ನವದೆಹಲಿ : 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆಯಲಿದ್ದು, ಈ ಬಾರಿಯ ಲೋಕಸಭೆಗೆ ಒಟ್ಟು ಏಳು ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು, ಈ ಪೈಕಿ ಇಂದು 2ನೇಯದ್ದಾಗಿದೆ.
2 ನೇ ಹಂತದ ಚುನಾವಣೆಗೆ ಒಟ್ಟು 2,633 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಕೆಲವರು ನಾಮಪತ್ರ ಹಿಂಪಡೆದ ಕಾರಣ ಅಂತಿಮ ಕಣದಲ್ಲಿ 1,206 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.
ಕೋಲಾರ (ಮೀಸಲು) , ಮಂಡ್ಯ, ಉಡುಪಿ-ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರು, ಚಿತ್ರದುರ್ಗ(ಮೀಸಲು) , ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರ ಕೇಂದ್ರ, ಬೆಂಗಳೂರು ಉತ್ತರ, ದಕ್ಷಿಣ ಕನ್ನಡ, ಚಾಮರಾಜನಗರ(ಮೀಸಲು) ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನರ ಸರತಿ ಸಾಲು ಇದ್ದರೆ ಮತದಾನದ ಸಮಯವನ್ನು ಅಧಿಕಾರಿಗಳು ಅಗತ್ಯಕ್ಕೆ ತಕ್ಕ ಹಾಗೇ ವಿಸ್ತರಣೆ ಮಾಡಲಿದ್ದಾರೆ.
ಇದಲ್ಲದೇ
ಎರಡನೇ ಹಂತದಲ್ಲಿ 88 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಕೇರಳ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ ಗಢ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರಾದ ಮತದಾರರು ಎರಡನೇ ಹಂತದಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
18 ನೇ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಾಳೆ ಏಪ್ರಿಲ್ 26 ರಂದು (ಶುಕ್ರವಾರ) ನಡೆಯಲಿದೆ. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 88 ಲೋಕಸಭಾ ಕ್ಷೇತ್ರಗಳ ಮತದಾರರು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 8, ಮಧ್ಯಪ್ರದೇಶದ 6, ಬಿಹಾರ ಮತ್ತು ಅಸ್ಸಾಂನ ತಲಾ 5, ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದ ತಲಾ 3, ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಮಣಿಪುರದ ತಲಾ 1 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.
ಎರಡನೇ ಹಂತದಲ್ಲಿ ಹಲವಾರು ಪ್ರಮುಖ ಅಭ್ಯರ್ಥಿಗಳು ಚುನಾವಣಾ ಕದನದಲ್ಲಿ ಹೋರಾಡುತ್ತಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ್, ಶಶಿ ತರೂರ್, ಕೆ.ಮುರಳೀಧರನ್ ಮತ್ತು ಕೆ.ಸುಧಾಕರನ್, ಸಿಪಿಎಂ ಅಭ್ಯರ್ಥಿಗಳಾದ ಎಲಮಾರಂ ಕರೀಮ್, ಕೆ.ಕೆ.ಶೈಲಜಾ, ಸಿ.ರವೀಂದ್ರನಾಥ್ ಮತ್ತು ಎಂ.ವಿ.ಜಯರಾಜನ್ ಕಣದಲ್ಲಿದ್ದಾರೆ. ಬಿಜೆಪಿಯ ಕೆ.ಸುರೇಂದ್ರನ್, ಸುರೇಶ್ ಗೋಪಿ, ವಿ.ಮುರಳೀಧರನ್ ಮತ್ತು ರಾಜೀವ್ ಚಂದ್ರಶೇಖರ್ ಕೂಡ ದಕ್ಷಿಣ ರಾಜ್ಯದಿಂದ ಕೇಸರಿ ಪಕ್ಷದ ಖಾತೆ ತೆರೆಯಲು ಪ್ರಯತ್ನಿಸುತ್ತಿದ್ದಾರೆ.
