ಬೆಂಗಳೂರು : ಲೋಕಸಭೆ ಕ್ಷೇತ್ರ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ನಮೂನೆ-12 ಎ ಭರ್ತಿ ಮಾಡಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಕರ್ನಾಟಕದಲ್ಲಿ ಮೊದಲ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಇದೇ ಏಪ್ರಿಲ್ 26ರ ಶುಕ್ರವಾರ ಹಾಗೂ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮೇ 7 ರ ಮಂಗಳವಾರ ನಡೆಸುತ್ತಿದೆ. ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಮೂನೆ 12 ಎ ಫಾರಂ ಅನ್ನು ಭರ್ತಿ ಮಾಡಿ ಕಡ್ಡಾಯವಾಗಿ ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.
ಈ ಫಾರಂ ಅನ್ನು ಮತದಾನ ದಿನದಂದು ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಾವು ಕರ್ತವ್ಯ ನಿರ್ವಹಿಸಬಹುದಾದ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡಲು ಈ ನಮೂನೆಯನ್ನು ನೀಡಬೇಕಾಗಿದ್ದು, ಬಳಿಕ ನಮೂನೆ 12 ಬಿ ಚುನಾವಣಾ ಕರ್ತವ್ಯ ಪ್ರಮಾಣ ಪತ್ರ ನೀಡಲಾಗುತ್ತದೆ.
ನಮೂನೆ 12 ಎ ನಲ್ಲಿ ತಾವು ಕರ್ತವ್ಯ ನಿರ್ವಹಿಸುವ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರಿಗೆ ನೀಡಬೇಕಾಗಿದ್ದು, ತಮ್ಮ ಮತದಾರರ ಗುರುತಿನ ಚೀಟಿ ಸಂಖ್ಯೆ, ಪಾರ್ಟ್ ಸಂಖ್ಯೆ ತಪ್ಪಿಲ್ಲದಂತೆ ನಮೂದಿಸಬೇಕು. ಈ ಕುರಿತು ಸಂಶಯವಿದ್ದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಗಳಿಗೆ ಸಂಪರ್ಕಿಸಬಹುದು. ಈ ವಾರದಲ್ಲಿ ಸಾಲು ರಜೆ ಇರುವುದರಿಂದ ನಮೂನೆ ಭರ್ತಿ ಮಾಡಿ ಸಲ್ಲಿಸಲು ಏ.23 ರವರೆಗೆ ಕಾಲಾವಕಾಶವಿರುತ್ತದೆ.