ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಲೋಕಸಭೆ ಚುನಾವಣೆಗೆ ಬೆಳಗಾವಿಯಿಂದ ಸ್ಪರ್ದಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ನಿನ್ನೆ ನನ್ನನ್ನು ಭೇಟಿಯಾದರು. ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧರಿರಲಿಲ್ಲ. ಅಲ್ಲಿಂದ ಸ್ಪರ್ಧಿಸುವಂತೆ ನಾನು ಅವರನ್ನು ಮನವೊಲಿಸಿದೆ. ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಯಡಿಯೂರಪ್ಪ ತಿಳಿಸಿದರು.
ಬೆಳಗಾವಿಯಲ್ಲಿ ಬಿಜೆಪಿ ಭಾರಿ ಅಂತರದಿಂದ ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ, ಕರ್ನಾಟಕದಲ್ಲಿ ಬಿಜೆಪಿ ಪರವಾಗಿ ಅಲೆ ಇದೆ ಇದು ಎಲ್ಲಾ 28 ಲೋಕಸಭಾ ಸ್ಥಾನಗಳಲ್ಲಿ ಪಕ್ಷದ ಗೆಲುವಿಗೆ ಕಾರಣವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ನಾವು ಎಲ್ಲಾ 28 ಸ್ಥಾನಗಳನ್ನು ಗೆಲ್ಲುತ್ತೇವೆ, ಇದು ಕಷ್ಟವೆಂದು ತೋರುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ಪ್ರಸ್ತುತ ಬೆಳಗಾವಿ ಕ್ಷೇತ್ರವನ್ನು ಕೇಂದ್ರದ ಮಾಜಿ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಪ್ರತಿನಿಧಿಸುತ್ತಿದ್ದಾರೆ. 2021 ರ ಉಪಚುನಾವಣೆಯಲ್ಲಿ ಅವರು ಕಾಂಗ್ರೆಸ್ನ ಪ್ರಬಲ ನಾಯಕ ಸತೀಶ್ ಜಾರಕಿಹೊಳಿ ವಿರುದ್ಧ 5,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು.