ಧಾರವಾಡ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು ಕಲ್ಯಾಣ ಮಂಟಪಗಳು ಹಾಗೂ ಸಮುದಾಯ ಭವನಗಳು ತಮ್ಮಲ್ಲಿ ನಿಗದಿಯಾಗಿರುವ ಮದುವೆ ಸಮಾರಂಭಗಳ, ಹುಟ್ಟುಹಬ್ಬ ಹಾಗೂ ಇನ್ನಿತರೆ ಸಮಾರಂಭಗಳ ಕಾರ್ಯಕ್ರಮಗಳ ದಿನಾಂಕಗಳನ್ನು ಕಡ್ಡಾಯವಾಗಿ ಆಯಾ ತಾಲೂಕು ತಹಶಿಲ್ದಾರರಿಗೆ ತಪ್ಪದೇ ಮಾಹಿತಿ ಸಲ್ಲಿಸತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ದಿವ್ಯ ಪ್ರಭು ಅವರು ಹೇಳಿದರು.
ಚುನಾವಣಾ ಕರ್ತವ್ಯ ಮೇಲಿರುವ ಎಸ್.ಎಸ್.ಟಿ, ಎಫ್.ಎಸ್.ಟಿ ಹಾಗೂ ವಿ.ಎಸ್.ಟಿ ತಂಡಗಳು ನಿಗಾ ವಹಿಸುತ್ತವೆ. ಮಾಲೀಕರು ತಮ್ಮ ಸಭಾಭವನದಲ್ಲಿ ಯಾವುದಾದರೂ ರಾಜಕೀಯ ಚಟುವಟಿಕೆಗಳು ಜರುಗಿದ್ದಲ್ಲಿ ಅಂತವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದರು.
ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳು ರಾಜಕೀಯ ಚುನಾವಣಾ ಪ್ರಚಾರಕ್ಕೆ ದುರುಪಯೋಗ ವಾಗಬಾರದು. ಚುನಾವಣಾ ಪ್ರಚಾರಕ್ಕೆ ಪಕ್ಷಗಳು ಅನುಮತಿ ಪಡೆದಿದ್ದಲ್ಲಿ ಅಭ್ಯಂತರವಿಲ್ಲ ಧಾರ್ಮಿಕ ಕಟ್ಟಡಗಳಲ್ಲಿ, ಕಲ್ಯಾಣ ಮಂಟಪ ಇದ್ದಲ್ಲಿ ತೀವ್ರ ನಿಗಾ ವಹಿಸಲಾಗುವುದೆಂದು ಅವರು ತಿಳಿಸಿದರು.
ಕಲ್ಯಾಣ ಮಂಟಪದ ಮಾಲೀಕರು ಮದುವೆ ಹಾಗೂ ಇನ್ನಿತರ ಸಮಾರಂಭಗಳ ದಿನಾಂಕಗಳನ್ನು ಜಿಲ್ಲಾ ಚುನಾವಣಾಧಿಕಾರಿಗಳು ಇ-ಮೇಲ್ ಜeo.ಜhಚಿಡಿತಿಚಿಜ@gmಚಿiಟ.ಛಿom ಗೆ ಸಹ ಸಲ್ಲಿಸಬಹುದಾಗಿದೆ.
ಪ್ರಿಂಟಿಂಗ್ ಪ್ರೆಸ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ:
ಜಿಲ್ಲೆಯಲ್ಲಿ ಯಾವುದೇ ಪ್ರಕಾಶಕರು ಅಥವಾ ಮುದ್ರಕರು ಚುನಾವಣೆಗೆ ಸಂಬಂಧಪಟ್ಟ ಕರಪತ್ರ ಅಥವಾ ಕೈ-ಬಿಲ್, ಫಲಕಗಳು, ಬ್ಯಾನರ್ಸ್, ಬಂಟಿಂಗ್ಸ್, ಪ್ಲೆಕ್ಸ್ ಅಥವಾ ಭಿತ್ತಿಪತ್ರಗಳು, ಹೆಸರು ವಿಳಾಸ, ದಿನಾಂಕ ಮತ್ತು ಪ್ರತಿಗಳ ಸಂಖ್ಯೆ ಇಲ್ಲದೆ ಮುದ್ರಿಸುವಂತಿಲ್ಲ ಮತ್ತು ಪುಕಟಿಸುವಂತಿಲ್ಲ.
ಯಾವುದೇ ವ್ಯಕ್ತಿಯು ಕರಪತ್ರ ಅಥವ ಕೈ-ಬಿಲ್, ಫಲಕಗಳು, ಬ್ಯಾನರ್ಸ್, ಬಂಟಿಂಗ್ಸ್, ಫ್ಲಕ್ಸ್ ಅಥವಾ ಭಿತ್ತಿಪತ್ರಗಳನ್ನು ಮುದ್ರಿಸುವ ಪೂರ್ವದಲ್ಲಿ ಅವರಿಂದ ಸಹಿ ಮಾಡಲ್ಪಟ್ಟ ಮತ್ತು ಅವರ ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ಧೃಡೀಕರಿಸಲ್ಪಟ್ಟ ಪ್ರಕಾಶಕರ ಗುರತಿನ ಘೋಷಣೆಯನ್ನು ದ್ವಿಪ್ರತಿಯಲ್ಲಿ ಮುದ್ರಣಕ್ಕೆ ಸಲ್ಲಿಸದ ಹೊರತು ಮತ್ತು ಡಾಕ್ಯುಮೆಂಟ್‍ನ ಮುದ್ರಣದ ನಂತರ ಮೂರು ದಿನಗಳೊಳಗಾಗಿ ಜಿಲ್ಲಾ ಚುನಾವಣಾಧಿಕಾರಿಗಳ ಕಾರ್ಯಾಲಯಕ್ಕೆ ಸಲ್ಲಿಸತಕ್ಕದ್ದು ಎಂದು ಅವರು ತಿಳಿಸಿದರು.
ಅಂತಹ ಯಾವುದೇ ಮುದ್ರಣ ಅಥವಾ ಪ್ರಕಟಣೆಯ 03 ದಿನಗಳೊಳಗೆ ಸದರಿ ಮುದ್ರಣಾಲಯ ಅಥವಾ ಪ್ರಕಾಶಕರು ಮುದ್ರಿತ ವಸ್ತುಗಳ ನಾಲ್ಕು ಪ್ರತಿಗಳನ್ನು ಮತ್ತು ಪ್ರಕಾಶಕರ ಘೋಷಣೆಯ ಒಂದು ಪ್ರತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುವ ನಮೂನೆಯಲ್ಲಿ ಅದರ ಮುದ್ರಣದ ಮೂರು ದಿನಗಳೊಳಗೆ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿಗಳು ಅವರಿಗೆ ಸಲ್ಲಿಸಬೇಕು, ತಪ್ಪಿದಲ್ಲಿ ಪ್ರಜಾಪ್ರತಿನಿಧಿ ಕಾಯಿದೆ 1951 ರ 127-ಂನ ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ವೇದಿಕೆಯಲ್ಲಿ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಮೋನಾ ರಾವುತ್, ಮಹಾನಗರ ಪಾಲಿಕೆಯ ಆಯುಕ್ತ ಡಾ. ಈಶ್ವರ ಉಳಾಗಡ್ಡಿ, ಜಿಲ್ಲೆಯ ಎಲ್ಲ ಕಲ್ಯಾಣಮಂಟಪದ ಮಾಲೀಕರು ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಸಭೆಯಲ್ಲಿ ಉಪಸ್ಥಿತರಿದ್ದರು.