ಬೆಂಗಳೂರು: ಮೈಸೂರು ದಸರಾ ಸಾರಿಗೆ ಬಸ್ಸುಗಳ ಟಿಕೆಟ್ ದರವನ್ನು ಕೆ ಎಸ್ ಆರ್ ಟಿಸಿ ಹೆಚ್ಚಳ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಈ ಕೆಳಗಿನಂತೆ ಕೆ ಎಸ್ ಆರ್ ಟಿ ಸಿ ಸ್ಪಷ್ಟನೆ ನೀಡಿದೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಕೆ ಎಸ್ ಆರ್ ಟಿ ಸಿ ದಸರಾ ವಿಶೇಷ ಸಂದರ್ಭದಲ್ಲಿ ವಿಶೇಷ ಪ್ರಯಾಣ ದರ ಆಕರಣೆ ಕಳೆದ 20 ವರುಷಗಳಿಂದ ನಿರ್ದಿಷ್ಟ ದಿವಸಗಳವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಸ್ಪಷ್ಟ ಪಡಿಸಿದೆ.
ಕರ್ನಾಟಕ ಸರ್ಕಾರದ ಅಧಿಸೂಚನೆಯಂತೆ ವಿಶೇಷ ದಿನ/ಜಾತ್ರಾ/ಹಬ್ಬ ಹರಿದಿನಗಳ ರಜೆ ದಿನಗಳಂದು ಆಚರಣೆ ಮಾಡುವ ಕರಾರಸಾ ನಿಗಮದ ವಿಶೇಷ ಸಾರಿಗೆಗಳಿಗೆ ಪ್ರಯಾಣದರಗಳನ್ನು ಹೆಚ್ಚಿಸಲು ಅವಕಾಶವಿರುತ್ತದೆ ಎಂದು ತಿಳಿಸಿದೆ.
ಸದರಿ ದಿನಗಳಂದು ವಿಶೇಷ ಸಾರಿಗೆಗಳನ್ನು ಏಕಮುಖ ಸಾರಿಗೆಗಳಾಗಿ (One way) ಆಚರಣೆ ಮಾಡಿ ವಾಪಾಸ್ಸು (Return) ಬರುವಾಗ ಖಾಲಿ/ಕಡಿಮೆ ಪ್ರಯಾಣಿಕರಿಂದ ಕಾರ್ಯಾಚರಣೆ ಮಾಡಬೇಕಾಗಿರುವುದರಿಂದ ಹಾಗೂ ವಿಶೇಷ ವಾಹನಗಳನ್ನು ಇತರೇ ವಿಭಾಗಗಳಿಂದ ಪಡೆದು ಈ ಮಾರ್ಗಗಳಲ್ಲಿ ಆಚರಣೆ ಮಾಡುವುದರಿಂದ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಕಾರಣ ಪ್ರಯಾಣ ದರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದೆ.
ಅದರಂತೆ ಪ್ರತಿ ವರ್ಷ ನಡೆಯುವ ದಸರಾ ಹಬ್ಬದ ಅವಧಿಯಲ್ಲಿ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರಗಳನ್ನು ಆಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದೆ.
ಅದರಂತೆ, ಈ ವರ್ಷವು 2025ರ ದಸರಾ ಅವಧಿಯಲ್ಲಿ ದಿನಾಂಕ: 26/09/2025 ರಿಂದ 08/10/2025 ರವರೆಗೆ ಬೆಂಗಳೂರು-ಮೈಸೂರು ಮಾರ್ಗದ ವೇಗದೂತ, ತಡೆರಹಿತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಕ್ರಮವಾಗಿ ರೂ.20/- ಹಾಗೂ ರೂ.30/- ನ್ನು ಹೆಚ್ಚಿಸಿ ವಿಶೇಷ ಪ್ರಯಾಣ ದರ ಆಕರಣೆಗಳನ್ನು ಜಾರಿ ಮಾಡಿ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹೇಳಿದೆ.