ನವದೆಹಲಿ: ದೇಶದ ಪ್ರತಿಷ್ಠಿತ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾದ ಆಹಾರದ ಗುಣಮಟ್ಟದ ಕುರಿತು ಕೇಳಿಬಂದಿರುವ ಗಂಭೀರ ದೂರಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಇಲಾಖೆ ಹರಿತವಾದ ಕ್ರಮ ಕೈಗೊಂಡಿದೆ. ಆಹಾರದಲ್ಲಿ ಜೀವಂತ ಹುಳುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಐಆರ್ಸಿಟಿಸಿ (IRCTC) ಸಂಸ್ಥೆಗೆ 10 ಲಕ್ಷ ರೂಪಾಯಿ ಹಾಗೂ ಆಹಾರ ಸರಬರಾಜು ಮಾಡಿದ ವೆಂಡರ್ಗೆ (Vendor) 50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಇತ್ತೀಚೆಗೆ ದೆಹಲಿಯಿಂದ ವಾರಣಾಸಿಗೆ ಸಂಚರಿಸುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾದ ಊಟದ ತಟ್ಟೆಯಲ್ಲಿ ಜೀವಂತ ಹುಳುಗಳು ಹರಿದಾಡುತ್ತಿರುವುದು ಕಂಡುಬಂದಿತ್ತು. ಪ್ರಯಾಣಿಕರು ಇದರ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆಹಾರದ ಸುರಕ್ಷತೆಯಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಐಆರ್ಸಿಟಿಸಿಗೆ ₹10 ಲಕ್ಷ ಮತ್ತು ಖಾಸಗಿ ಕೆಟರಿಂಗ್ ವೆಂಡರ್ಗೆ ₹50 ಲಕ್ಷ ದಂಡ ವಿಧಿಸಲಾಗಿದೆ.ಸಂಬಂಧಪಟ್ಟ ವೆಂಡರ್ಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸಿದರೆ ಕಪ್ಪುಪಟ್ಟಿಗೆ (Blacklist) ಸೇರಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.ಈ ಘಟನೆಯ ನಂತರ ಎಲ್ಲಾ ವಂದೇ ಭಾರತ್ ಮತ್ತು ಪ್ರೀಮಿಯಂ ರೈಲುಗಳಲ್ಲಿ ಆಹಾರದ ಗುಣಮಟ್ಟವನ್ನು ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.








