್ತೇನೆ:
ನನಗೆ ಒಮ್ಮೆ 20 ತಿಂಗಳು, ಇನ್ನೊಮ್ಮೆ 14 ತಿಂಗಳು ಜನಪರ ಆಡಳಿತ ನಡೆಸಿದ ಬಗ್ಗೆ ತೃಪ್ತಿ ಇದೆ. ನೀವು ಗ್ಯಾರಂಟಿ ಎಂದು ಮಾಡಿದ್ದೀರಿ. ನಿಮ್ಮ ಮನೆ ಹಣದಿಂದ ಯೋಜನೆ ಮಾಡಿದ್ದೀರಾ? ಗ್ಯಾರೆಂಟಿ ಯೋಜನೆಗೆ ಯಾರಪ್ಪನ ದುಡ್ಡು ಬಳಕೆ ಮಾಡುತ್ತಿದ್ದೀರಿ? ಮೆಟ್ರೋ ದರ, ಬಸ್ ಪ್ರಯಾಣ ದರ, ಮದ್ಯದ ದರ, ಮುದ್ರಾಂಕ ಶುಲ್ಕ, ಮಾರ್ಗದರ್ಶಿ ಮೌಲ್ಯ ಏರಿಕೆ ಮಾಡಿ ಗ್ಯಾರಂಟಿ ಕೊಡಲಿಕ್ಕೆ ನೀವೇ ಬೇಕಾ? ಈ ರೀತಿ ಗ್ಯಾರಂಟಿ ಕೊಡುವುದಿದ್ದರೆ ನಾನು ತಿಂಗಳಿಗೆ ₹10,000 ಗ್ಯಾರಂಟಿ ಕೊಡುತ್ತೇನೆ ಎಂದು ಟಾಂಗ್ ಕೊಟ್ಟರು.
ಜಾತಿಗಣತಿ; ಚನ್ನಗಿರಿ ಶಾಸಕರ ಹೇಳಿಕೆ ಉಲ್ಲೇಖಿಸಿದ HDK
ರಾಜ್ಯದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡುವ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು; ನಮ್ಮ ಮನೆಗೆ ಬಂದು ಯಾರೂ ಜಾತಿಗಣತಿ ಮಾಡಿಲ್ಲ ಎಂದು ಚನ್ನಗಿರಿ ಕಾಂಗ್ರೆಸ್ ಎಂಎಲ್ ಎ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಹೇಳಿರುವ ಮಾತಿದು. ಧೈರ್ಯವಿದ್ದರೆ ಜಾತಿ ಗಣತಿ ವರದಿ ಬಿಡುಗಡೆ ಮಾಡಿ. ಆಮೇಲೆ ಏನು ನಡೆಯುತ್ತದೆ ಎನ್ನುವುದನ್ನು ನೋಡಿ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ಕೊಟ್ಟರು.
ಬಹಳ ದಿನಗಳಿಂದ ಜಾತಿ ಗಣತಿ ವರದಿ ಗುಮ್ಮ ಬಿಡಲಾಗುತ್ತಿದೆ. ವರದಿ ಕೈ ಸರ್ಕಾರದ ಕೈ ಸೇರಿದೆ. ಬಿಡುಗಡೆ ಮಾಡುವುದು ಬಿಟ್ಟು ಮಾಧ್ಯಮಗಳ ಮೂಲಕ ಬಿಡುಗಡೆ ಏಕೆ ಸೋರಿಕೆ ಮಾಡಲಾಗುತ್ತಿದೆ. ಜಾತಿಗಣತಿ ವರದಿ ಇಟ್ಟುಕೊಂಡು ಪೂಜೆ ಮಾಡುತ್ತಿದ್ದೀರಾ ಹೇಗೆ? ಎಂದು ಕೇಂದ್ರ ಸಚಿವರು ಟೀಕಾ ಪ್ರಹಾರ ನಡೆಸಿದರು.
ಯಾವುದನ್ನು ಕಾಂಗ್ರೆಸ್ ನವರಿಂದ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಕರ್ನಾಟಕ ಲೋಕಸೇವಾ ಆಯೋಗವನ್ನು ಹಾಳು ಮಾಡಿದಿರಿ. ಕೇವಲ ಒಬ್ಬ ಹೆಣ್ಣು ಮಗಳಿಗಾಗಿ 370 ಮಕ್ಕಳ ಕುಟುಂಬಗಳನ್ನು ಬೀದಿಗೆ ತಂದಿ ನಿಲ್ಲಿಸಿದಿರಿ. ಕೆಪಿಎಸ್‌ಸಿ ಈವತ್ತು ಏನಾಗಿದೆ? ಬೇವಿನಮರ ನೆಟ್ಟು ಮಾವಿನ ಹಣ್ಣು ಕೇಳಿದರೆ ಸಿಗುತ್ತಾ? ಕೆಪಿಎಸ್ ಸಿ ಭ್ರಷ್ಟ ಕೂಪವಾಗಿದೆ ಎಂದು ಅವರು ಆರೋಪ ಮಾಡಿದರು.
ಭಾರತದಲ್ಲಿ 2024ರಲ್ಲಿ 84 ಬಾರಿ ಇಂಟರ್ನೆಟ್ ಸ್ಥಗಿತ: ವಿಶ್ವದಲ್ಲೇ 2ನೇ ಸ್ಥಾನ | Internet shutdown
BREAKING : ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ : ‘HSRP’ ನಂಬರ್ ಪ್ಲೇಟ್ ಅಳವಡಿಕೆ ಮಾ.31ರವರೆಗೆ ವಿಸ್ತರಣೆ