2019 ರಲ್ಲಿ ಕೇರಳದಿಂದ ಯಾವುದೇ ಸ್ಥಾನಗಳನ್ನು ಪಡೆಯಲು ಬಿಜೆಪಿ ವಿಫಲವಾಗಿದೆ. ತುಷಾರ್ ವೆಲ್ಲಪಲ್ಲಿ (ಬಿಡಿಜೆಎಸ್), ಥಾಮಸ್ ಚಾಜಿಕಾಡನ್ (ಕೇರಳ ಕಾಂಗ್ರೆಸ್-ಮಣಿ), ಫ್ರಾನ್ಸಿಸ್ ಜಾರ್ಜ್ (ಕೇರಳ ಕಾಂಗ್ರೆಸ್), ಎನ್.ಕೆ.ಪ್ರೇಮಚಂದ್ರನ್ (ಆರ್ಎಸ್ಪಿ), ಇಟಿ ಮೊಹಮ್ಮದ್ ಬಶೀರ್ (ಐಯುಎಂಎಲ್) ಮತ್ತು ಅನ್ನಿ ರಾಜಾ (ಸಿಪಿಐ) ಇತರ ಪ್ರಮುಖ ಅಭ್ಯರ್ಥಿಗಳು ಆಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಪಿಸಿ ಮೋಹನ್, ಸಿ.ಎನ್.ಮಂಜುನಾಥ್ ಮತ್ತು ಗೋವಿಂದ ಕಾರಜೋಳ ಕೆಲವು ಪ್ರಮುಖ ಅಭ್ಯರ್ಥಿಗಳು. ಕಾಂಗ್ರೆಸ್ ನಿಂದ ಡಿ.ಕೆ.ಸುರೇಶ್, ರಾಜೀವ್ ಗೌಡ, ಸೌಮ್ಯಾ ರೆಡ್ಡಿ, ಬಿ.ಎನ್.ಚಂದ್ರಪ್ಪ, ಕೆ.ಜಯಪ್ರಕಾಶ್ ಹೆಗ್ಡೆ, ಜೆಡಿಎಸ್ ನಿಂದ ಎಚ್.ಡಿ.ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಕಣದಲ್ಲಿದ್ದಾರೆ.
ಬಿಜೆಪಿಯ ಗಜೇಂದ್ರ ಸಿಂಗ್ ಶೇಖಾವತ್, ಕೈಲಾಶ್ ಚೌಧರಿ, ಚಂದ್ರ ಪ್ರಕಾಶ್ ಜೋಶಿ, ಓಂ ಬಿರ್ಲಾ ಮತ್ತು ದುಶ್ಯಂತ್ ಸಿಂಗ್ ರಾಜಸ್ಥಾನದ ಕೆಲವು ಪ್ರಮುಖ ಅಭ್ಯರ್ಥಿಗಳು. ಸಿಪಿ ಜೋಶಿ, ವೈಭವ್ ಗೆಹ್ಲೋಟ್, ಪ್ರಹ್ಲಾದ್ ಗುಂಜಲ್ ಮತ್ತು ಉದಯ್ ಲಾಲ್ ಅಂಜನಾ (ಕಾಂಗ್ರೆಸ್) ಮತ್ತು ರವೀಂದ್ರ ಸಿಂಗ್ ಭಾಟಿ (ಸ್ವತಂತ್ರ) ಕೂಡ ಕಣದಲ್ಲಿದ್ದಾರೆ.
ಪ್ರಿಯ, ಓದುಗರೇ ಪ್ರಜಾಪ್ರಭುತ್ವದಲ್ಲಿ ಮತದಾನವೇ ಪವಿತ್ರವಾದ ಕೆಲಸ, ಮತದಾನದ ಪ್ರಮಾಣದಿಂದ ದಿನಕ್ಕೆ ಕಡಿಮೆಯಾಗುತ್ತಿದೆ, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಕೂಡ ಹೌದು, ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಇಂದು ತಪ್ಪದೇ ಮತದಾನ ಮಾಡಿ ನಮ್ಮ ಹೆಮ್ಮೆಯ ಕಾರ್ಯವನ್ನುಸಂಭ್ರಮದಿಂದ ಆಚರಿಸೋಣ, ಸೋ ಮಿಸ್ ಮಾಡದೇ ನಮ್ಮ ಕರ್ತವ್ಯವನ್ನು ಮಾಡೋಣ. ದಯವಿಟ್ಟು ಎಲ್ಲರೂ ಕೂಡ ಮತದಾನ ಮಾಡಿ. ಪ್ರಜಾಪ್ರಭುತ್ವದ ಯಶಸ್ವಿಗೆ ಕಾರಣರಾಗಿ.
ಇಂದು ತಪ್ಪದೇ ಮತದಾನ ಮಾಡಿ